ADVERTISEMENT

‘ನೂತನ ಶಿಕ್ಷಣ ನೀತಿ ಒಕ್ಕೂಟ ವ್ಯವಸ್ಥೆಗೆ ವಿರುದ್ಧ’

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 18:58 IST
Last Updated 4 ನವೆಂಬರ್ 2019, 18:58 IST

ಕಲಬುರ್ಗಿ: ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಜಾರಿಗೆ ತರಲು ಮುಂದಾಗಿರುವ ನೂತನ ಶಿಕ್ಷಣ ನೀತಿಯು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಅಖಿಲ ಭಾರತ ವಿಶ್ವವಿದ್ಯಾಲಯ ನೌಕರರ ಸಂಘಟನೆ ಟೀಕಿಸಿದೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 1986ರಲ್ಲಿ ಜಾರಿಗೆ ತಂದಿದ್ದ ಶಿಕ್ಷಣ ನೀತಿಯ ಸಾಧನೆಗಳು ಹಾಗೂ ಅದರ ನ್ಯೂನತೆಗಳನ್ನು ಸಮರ್ಪಕವಾಗಿ ಪರಾಮರ್ಶೆ ನಡೆಸದೇ ಮತ್ತೊಂದು ನೀತಿಯನ್ನು ತರಲು ಮುಂದಾಗಿದೆ. ರಾಷ್ಟ್ರೀಯ ಸಾಕ್ಷರತಾ ಮಿಷನ್ ಜಾರಿಗೆ ಬಂದು 30 ವರ್ಷ ಕಳೆದರೂ ದೇಶದಲ್ಲಿ 30 ಕೋಟಿ ಅನಕ್ಷರಸ್ಥರಾಗಿದ್ದರು. ಕಡ್ಡಾಯ ಶಿಕ್ಷಣ ನೀತಿ ಹಾಗೂ ರಾಷ್ಟ್ರೀಯ ವಿದ್ಯಾಲಯ ಫ್ರೇಮ್‌ವರ್ಕ್‌ನಂತಹ ಯೋಜನೆಗಳ ಪರಾಮರ್ಶೆ ಮಾಡಿಲ್ಲ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಆರ್‌.ಎಸ್‌.ಹೊಸಮಠ, ಎಂ.ಬಿ.ಸಜ್ಜನ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಟೀಕಿಸಿದ್ದಾರೆ.

ಹೊಸ ಶಿಕ್ಷಣ ನೀತಿಯು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ–ಶಿಕ್ಷಕೇತರರ ಕುರಿತು ಯಾವುದೇ ಪ್ರಸ್ತಾವ ಮಾಡಿಲ್ಲ. ಖಾಲಿ ಇರುವ ಹುದ್ದೆಗಳ ಭರ್ತಿ ಮಾಡುವ ಕುರಿತು ಏನನ್ನೂ ಹೇಳಿಲ್ಲ. ಬದಲಾಗಿ ಖಾಲಿ ಹುದ್ದೆಗಳನ್ನು ನಿರ್ನಾಮ ಮಾಡಿ ಕಡಿಮೆ ಅವಧಿಯ ಗುತ್ತಿಗೆ ಆಧಾರಿತ ಶಿಕ್ಷಕ–ಶಿಕ್ಷಕೇತರರ ನೇಮಕಾತಿಗಳ ಮೂಲಕ ಉನ್ನತ ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸುವ ಹುನ್ನಾರ ಅಡಗಿದೆ. ಇದು ಒಟ್ಟಾರೆ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.