ADVERTISEMENT

ಚಿಂಚೋಳಿ: ಸೌಲಭ್ಯವಂಚಿತ ಕನ್ನಡ, ಉರ್ದು ಶಾಲೆಗಳು

ಜಗನ್ನಾಥ ಡಿ.ಶೇರಿಕಾರ
Published 25 ಜನವರಿ 2022, 14:01 IST
Last Updated 25 ಜನವರಿ 2022, 14:01 IST
ಚಿಂಚೋಳಿ ಪಟ್ಟಣದ ಗಡಿ ಏರಿಯಾದಲ್ಲಿರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಶೌಚಾಲಯ ಮತ್ತು ಕಟ್ಟಡದ ನೋಟ
ಚಿಂಚೋಳಿ ಪಟ್ಟಣದ ಗಡಿ ಏರಿಯಾದಲ್ಲಿರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಶೌಚಾಲಯ ಮತ್ತು ಕಟ್ಟಡದ ನೋಟ   

ಚಿಂಚೋಳಿ: ಏಳು ದಶಕಗಳ ಚರಿತ್ರೆಯನ್ನು ತನ್ನ ಹೃದಯದಲ್ಲಿ ಹುದುಗಿಸಿಕೊಂಡಿರುವ ಪಟ್ಟಣದ ಗಡಿ ಭಾಗದಲ್ಲಿ ಇರುವ ಸರ್ಕಾರಿ ಕನ್ನಡ ಮತ್ತು ಉರ್ದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಒಂದೇ ಪ್ರಾಂಗಣದಲ್ಲಿ ನಡೆಯುತ್ತಿವೆ.

ಶಿಥಿಲ ಕಟ್ಟಡಗಳು, ತ್ಯಾಜ್ಯದ ಗುಡ್ಡೆ, ಪಾಳು ಬಿದ್ದಿರುವ ಶೌಚಾಲಯಗಳು, ಮುರಿದ ಬಾಗಿಲು, ಕಿಟಕಿಗಳು ಕಾಣ ಸಿಗುತ್ತವೆ. ಕಡು ಬಡವರ ಮಕ್ಕಳೇ ಹೆಚ್ಚಾಗಿ ದಾಖಲಾಗುವ ಈ ಶಾಲೆಯಲ್ಲಿ ಮಕ್ಕಳಿಗೆ ಕನಿಷ್ಠ ಸೌಲಭ್ಯಗಳು ದೊರೆಯದಂತಾಗಿದೆ.

ಇಲ್ಲಿ ಓದಿದವರು ಶಾಸಕರು, ವಕೀಲರು, ವೈದ್ಯರು, ಶಿಕ್ಷಕರು, ಪತ್ರಕರ್ತರು ಆಗಿದ್ದಾರೆ. ಆದರೆ, ಇಂದು ಈ ಶಾಲೆ ಸಮುದಾಯದ ಮತ್ತು ಸರ್ಕಾರದ ತೀವ್ರ ನಿರ್ಲಕ್ಷಕ್ಕೆ ಗುರಿಯಾಗಿದೆ. ಪುರಸಭೆ ಕಚೇರಿಯ ಪಕ್ಕದಲ್ಲಿಯೇ ಇರುವ ಈ ಶಾಲೆ ಅನಪೇಕ್ಷಣಿಯ ಚಟುವಟಿಕೆಗಳ ತಾಣವಾಗಿದೆ.

ADVERTISEMENT

ಸಮರ್ಪಕ ಕಟ್ಟಡ, ಶೌಚಾಲಯ, ಶುದ್ಧ ಕುಡಿವ ನೀರು, ವಿದ್ಯುತ್ ಸೌಲಭ್ಯ, ಆವರಣ ಗೋಡೆ, ಆಟದ ಮೈದಾನದಂತಹ ಕನಿಷ್ಠ ಸೌಲಭ್ಯಗಳಿಂದ ಈ ಶಾಲೆ ವಂಚಿತವಾಗಿದೆ. ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರೆ ಬರೀ ಪಾಳು ಬಿದ್ದ ಕೊಠಡಿಗಳೇ ಕಾಣಿಸುತ್ತವೆ.

ಉರ್ದು ಶಾಲೆಯಲ್ಲಿ 74 ಮಕ್ಕಳಿದ್ದಾರೆ. ಇರುವ 9 ಕೊಠಡಿಗಳಲ್ಲಿ, 4 ಕೊಠಡಿಗಳು ಮಾತ್ರ ಸುಸ್ಥಿತಿಯಲ್ಲಿವೆ. 5 ಕೊಠಡಿಗಳು ನೆಲಸಮ ಮಾಡುವ ಹಂತದಲ್ಲಿವೆ. ಉರ್ದು ಭಾಷೆಯೇ ಗೊತ್ತಿಲ್ಲದ ಕನ್ನಡ ಶಿಕ್ಷಕರೇ ಈಗ ಉರ್ದು ಶಾಲೆಯ ಮುಖ್ಯಶಿಕ್ಷಕರಾಗಿದ್ದಾರೆ. ಇಲ್ಲಿ ಇಬ್ಬರು ಪೂರ್ಣಾವಧಿ ಇಬ್ಬರು ಅತಿಥಿ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ.

‘ರಾಜ್ಯದಲ್ಲಿ ಉರ್ದು ಶಾಲೆಗಳ ಸ್ಥಿತಿ ಅಧೋಗತಿಗೆ ತಲುಪಿದೆ. ಇದರಿಂದ ಅಲ್ಪಸಂಖ್ಯಾತರು ತಮ್ಮ ಮಕ್ಕಳಿಗೆ ಉರ್ದು ಭಾಷೆಯಲ್ಲಿ ಶಿಕ್ಷಣ ಕೊಡಿಸಲು ಹಿಂದೇಟು ಹಾಕುವಂತಾಗಿದೆ. ಶಿಕ್ಷಕರ ಹುದ್ದೆಗಳು ಗಣನೀಯ ಪ್ರಮಾಣದಲ್ಲಿ ಖಾಲಿ ಇರುವುದರಿಂದ ಉರ್ದು ಶಾಲೆಗಳು ಈಗ ಮಕ್ಕಳಿಲ್ಲದೇ ಸೊರಗುತ್ತಿವೆ’ ಎನ್ನುತ್ತಾರೆ ಅಲ್ಪಸಂಖ್ಯಾತ ಸಮುದಾಯ ಮುಖಂಡ ಸಾಮಾಜಿಕ ಕಾರ್ಯಕರ್ತ ಶೇಖ್ ಭಕ್ತಿಯಾರ್ ಜಹಾಗೀರದಾರ್.

‘ಶಾಲೆಗೆ ಆವರಣಗೋಡೆ, ಗೇಟು ಇಲ್ಲ. ಶಾಲಾ ಕೊಠಡಿಗಳ ಬಾಗಿಲು ಕಿಟಕಿಗಳು ಹಾಳಾಗಿವೆ. ಶಾಲಾ ಆವರಣದಲ್ಲಿ ಬೇಡವಾದ ಚಟುವಟಿಕೆಗಳು ದಿನವೂ ನಡೆಯುತ್ತವೆ. ಅವುಗಳಿಗೆ ಕಡಿವಾಣ ಹಾಕಲು ಸಾಧ್ಯವಾಗದ ಸ್ಥಿತಿ ಇದೆ’ ಎನ್ನುತ್ತಾರೆ ಎಸ್‌ಡಿಎಂಸಿ ಅಧ್ಯಕ್ಷ ತೋಫಿಕ್ ಖುರೇಷಿ.

ಕನ್ನಡ ಮಾಧ್ಯಮ ಶಾಲೆಯ ಸಮಸ್ಯೆ ಇದಕ್ಕಿಂತಲೂ ಭಿನ್ನವಾಗಿಲ್ಲ. ಬೀಳುವ ಹಂತದಲ್ಲಿರುವ ಕಟ್ಟಡಗಳು ಆತಂಕ ಮೂಡಿಸುತ್ತವೆ. ಕನ್ನಡ ಮಾಧ್ಯಮದಲ್ಲಿಯೂ 74 ಮಕ್ಕಳು ದಾಖಲಾಗಿದ್ದಾರೆ. ಕನ್ನಡ ಮಾಧ್ಯಮಕ್ಕೆ ಪ್ರತ್ಯೇಕ ಸಿಬ್ಬಂದಿ ಮತ್ತು ಮುಖ್ಯಶಿಕ್ಷಕರಿದ್ದಾರೆ.

ಇವರು ಏನಂತಾರೆ?

*ಉರ್ದು ಶಾಲೆಯ ಹಳೆಯ ಕಟ್ಟಡ ನೆಲಸಮ ಮಾಡಿ ಸುಸಜ್ಜಿತ ಕಟ್ಟಡ ಮಂಜೂರಿಗೆ ಶಾಸಕರಿಗೆ ಮನವಿ ಸಲ್ಲಿಸುತ್ತೇನೆ
–ತೋಫಿಕ್ ಖುರೇಷಿ, ಅಧ್ಯಕ್ಷ, ಎಸ್‌ಡಿಎಂಸಿ ಉರ್ದು ಶಾಲೆ

*ಉರ್ದು ಮಾಧ್ಯಮ ಶಾಲೆಯಲ್ಲಿ ಒಂದು ಭಾಷೆಯಾಗಿ ಕನ್ನಡ ಬೋಧಿಸಲಾಗುತ್ತಿದೆ.
–ರೇವಣಸಿದ್ದಯ್ಯ ನರನಾಳ್, ಮುಖ್ಯ ಶಿಕ್ಷಕ, ಸರ್ಕಾರಿ ಉರ್ದು ಶಾಲೆ

*ಕಟ್ಟಡ ಹಾಗೂ ಶಿಕ್ಷಕರ ಕೊರತೆಯಿಂದ ಮಕ್ಕಳ ಕೊರತೆಯಿದೆ. ಸರ್ಕಾರ ಉರ್ದು ಶಾಲೆಗಳಿಗೆ ಅಗತ್ಯವಾದ ಸೌಲಭ್ಯ ಕಲ್ಪಿಸಬೇಕು ಇಲ್ಲದಿದ್ದರೆ ಶಾಲೆ ಮುಚ್ಚಬೇಕು
–ಶೇಖ್ ಭಕ್ತಿಯಾರ್ ಜಹಾಗಿರದಾರ, ಸಾಮಾಜಿಕ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.