ಕಲಬುರಗಿ: ‘ಮಾನವೀಯ ಮೌಲ್ಯಗಳ ಅಡಿಯಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳಲು ವಿದ್ಯಾರ್ಥಿಗಳಿಗೆ ನೂತನ ವಿದ್ಯಾಲಯ ಸಂಸ್ಥೆಯು ಕಾಮಧೇನು ಕಲ್ಪವೃಕ್ಷದಂತೆ ಕಾರ್ಯ ನಿರ್ವಹಿಸುತ್ತಿದೆ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಪ್ರೊ. ಗೂರು ಶ್ರೀರಾಮುಲು ಹೇಳಿದರು.
ನಗರದ ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದ ಅನಂತರಾವ್ ದೇಶಮುಖ ಸಭಾಂಗಣದಲ್ಲಿ ನೂತನ ವಿದ್ಯಾಲಯ ಸಂಸ್ಥೆಯ ನೂತನ ವಿದ್ಯಾಲಯ ಕಲಾ, ಶ್ರೀ ಕನ್ಹಯ್ಯಲಾಲ ಮಾಲು ವಿಜ್ಞಾನ ಮತ್ತು ಡಾ. ಪಾಂಡುರಂಗರಾವ್ ಪತ್ಕಿ ವಾಣಿಜ್ಯ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದಿವಂಗತ ಶಂಕರರಾವ್ ಆಳಂದಕರ್ ಸ್ಮಾರಕ ನಗದು ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ವ್ಯಾಪಾರೀಕರಣದ ಇಂದಿನ ದಿನಗಳಲ್ಲಿ ಸಂಸ್ಥೆಯು ತಮ್ಮ ಕಾಲೇಜಿನ ಹಳೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನೇ ಮುಖ್ಯ ಅತಿಥಿಗಳಾಗಿ ಮಾಡಿರುವುದೇ ಸಾಕ್ಷಿ’ ಎಂದು ಹರ್ಷ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಅಭಿಜೀತ್ ಎ. ದೇಶಮುಖ ಮಾತನಾಡಿ, ‘ಅಂಕಗಳ ಭಾರದಲ್ಲಿ ಮೌಲ್ಯಗಳು ಕಳೆಗುಂದದಿರಲಿ. ಜೀವನ ಮೌಲ್ಯಗಳೇ ನಮ್ಮನ್ನು ಮುನ್ನಡೆಸುವ ಊರುಗೋಲು’ ಎಂದು ಹೇಳಿದರು.
ಮಹಾಗಾಂವ್ ಕ್ರಾಸ್ ಪಿಎಸ್‌ಐ ಆಶಾ ಚವ್ಹಾಣ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಕುರಿತು ಮಾಹಿತಿ ನೀಡಿದರು. ಪುಣೆಯ ಮೇಕಪ್ ಆರ್ಟಿಸ್ಟ್ ಶ್ರದ್ಧಾ ಕಮಲಾಪುರಕರ್, ಎನ್.ವಿ. ವಿಶ್ವಸ್ಥ ಮಂಡಳಿ ಕಾರ್ಯದರ್ಶಿ ರವೀಂದ್ರ ಟೆಂಗಳಿ, ಅಫಜಲಪುರದ ಸಹಾಯಕ ಪ್ರಾಧ್ಯಾಪಕ ಹಾಗೂ ಹಳೆಯ ವಿದ್ಯಾರ್ಥಿ ರಾಘವೇಂದ್ರ ದೇಶಪಾಂಡೆ ಮಾತನಾಡಿದರು.
ಪ್ರಸ್ತುತ ಸಾಲಿನಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿನ ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕಾಲೇಜಿನ ನಿರ್ದೇಶಕ ಪ್ರೊ.ಗೋವಿಂದ ಪೂಜಾರ, ಮಲ್ಲಿನಾಥ ಎಸ್.ತಳವಾರ, ರಾಘವೇಂದ್ರ ಕುಲಕರ್ಣಿ, ಪ್ರೊ. ರಾಹುಲ್ ಕಕ್ಕೇರಿ, ಅಶ್ವಿನಿ, ಚಂದ್ರಕಲಾ, ಕೃಷ್ಣ ರಾವತ್ ಉಪಸ್ಥಿತರಿದ್ದರು.
ಪ್ರಾಚಾರ್ಯ ದಯಾನಂದ ಶಾಸ್ತ್ರೀ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಷ್ಣು ಗುಂಡಗುರ್ಕಿ ನಿರೂಪಿಸಿದರು. ಕಾಶೀನಾಥ ನೂಲಕರ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.