
ಕಲಬುರಗಿ: ಸಾಮಾಜಿಕ ನ್ಯಾಯ ಮತ್ತು ಸಮಾನತೆ ಸಾಧಿಸಲು ಹಾಗೂ ದಲಿತ– ಆದಿವಾಸಿ, ಮಹಿಳೆ ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ಜಿಲ್ಲಾ ಘಟಕದಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಕನ್ನಡ ಭವನದಿಂದ ಆರಂಭವಾದ ಮೆರವಣಿಗೆಯು ಜಿಲ್ಲಾಡಳಿತ ಭವನದ ತನಕ ಸಾಗಿತು. ಬಳಿಕ ಜಿಲ್ಲಾಡಳಿತ ಭವನದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
‘ದೇಶದಲ್ಲಿ ಸನಾತನ ಸಾಮಾಜಿಕ ವ್ಯವಸ್ಥೆಯು ಮನುಸ್ಮೃತಿಯ ಆಧಾರದಲ್ಲಿ ವರ್ಣಾಶ್ರಮ ಪದ್ಧತಿ ಸ್ಥಿರಗೊಳಿಸಿ ಮನುಷ್ಯರನ್ನು ಮೇಲು-ಕೀಳೆಂದು ವಿಭಜಿಸಿದೆ. ಅದೇ ಪುರೋಹಿತಶಾಹಿ ವ್ಯವಸ್ಥೆಯು ಭಾರತೀಯ ಸಮಾಜವನ್ನು ಶ್ರೇಣೀಕರಿಸುತ್ತ ಜಾತಿ, ಉಪಜಾತಿಗಳೆಂದು ವಿಂಗಡಿಸಿದೆ. ದಲಿತ ಸಮುದಾಯದಿಂದ ಮಾನವ ಹಕ್ಕುಗಳನ್ನು ಕಸಿದುಕೊಂಡು ಅವರನ್ನು ಪ್ರಾಣಿಗಿಂತಲೂ ಕಡೆಯಾಗಿ ನಡೆಸಿಕೊಂಡಿದೆ. ಭಾರತದ ಇತಿಹಾಸದಲ್ಲಿ ಶತಮಾನಗಳಿಂದಲೂ ಅಸ್ಪೃಶ್ಯತೆ ಮತ್ತು ಶೋಷಣೆಗಳಿಗೆ ಬಲಿಯಾದ ದಲಿತ, ಆದಿವಾಸಿ ಮತ್ತು ಮಹಿಳಾ ಸಮುದಾಯಗಳ ಮೇಲಿನ ದಬ್ಬಾಳಿಕೆ ಇಂದಿಗೂ ನಿಂತಿಲ್ಲ’ ಎಂದು ಪ್ರತಿಭಟನಕಾರರು ಕಳವಳ ವ್ಯಕ್ತಪಡಿಸಿದರು.
‘ಭಾರತದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆ ಸ್ಥಾಪನೆಯಾದ ಮೇಲೂ ಈ ಶೋಷಣೆಗಳು, ದೌರ್ಜನ್ಯಗಳು, ದಬ್ಬಾಳಿಕೆಗಳು ನಿಲ್ಲುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ಇಂದಿಗೂ ಸಾಕಷ್ಟು ಕೋಮು ಗಲಭೆಗಳು ನಡೆದು ಮುಗ್ಧ ಜನರ ರಕ್ತ ಹರಿಯುತ್ತಿದೆ. ಇಂದಿಗೂ ಅಲ್ಪಸಂಖ್ಯಾತರು ಜನಾಂಗೀಯ ಕ್ರೌರ್ಯಕ್ಕೆ ಬಲಿಯಾಗುತ್ತಿದ್ದಾರೆ’ ಎಂದರು.
‘ದೇಶದಲ್ಲಿ ದಲಿತ, ಆದಿವಾಸಿ, ಅಲ್ಪಸಂಖ್ಯಾತ ಸಮುದಾಯದವರ ಮೇಲೆ ನಡೆಸಿರುವ ದೌರ್ಜನ್ಯ ಪ್ರಕರಣಗಳೇ ಹೆಚ್ಚಾಗಿರುವುದು ಈ ಸಮುದಾಯಗಳು ಇಂದಿಗೂ ಸಾಮಾಜಿಕ ನ್ಯಾಯದಿಂದ ವಂಚಿತರಾಗಿರುವುದಕ್ಕೆ ಸಾಕ್ಷಿ ಎನ್ನುವಂತಿದೆ. ಇಂದಿಗೂ ದಲಿತರ ಮತ್ತು ಮಹಿಳೆಯರ ವಿರುದ್ಧ ನಡೆಯುತ್ತಿರುವ ಈ ದೌರ್ಜನ್ಯಗಳಿಗೆ ಪುರೋಹಿತಶಾಹಿ ವ್ಯವಸ್ಥೆ, ಶ್ರೇಣಿಕೃತ ಸಾಮಾಜಿಕ ಪದ್ಧತಿ, ಪುರುಷ ಪ್ರಧಾನ ವ್ಯವಸ್ಥೆ ಮತ್ತು ಕೋಮುವಾದಿ ಮನಸ್ಥಿತಿಯೇ ಕಾರಣ. ಈ ಮನುಷ್ಯ ವಿರೋಧಿ ಅಂಶಗಳನ್ನು ಪ್ರತಿಪಾದಿಸುವ ಮನುಸ್ಮೃತಿ ಇದಕ್ಕೆ ಮುಖ್ಯ ಕಾರಣ. ಆದ್ದರಿಂದ ಅಧಿಕಾರದಲ್ಲಿರುವ ಸರ್ಕಾರಗಳು ಇಂಥ ಮನಸ್ಥಿತಿ ಹೋಗಲಾಡಿಸಲು ಸಂವಿಧಾನದ ಆಶಯಗಳಂತೆ ಅಧಿಕಾರ ನಡೆಸಬೇಕು’ ಎಂದು ಆಗ್ರಹಿಸಿದರು.
ಬಳಿಕ ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಮನವಿಯನ್ನು ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಮಹೇಶಕುಮಾರ ರಾಠೋಡ, ಮೌಲಾ ಮುಲ್ಲಾ, ಸಾಜಿದ್ ಅಹ್ಮದ್, ಪದ್ಮಾವತಿ ಮಾಲಿಪಾಟೀಲ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.