ADVERTISEMENT

ನವರಾತ್ರಿ ಖರೀದಿ; ಮಾರುಕಟ್ಟೆಯಲ್ಲಿ ಜನಜಂಗುಳಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2021, 7:00 IST
Last Updated 8 ಅಕ್ಟೋಬರ್ 2021, 7:00 IST
ನವರಾತ್ರಿ ಅಂಗವಾಗಿ ಕಲಬುರಗಿಯ ಸೂಪರ್‌ ಮಾರ್ಕೆಟ್‌ನಲ್ಲಿ ಗುರುವಾರ ವ್ಯಾಪಾರ ಜೋರಾಗಿ ನಡೆಯಿತು
ನವರಾತ್ರಿ ಅಂಗವಾಗಿ ಕಲಬುರಗಿಯ ಸೂಪರ್‌ ಮಾರ್ಕೆಟ್‌ನಲ್ಲಿ ಗುರುವಾರ ವ್ಯಾಪಾರ ಜೋರಾಗಿ ನಡೆಯಿತು   

ಕಲಬುರಗಿ: ನಾಡಹಬ್ಬ ದಸರೆಗೆ ಭರ್ಜರಿ ಆರಂಭ ಸಿಕ್ಕಿತು. ಒಂಬತ್ತು ದಿನಗಳ ಕಾಲ ನಡೆಯಲಿರುವ ನವರಾತ್ರಿ ಉತ್ಸವ ಅಂಗವಾಗಿ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿದೆ. ನಗರದ ಕಣ್ಣಿ ಮಾರ್ಕೆಟ್‌, ಸೂಪರ್‌ ಮಾರ್ಕೆಟ್‌, ಶಹಾಬಜಾರ್‌, ರಾಮಮಂದಿರ ಸರ್ಕಲ್‌, ವಾಜಪೇಯಿ ಬಡಾವಣೆ ಸೇರಿದಂತೆ ಎಲ್ಲ ಕಡೆಯೂ ಕಳೆದ ಎರಡು ದಿನಗಳಿಂದ ನಿರಂತರ ಜನಜಂಗುಳಿ ಕಂಡುಬಂತು. ಹೂವು, ಹಣ್ಣು, ತೆಂಗಿನಕಾಯಿ, ಪೂಜಾ ಸಾಮಗ್ರಿಗಳ ಮಳಿಗೆಗಳಿಗೆ ಜನ ಮುಗಿಬಿದ್ದರು.

ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣ ದಸರೆಯ ಸಡಗರಕ್ಕೆ ಅಡೆತಡೆ ಉಂಟಾಗಿತ್ತು. ಆದರೆ, ಈ ಬಾರಿ ಎರಡನೇ ಅಲೆ ನಿಯಂತ್ರಣಕ್ಕೆ ಬಂದಿದ್ದು, ಹಬ್ಬಕ್ಕೆ ಹೊಸ ಹುಮ್ಮಸ್ಸು ಬಂದಿದೆ. ತಮ್ಮ ಮನೆಗಳಲ್ಲಿ ಅಂಬಾಭವಾನಿ, ಜಗದಂಬೆ, ದುರ್ಗೆ, ಕಾಳಿ, ಪಾರ್ವತಿ ಮುಂತಾಗಿ ಎಲ್ಲ ಒಂಬತ್ತು ಅವತಾರಗಳನ್ನೂ ಪ್ರತಿಷ್ಠಾಪನೆ ಮಾಡಲು ಭಕ್ತರು ಕುತೂಹಲಗೊಂಡಿದ್ದಾರೆ. ಸಹಜವಾಗಿಯೇ ಇದರಿಂದ ಪೂಜಾ ಸಾಮಗ್ರಿ ಹಾಗೂ ಆಲಂಕಾರಿಕ ವಸ್ತುಗಳ ವ್ಯಾಪಾರ ಹೆಚ್ಚಾಗಿದೆ.

ಹೂ, ಹಣ್ಣುಗಳು, ಕಬ್ಬು, ಬಾಳೆ ದಿಂಡು, ಮಹಿಳೆಯರಿಗೆ ಉಡಿ ತುಂಬುವ ಸಾಮಗ್ರಿ, ಮಣ್ಣಿನಮಡಿಕೆ, ಪರಿವಾನ, ತಟ್ಟೆ, ದೀಪಗಳು ಇವುಗಳೊಂದಿಗೆ ದಿನಸಿ ವಸ್ತುಗಳು, ಬಟ್ಟೆ, ಆಭರಣಗಳ ಖರೀದಿಯಲ್ಲೂ ಜನ ತೊಡಗಿದ್ದು ಗುರುವಾರ ಕಂಡುಬಂತು.

ADVERTISEMENT

ನವದುರ್ಗೆಗೆಯರಿಗೆ ಮಾಲೆ ಅಲಂಕಾರ ಮಾಡಲು ಹೂ ಖರೀದಿಗೂ ಮಹಿಳೆಯರು ಮುಗಿಬಿದ್ದರು.ಮಾವಿನ ಎಲೆ, ವೀಳ್ಯದೆಲೆ, ತೆಂಗಿನಕಾಯಿ, ಕರ್ಪೂರ, ‌ಊದುಬತ್ತಿ, ಲಿಂಬೆಹಣ್ಣು, ಒಣದ್ರಾಕ್ಷಿ, ಅರಿಸಿನ ಬೇರು, ಕುಂಕುಮ, ಅರಿಸಿನ ಸೇರಿದಂತೆ ಉಡಿ ತುಂಬಲು ಬೇಕಾದ ವಸ್ತುಗಳನ್ನು ಮಹಿಳೆಯರು ಖರೀದಿ ಮಾಡಿದರು.

ಇನ್ನೊಂದೆಡೆ, ನಗರದಲ್ಲಿರುವ ಎಲ್ಲ ಮಾಲ್‌ಗಳಲ್ಲೂ ಜನಜಂಗುಳಿ ಏರ್ಪಟ್ಟಿತು. ಮಾಲ್‌ ಹಾಗೂ ಸೂಪರ್‌ ಮಾರ್ಕೆಟ್‌ನ ಕಪಡಾ ಬಜಾರ್‌ ಬಟ್ಟೆ ಖರೀದಿಸುವವರ ಸಂಖ್ಯೆ ಹೆಚ್ಚಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.