ಶಹಾಬಾದ್: ಹೊನಗುಂಟ ಗ್ರಾಮಕ್ಕೆ ಮೂಲಸೌಕರ್ಯ ಒದಗಿಸುವಂತೆ ಗ್ರಾಮಸ್ಥರು ಹಾಗೂ ಎಐಡಿವೈಒ ಯುವಜನ ಸಂಘಟನೆ ಬುಧವಾರ ಪ್ರತಿಭಟನೆ ನಡೆಸಿದ ಪರಿಣಾಮ ತಾಲ್ಲೂಕು ಪಂಚಾಯಿತಿ ಇಒ ಮಲ್ಲಿನಾಥ ರಾವೂರ ಅವರು ಗುರುವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಬೆಳಿಗ್ಗೆಯಿಂದಲೇ ಚರಂಡಿಗಳ ಸ್ವಚ್ಛತೆಗೆ ಮುಂದಾಗಿದ್ದು, ‘ಬೀದಿ ದೀಪಗಳು ಅಳವಡಿಸಲಾಗುವುದು, ಕುಡಿಯುವ ನೀರಿಗೆ ಪ್ರತ್ಯೇಕ ಪೈಪ್‌ಲೈನ್ ಸಂಪರ್ಕ ಕೊಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ, ಶೀಘ್ರ ನೀರಿನ ವ್ಯವಸ್ಥೆ ಮಾಡಲಾಗುವುದು. ಅಲ್ಲಿವರೆಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತೇವೆ’ ಎಂದು ತಿಳಿಸಿದರು.
‘ಹಳೆಯ ಸಾರ್ವಜನಿಕ ಶೌಚಾಲಯ ನಿರುಪಯುಕ್ತವಾಗಿದ್ದು, ಆ ಸ್ಥಳದಲ್ಲಿ ಹೊಸದಾಗಿ ಶೌಚಾಲಯ ನಿರ್ಮಿಸಲು ಮೇಲಾಧಿಕಾರಿಗಳ ಜೊತೆಗೆ ಮಾತನಾಡಿ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದರು.
ಎಐಡಿವೈಒ ಜಿಲ್ಲಾ ಘಟಕ ಅಧ್ಯಕ್ಷ ಜಗನ್ನಾಥ ಎಸ್.ಎಚ್ ಮಾತನಾಡಿ, ‘ಆಶ್ವಾಸನೆ ನೀಡಿರುವ ಬೇಡಿಕೆಗಳು ಈಡೇರದಿದ್ದರೆ ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟನೆ ಮಾಡಲಾಗುವುದು’ ಎಂದರು.
ಪಿಡಿಒ ಮಹಾದೇವಪ್ಪ ದ್ಯಾಮ, ಗ್ರಾ.ಪಂ ಅಧ್ಯಕ್ಷ ಮಹೇಬುಬ್ ಹೋಟೆಲ್, ಎಐಡಿವೈಒ ಶಹಾಬಾದ್ ಕಾರ್ಯದರ್ಶಿ ರಮೇಶ ದೇವಕರ್, ದೇವರಾಜ ರಾಜೋಳ, ಶಿವು ಬುರ್ಲಿ, ಚಂದ್ರು ಮರಗೋಳ, ದೀಪಣ್ಣ ಕೋಳೆ, ಮೌನೇಶ್ ರಾಜೋಳ, ದತ್ತು ಪೂಜಾರಿ, ಶಂಕರ್ ಭಜಂತ್ರಿ, ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.