ADVERTISEMENT

ನಮೋ ರಸ ಪ್ರಶ್ನೆ: ‘ಸ್ಪರ್ಧಾತ್ಮಕವಾಗಿ ಮುಂದೆ ಬರಬೇಕು’

ರೇಶ್ಮಿ ಕಾಲೇಜಿನಲ್ಲಿ ಪಿ.ಎಂ. ನಮೋ ರಸಪ್ರಶ್ನೆ; ವಿಜೇತರಿಗೆ ನಗದು ಬಹುಮಾನ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 9:22 IST
Last Updated 9 ಅಕ್ಟೋಬರ್ 2021, 9:22 IST
ಕಲಬುರಗಿಯ ರೇಶ್ಮಿ ಕಾಲೇಜಿನಲ್ಲಿ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು. ಅಂಬರೀಶ್ ರೈತನಗರ್, ಪ್ರವೀಣ ತೆಗನೂರ, ಶಿವರಾಜ ಪಾಟೀಲ ರದ್ದೇವಾಡಗಿ, ಶಿವ ಅಷ್ಠಗಿ, ಡಾ. ಅಲ್ಲಾವುದ್ದೀನ್ ಸಾಗರ್, ಪ್ರೀತಂ ಪಾಟೀಲ, ಸಂಗಮೇಶ ವಾಲಿ ಇದ್ದರು
ಕಲಬುರಗಿಯ ರೇಶ್ಮಿ ಕಾಲೇಜಿನಲ್ಲಿ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು. ಅಂಬರೀಶ್ ರೈತನಗರ್, ಪ್ರವೀಣ ತೆಗನೂರ, ಶಿವರಾಜ ಪಾಟೀಲ ರದ್ದೇವಾಡಗಿ, ಶಿವ ಅಷ್ಠಗಿ, ಡಾ. ಅಲ್ಲಾವುದ್ದೀನ್ ಸಾಗರ್, ಪ್ರೀತಂ ಪಾಟೀಲ, ಸಂಗಮೇಶ ವಾಲಿ ಇದ್ದರು   

ಕಲಬುರಗಿ: ವಿದ್ಯಾರ್ಥಿಗಳು, ಅದರಲ್ಲೂ ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳು ಸ್ಪರ್ಧಾತ್ಮಕವಾಗಿ ಹೆಚ್ಚು ಹೆಚ್ಚು ಮುಂದೆ ಬರಬೇಕು ಎಂದು ಕಲಬುರಗಿ ಗ್ರಾಮಾಂತರ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಹೇಳಿದರು.

ಜಿಲ್ಲಾ ಯುವ ಮೋರ್ಚಾ ವತಿಯಿಂದ ನಗರದ ರೇಶ್ಮಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪಿ.ಎಂ. ನಮೋ ರಸ ಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಇತರೆ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಸಾಮಾಜಿಕ ಮತ್ತು ಬೌದ್ಧಿಕ ಜ್ಞಾನ ಹೆಚ್ಚುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಮಟ್ಟದಲ್ಲಿ ಪ್ರಭಾವಿ ನಾಯಕರಾಗಿದ್ದಾರೆ. ಅವರ ಕುರಿತು ರಸ ಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಂಡು ಅವರ ಸಾಧನೆ, ಅಭಿವೃದ್ಧಿ ಮತ್ತು ಜನಪರ ಯೋಜನೆ ಬಗ್ಗೆ ವಿದ್ಯಾರ್ಥಿಗಳಿಗೆ ತಲುಪಿಸುವ ಕಾರ್ಯ ಮಾಡಿರುವ ಯುವ ಮೋರ್ಚಾ ಕೆಲಸ ಶ್ಲಾಘನೀಯ’ ಎಂದರು.

ADVERTISEMENT

ವಿಶೇಷ ಉಪನ್ಯಾಸ ನೀಡಿದ ಜೇವರ್ಗಿ ಕಾಲೇಜಿನ ಪ್ರಾಂಶುಪಾಲ ಡಾ. ಅಲ್ಲಾವುದ್ದೀನ್ ಸಾಗರ್, ‘ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬುವಂತಹ ಕಾರ್ಯಕ್ರಮಗಳು ನಡೆಯಬೇಕು. ಸರ್ಕಾರದ ಕಾರ್ಯಗಳು, ಯೋಜನೆ, ನೀತಿ ನಿಯಮಗಳ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳುವುದು ತುಂಬಾ ಅವಶ್ಯವಾಗಿದೆ’ ಎಂದು ಹೇಳಿದರು.

ಕಾರ್ಯಕ್ರಮದ ರಾಜ್ಯ ಸಂಚಾಲಕ ಅಂಬರೀಶ್ ರೈತನಗರ್ ಮಾತನಾಡಿ, ‘ಬಿಜೆಪಿ ಯುವ ಮೋರ್ಚಾ ವತಿಯಿಂದ ಪಿ.ಎಂ. ನಮೋ ರಸ ಪ್ರಶ್ನೆ ಕಾರ್ಯಕ್ರಮ ದೇಶದಾದ್ಯಂತ ಹಮ್ಮಿಕೊಂಡಿದ್ದು, ಅದೇ ರೀತಿಯಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಧಾನಿ ಮಾಡಿರುವ ಸಾಧನೆಗಳನ್ನು ವಿದ್ಯಾರ್ಥಿಗಳಿಗೆ, ಯುವ ಜನತೆಗೆ ತಲುಪಿಸುವ ಕೆಲಸ ಯುವ ಮೋರ್ಚಾ ಮಾಡುತ್ತಿದೆ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವ ಅಷ್ಠಗಿ, ಈ ರಸ ಪ್ರಶ್ನೆ ಕಾರ್ಯಕ್ರಮದ ಮೂಲಕ ಜಿಲ್ಲೆಯಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ. ಪ್ರಧಾನಿ ಅವರು ಹತ್ತನೇ ತರಗತಿಯಿಂದ ಉನ್ನತ ವ್ಯಾಸಂಗದವರೆಗಿನ ಪಿ.ಎಂ. ಸ್ಕಾಲರ್‌ಶಿಪ್ ಯೋಜನೆ ಸೇರಿದಂತೆ ಹತ್ತು ಪ್ರಮುಖ ಯೋಜನೆಗಳ ಬಗ್ಗೆ ತಿಳಿಸುವ ಕಾರ್ಯ ನಡೆದಿದೆ ಎಂದು ತಿಳಿಸಿದರು.

ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಪ್ರವೀಣ ತೆಗನೂರ, ಗ್ರಾಮೀಣ ಮಂಡಲ ಬಿಜೆಪಿ ಅಧ್ಯಕ್ಷ ಸಂಗಮೇಶ ವಾಲಿ, ಬಿಜೆಪಿ ಯುವ ಮುಖಂಡ ಗೋರಖನಾಥ್ ಶಾಖಾಪುರೆ, ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರೀತಮ್ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರು ಪಾಟೀಲ, ರೇಶ್ಮಿ ಕಾಲೇಜಿನ ಆಡಳಿತಾಧಿಕಾರಿ ಶರಣಗೌಡ ಪಾಟೀಲ ಇದ್ದರು.

ಸ್ಪರ್ಧೆಯಲ್ಲಿ 150 ಜನ ಭಾಗವಹಿಸಿದ್ದರು. ಪ್ರಥಮ ಬಹುಮಾನ ಪಡೆದರಾಘವೇಂದ್ರ ಗುತ್ತೇದಾರಗೆ ₹ 5 ಸಾವಿರ ನಗದು, ದ್ವಿತೀಯ ಬಹುಮಾನ ಪಡೆದ ಬಸವರಾಜಗೆ ₹ 4 ಸಾವಿರ ನಗದು ಹಾಗೂ ತೃತೀಯ ಬಹುಮಾನ ಪಡೆದ ಮಲ್ಲಿಕಾರ್ಜುನಗೆ ₹ 3 ಸಾವಿರ ನಗದು ಬಹುಮಾನ ಹಾಗೂ ಪ್ರಮಾಣಪತ್ರವನ್ನು ವಿತರಿಸಲಾಯಿತು.

ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ಕೊಡಲಾಯಿತು. ಶಿಕ್ಷಕರಾದ ಅಣ್ಣಾರಾಯ ವಡ್ಡಳ್ಳಿ, ಸುನೀಲ್ ದೊಡ್ಮನಿ, ಉಷಾ ಮಂತಟ್ಟಿ, ಸಂಗೀತಾ ಹಿರೇಮಠ, ರಮಾ ಅರ್ಜುಣಗಿ, ಅನಿತಾ ಕಡಗಂಚಿ ರಸಪ್ರಶ್ನೆ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.