ADVERTISEMENT

ಕೇಂದ್ರ ಬಜೆಟ್‌: ಮತ್ತೆ ‘ಕಲ್ಯಾಣ’ಮರೆತ ಕೇಂದ್ರ

ರೈಲ್ವೆ ವಿಭಾಗ ಸ್ಥಾ‍ಪನೆ, ಈ ಭಾಗದ ಅಭಿವೃದ್ಧಿಗಾಗಿ ಕೇಂದ್ರದ ನೆರವಿನ ಪ್ರಸ್ತಾಪವೂ ಇಲ್ಲ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2022, 11:34 IST
Last Updated 2 ಫೆಬ್ರುವರಿ 2022, 11:34 IST
ಅಜಯ್ ಸಿಂಗ್
ಅಜಯ್ ಸಿಂಗ್   

ಕಲಬುರಗಿ: ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್‌ನಲ್ಲಿಯೂ ಕಲ್ಯಾಣ ಕರ್ನಾಟಕಕ್ಕೆ ಪ್ರಮುಖ ಕೊಡುಗೆ ಸಿಕ್ಕಿಲ್ಲ. ಈ ಭಾಗದ ಅಭಿವೃದ್ಧಿಗೆ ಆರ್ಥಿಕ ನೆರವಿನ ಪ್ಯಾಕೇಜ್‌ ಘೋಷಿಸಬೇಕು ಎಂಬ ರಾಜ್ಯ ಸರ್ಕಾರ ಹಾಗೂ ಈ ಭಾಗದ ಜನರ ಬೇಡಿಕೆಯೂ ಈಡೇರಿಲ್ಲ.

‘ಕಲ್ಯಾಣ ಕರ್ನಾಟಕ ಪ್ರದೇಶವನ್ನು 2030ರ ವೇಳೆಗೆ ಸಮಗ್ರ ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಗುರಿ ಹಾಕಿ
ಕೊಂಡಿದ್ದು, ಇದಕ್ಕಾಗಿ ₹ 1,500
ಕೋಟಿಯಿಂದ ₹3 ಸಾವಿರ ಕೋಟಿ ಮೊತ್ತದ ವಿಶೇಷ ಅನುದಾನವನ್ನು ಐದು ವರ್ಷಗಳವರೆಗೆ ಕೊಡಬೇಕು‘ ಎಂದು ಕಳೆದ ಫೆಬ್ರುವರಿ 15ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆದಿದ್ದರು.

‘ನಂಜುಂಡಪ್ಪ ಸಮಿತಿ ಗುರುತಿಸಿದ್ದ ರಾಜ್ಯದ ಹಿಂದುಳಿದ 114 ತಾಲ್ಲೂಕುಗಳಲ್ಲಿ 29 ತಾಲ್ಲೂಕುಗಳು ಈ ಭಾಗದಲ್ಲಿವೆ. ಈ ಭಾಗದ ಜನರ ಜೀವನ ಮಟ್ಟ ಸುಧಾರಣೆ ಹಾಗೂ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರದ ವಿಶೇಷ ಅನುದಾನದ ಅವಶ್ಯಕತೆ ಇದೆ’ ಎಂದು ಉಲ್ಲೇಖಿಸಿದ್ದರು. ಈ ಭಾಗ ಹಿಂದುಳಿದಿರುವಿಕೆ ಬಗ್ಗೆ ನೀತಿ ಆಯೋಗದ ನೀಡಿದ್ದ ವರದಿಯನ್ನೇ ಈ ಪತ್ರದೊಂದಿಗೆ ಲಗತ್ತಿಸಿದ್ದರು.

ADVERTISEMENT

ಈ ಭಾಗದ ಹೋರಾಟಗಾರರು, ಜನಪ್ರತಿನಿಧಿಗಳ ಬೇಡಿಕೆಯೂ ಇದೇ ಆಗಿತ್ತು. ಆದರೆ, ಬಜೆಟ್‌ನಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ.

ನಿರ್ಮಲಾ ಅವರು ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿದ್ದರೂ ಈ ಪ್ರದೇಶ ಕಣ್ಣೆತ್ತಿ ನೋಡಿಲ್ಲ. ಬಿಜೆಪಿ ಸಂಸದರ'ಮೌನ ಬಂಗಾರ' ಎಂಬ ನೀತಿಯ ಫಲದಿಂದಾಗಿಯೇ ನಮಗೆ ಸಿಗಬೇಕಾಗಿದ್ದು ಸಿಕ್ಕಿಲ್ಲ.

- ಅಜಯ್ ಸಿಂಗ್, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ

ಸಂವಿಧಾನದ 371 (ಜೆ) ವಿಧಿ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಕೇಂದ್ರ ವಿಶೇಷ ಅನುದಾನ ನೀಡಬೇಕು ಎಂಬ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ.

– ಪ್ರಶಾಂತ ಎಸ್ ಮಾನಕರ, ಹೈದರಾಬಾದ್ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.