ADVERTISEMENT

ಕಲಬುರಗಿ: ಗ್ರಾಹಕನ ಕೋಪಕ್ಕೆ ಆರು ಇ–ಸ್ಕೂಟರ್‌ ಭಸ್ಮ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 14:15 IST
Last Updated 11 ಸೆಪ್ಟೆಂಬರ್ 2024, 14:15 IST
   

ಕಲಬುರಗಿ: ತನ್ನ ಇ– ಸ್ಕೂಟರ್‌ ಅನ್ನು ಸರಿಯಾಗಿ ದುರಸ್ತಿ ಮಾಡಿಲ್ಲವೆಂದು ಮಹಮದ್ ನದೀಮ್ ಹಚ್ಚಿದ ಬೆಂಕಿಗೆ ಓಲಾ ಎಲೆಕ್ಟ್ರಿಕ್‌ ವಾಹನದ ಶೋರೂಂನ ಆರು ಇ– ಸ್ಕೂಟರ್ ಸೇರಿ ₹8.15 ಲಕ್ಷ ಮೌಲ್ಯದ ಪೀಠೋಪಕರಣಗಳು ಭಸ್ಮವಾಗಿವೆ.

ಶೋರೂಂ ಮ್ಯಾನೇಜರ್ ನೀಡಿದ ದೂರಿನ ಅನ್ವಯ ನದೀಮ್ ವಿರುದ್ಧ ಚೌಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ. ನದೀಮ್ ಹಚ್ಚಿದ್ದ ಬೆಂಕಿಗೆ ಆರು ಇ–ಸ್ಕೂಟರ್, ತಾಲಾ ಒಂದೊಂದು ಲ್ಯಾಪ್‌ಟಾಪ್, ಎ.ಸಿ., ಪ್ರಿಂಟರ್ ಯಂತ್ರ, ತಲಾ ಆರು ಪ್ಯಾನ್‌ ಮತ್ತು ಕುರ್ಚಿಗಳು, ಎರಡು ಟೇಬಲ್ ಹಾಗೂ ಐದು ಸ್ಟೂಲ್‌ಗಳು ಸುಟ್ಟಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ನಡೆದಿದ್ದು ಏನು?
ಕಳೆದ ತಿಂಗಳು ನದೀಮ್ ಖರೀದಿಸಿದ್ದ ಇ–ಸ್ಕೂಟರ್‌ನ ಬೆಲ್ಟ್‌ನಿಂದ ಶಬ್ದ ಬರುತ್ತಿತ್ತು. ಎರಡ್ಮೂರು ಬಾರಿ ದುರಸ್ತಿ ಮಾಡಿ, ಹೊಸ ಮೋಟರ್ ಅಳವಡಿಸಲಾಗಿತ್ತು. ಬೆಲ್ಟ್ ಶಬ್ದ ನಿಲ್ಲುತ್ತಿಲ್ಲ ಎಂದ ನದೀಮ್, ಸೆಪ್ಟೆಂಬರ್ 10ರಂದು ಶೋರೂಂಗೆ ಬಂದು ಹೊಸ ವಾಹನ ಕೊಡುವಂತೆ ತಕರಾರು ತೆಗೆದರು. ಇಬ್ಬರು ಸಿಬ್ಬಂದಿ ಚಹಾ ಕುಡಿಯಲು ಹೊರಗೆ ಹೋಗಿದ್ದಾಗ ಮ್ಯಾನೇಜರ್‌ ಮೇಲೆ ಹಲ್ಲೆ ಮಾಡಿ, ಬಳಿಕ ಇ–ಸ್ಕೂಟರ್‌ಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT