ADVERTISEMENT

ನರೇಗಾಕ್ಕೆ ಅನುದಾನ ಕಡಿತ; ಖಂಡನೆ

ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2021, 3:15 IST
Last Updated 13 ಫೆಬ್ರುವರಿ 2021, 3:15 IST
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ಶುಕ್ರವಾರ ಕಲಬುರ್ಗಿಯ ಜಗತ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ಶುಕ್ರವಾರ ಕಲಬುರ್ಗಿಯ ಜಗತ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು   

ಕಲಬುರ್ಗಿ: ಕೋಟ್ಯಂತರ ಗ್ರಾಮೀಣ ಪ್ರದೇಶದ ಬಡವರಿಗೆ ಉದ್ಯೋಗ ನೀಡುತ್ತಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ ನೀಡಲಾಗುತ್ತಿದ್ದ ಅನುದಾನವನ್ನು ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಶೇ 41ರಷ್ಟು ಕಡಿತ ಮಾಡಿದ್ದನ್ನು ಖಂಡಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ಶುಕ್ರವಾರ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು ಕಳೆದ ಜನವರಿ 19ರವರೆಗೆ ದೇಶದಾದ್ಯಂತ 76.7 ದಶಲಕ್ಷ ಕುಟುಂಬಗಳು ಮತ್ತು 118 ದಶಲಕ್ಷ ಜನರು ನರೇಗಾ ಯೋಜನೆಯಡಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ 20 ದಶಲಕ್ಷ ಕುಟುಂಬಗಳು ಹಾಗೂ 27 ದಶಲಕ್ಷ ಜನರು ಹೆಚ್ಚುವರಿಯಾಗಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಬಜೆಟ್‌ನಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚಿನ ಹಣ ಮೀಸಲಿಡುವ ಬದಲು ₹ 71 ಸಾವಿರ ಕೋಟಿ ಮಾತ್ರ ಅನುದಾನ ಘೋಷಿಸಲಾಗಿದೆ. ಕಳೆದ ವರ್ಷ ಈ ಮೊತ್ತ ₹ 1,05,500 ಕೋಟಿ ಇತ್ತು ಎಂದರು.

ಉದ್ಯೋಗದ ಬೇಡಿಕೆಯನ್ನು ಈಡೇರಿಸಲು ಪ್ರಧಾನಮಂತ್ರಿಗಳು ಕನಿಷ್ಠ ₹ 2 ಲಕ್ಷ ಕೋಟಿಯನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ವರ್ಷಕ್ಕೆ ಕನಿಷ್ಠ 200 ಕೂಲಿ ದಿನಗಳನ್ನು ಒದಗಿಸಬೇಕು. ₹ 600 ದಿನಗೂಲಿ ನಿಗದಿ ಮಾಡಬೇಕು ಎಂದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಪ್ರಧಾನ ಕಾರ್ಯದರ್ಶಿ ಚಂದಪ್ಪಾ ಪೂಜಾರಿ, ಜಿಲ್ಲಾ ಉಪಾಧ್ಯಕ್ಷ ಮೇಘರಾಜ ಕಠಾರೆ, ಜಿಲ್ಲಾ ಸಹ ಕಾರ್ಯದರ್ಶಿ ಮಲ್ಲಮ್ಮ ಕೋಡ್ಲಿ, ಉಪಾಧ್ಯಕ್ಷೆ ಜಗದೇವಿ ಚಂದನಕೇರಾ, ಕಲಬುರ್ಗಿ ತಾಲ್ಲೂಕು ಘಟಕದ ಅಧ್ಯಕ್ಷ ರಾಮಚಂದ್ರ ಪವಾರ, ಹಾಸ್ಟೆಲ್ ನೌಕರರ ಸಂಘದ ಅಧ್ಯಕ್ಷೆ ಫಾತಿಮ ಬೇಗಂ ಫತೇಪಾಹಾಡ, ಕಚೇರಿ ಕಾರ್ಯದರ್ಶಿ ರವಿ ಸಿರ್ಸಿ, ಯಾದಮ್ಮ, ಅಂಕಿತಾ ಎಸ್., ಸುರೇಶ ದೊಡಮನಿ, ಮಲ್ಲಪ್ಪ ಪೂಜಾರಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.