ADVERTISEMENT

ಗುಲಬರ್ಗಾ ವಿಶ್ವವಿದ್ಯಾಲಯ | ಏಕೈಕ ಅಧ್ಯಯನ ಕೇಂದ್ರದಲ್ಲೂ ಇಲ್ಲ ಸೌಕರ್ಯ

ಚಿಂಚೋಳಿಯಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆರೆಯಬೇಕು ಎನ್ನುವ ಜನರ ಬೇಡಿಕೆಗೆ ಸ್ಪಂದಿಸದ ಸರ್ಕಾರ

ಭೀಮಣ್ಣ ಬಾಲಯ್ಯ
Published 12 ಫೆಬ್ರುವರಿ 2025, 6:04 IST
Last Updated 12 ಫೆಬ್ರುವರಿ 2025, 6:04 IST
ಗುವಿವಿ
ಗುವಿವಿ   

ಕಲಬುರಗಿ: ರಾಯಚೂರು ಹಾಗೂ ಬೀದರ್‌ ಜಿಲ್ಲೆಗಳಲ್ಲಿ ವಿಶ್ವವಿದ್ಯಾಲಯಗಳು ಸ್ಥಾಪನೆಯಾದ ಕಾರಣ ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ಸಂಖ್ಯೆ ಒಂದಕ್ಕೆ ಕುಸಿದಿದೆ.

ಅವಿಭಜಿತ ಗುಲಬರ್ಗಾ ವಿಶ್ವವಿದ್ಯಾಲಯವು ಆಳಂದ, ಬೀದರ್‌ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಹಾಲಹಳ್ಳಿ, ಬಸವಕಲ್ಯಾಣ ಹಾಗೂ ರಾಯಚೂರು ಜಿಲ್ಲೆಯ ಯರಗೇರಾದಲ್ಲಿ ಸ್ನಾತಕೋತ್ತರ ಕೇಂದ್ರಗಳನ್ನು ಹೊಂದಿತ್ತು. ಅವುಗಳಲ್ಲಿ ಆಳಂದ ಮಾತ್ರ ಈಗ ಗುಲಬರ್ಗಾ ವಿವಿ ವ್ಯಾಪ್ತಿಗೆ ಒಳಪಡುತ್ತದೆ. ಇರುವ ಒಂದು ಕೇಂದ್ರವೂ ಮೂಲಸೌಕರ್ಯಗಳ ಕೊರತೆಯಿಂದಾಗಿ ಇದ್ದೂ ಇಲ್ಲದಂತಾಗಿದೆ.

ಆಳಂದ ಪಟ್ಟಣದಿಂದ 2 ಕಿ.ಮೀ ದೂರದಲ್ಲಿರುವ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಕಟ್ಟಡದಲ್ಲಿ ಈ ಕೇಂದ್ರ ನಡೆಯುತ್ತಿದೆ. ಇಲ್ಲಿ ಗಣಿತ, ಎಂ.ಕಾಂ, ಇಂಗ್ಲಿಷ್ ಹಾಗೂ ಕಂಪ್ಯೂಟರ್ ಸೈನ್ಸ್‌ ವಿಭಾಗಗಳಿವೆ.

ADVERTISEMENT

ವಿಶೇಷಾಧಿಕಾರಿ ಹೊರತುಪಡಿಸಿ ಉಳಿದವರು ಅತಿಥಿ ಅಧ್ಯಾಪಕರು. 17 ಜನ ಅತಿಥಿ ಅಧ್ಯಾಪಕರಿದ್ದಾರೆ. ವಿಶೇಷಾಧಿಕಾರಿ ಪ್ರೊ.ರಮೇಶ ಲಂಡನಕರ್ ಅವರು ಪ್ರಭಾರ ಕುಲಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಸತಿನಿಲಯ ಸೌಲಭ್ಯ ಇಲ್ಲ: ಕೊಠಡಿಗಳು, ಮೂಲಸೌಕರ್ಯ ಕೊರತೆ ಈ ಕೇಂದ್ರವನ್ನು ಕಾಡುತ್ತಿದೆ. ವಸತಿ ನಿಲಯ ಹಾಗೂ ಗ್ರಂಥಾಲಯ ಸೌಕರ್ಯವೂ ಇಲ್ಲ. ಅಲ್ಲದೆ, ಕೇಂದ್ರಕ್ಕೆ ವಾಹನ ಸೌಲಭ್ಯ ಇಲ್ಲ. ವಿದ್ಯಾರ್ಥಿಗಳು ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಕಾರಣ ವರ್ಷದಿಂದ ವರ್ಷಕ್ಕೆ ದಾಖಲಾತಿ ಕುಸಿಯುತ್ತಿದೆ.

ಈಡೇರದ ಚಿಂಚೋಳಿ ಜನರ ಕನಸು: ಜಿಲ್ಲಾ ಕೇಂದ್ರದಿಂದ 80 ಕಿ.ಮೀ ದೂರದಲ್ಲಿರುವ ಚಿಂಚೋಳಿಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆರೆಯಬೇಕು ಎಂಬ ಅಲ್ಲಿನ ಜನರ ಬಹುದಿನಗಳ ಬೇಡಿಕೆಗೆ ಸರ್ಕಾರ ಸ್ಪಂದಿಸುತ್ತಿಲ್ಲ.

ಚಿಂಚೋಳಿ ತಾಲ್ಲೂಕಿನಲ್ಲಿ ಮೂರು ಸರ್ಕಾರಿ ಪದವಿ ಕಾಲೇಜುಗಳಿವೆ. ಪದವಿ ಪೂರ್ಣಗೊಳಿಸುವ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಕಲಬುರಗಿಗೆ ಬರುವುದು ಅನಿವಾರ್ಯ. ಆದ ಕಾರಣ ಕೆಲ ವಿದ್ಯಾರ್ಥಿಗಳು ಪದವಿಗೆ ಶಿಕ್ಷಣ ಮೊಟಕುಗೊಳಿಸುತ್ತಾರೆ. ಚಿಂಚೋಳಿಯಲ್ಲಿ ಅಧ್ಯಯನ ಕೇಂದ್ರ ತೆರೆಯಬೇಕು ಎಂಬುದು ಜನರ ಒತ್ತಾಯ.

ವರದಿ ಸಲ್ಲಿಸಿದ್ದ ಸಮಿತಿ: ಚಿಂಚೋಳಿಯಲ್ಲಿ ಕೇಂದ್ರ ತೆರೆಯುವ ಕುರಿತು ಅಧ್ಯಯನ ನಡೆಸಲು ಪ್ರಾಧ್ಯಾಪಕ ಲಕ್ಷ್ಮಣ ರಾಜನಾಳಕರ್ ನೇತೃತ್ವದಲ್ಲಿ ವಿಶ್ವವಿದ್ಯಾಲಯ 2020ರಲ್ಲಿ ಸಮಿತಿ ರಚಿಸಿತ್ತು. ಅದು ಚಿಂಚೋಳಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸಿತ್ತು. ಕೇಂದ್ರ ತೆರೆಯಬಹುದು ಎಂದು ತಿಳಿಸಿತ್ತು. ಬಳಿಕ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಇದುವರೆಗೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಆಳಂದ ಪಟ್ಟಣ ಹೊರವಲಯದಲ್ಲಿರುವ ಸ್ನಾತಕೋತ್ತರ ಅಧ್ಯಯನ ಕೇಂದ್ರ
ಅನುದಾನ ಬಂದರೆ ಆಳಂದ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ಸೌಲಭ್ಯ ಒದಗಿಸಲಾಗುವುದು. ಚಿಂಚೋಳಿಯಲ್ಲಿ ಅಧ್ಯಯನ ಕೇಂದ್ರ ಆರಂಭಿಸಬೇಕು ಎನ್ನುವ ಬೇಡಿಕೆಯ ವಿಷಯದಲ್ಲಿ ಯಾವುದೇ ಸಕಾರಾತ್ಮಕ ಬೆಳವಣಿಗೆಗಳಾಗಿಲ್ಲ
ಪ್ರೊ.ಗೂರು ಶ್ರೀರಾಮುಲು ಪ್ರಭಾರ ಕುಲಪತಿ ಗುವಿವಿ

ಆಳಂದ ಕೇಂದ್ರದ ವಿದ್ಯಾರ್ಥಿಗಳ ಸಂಖ್ಯೆ ವಿಭಾಗ;ಮೊದಲನೇ ವರ್ಷ; ಎರಡನೇ ವರ್ಷ ಗಣಿತ;25;30 ಇಂಗ್ಲಿಷ್;14;25 ಕಂಪ್ಯೂಟರ್‌ ಸೈನ್ಸ್‌;05;08 ಎಂ.ಕಾಂ;25;30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.