ADVERTISEMENT

ಮತ್ತೊಮ್ಮೆ ಗೆಲುವು ಖಚಿತ; ಖರ್ಗೆ

ಪ್ರಚಾರ ನಿಮಿತ್ತ ನವದೆಹಲಿಗೆ ಪ್ರಯಾಣ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 14:16 IST
Last Updated 24 ಏಪ್ರಿಲ್ 2019, 14:16 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಕಲಬುರ್ಗಿ: ‘ಗುಲಬರ್ಗಾ’ ಲೋಕಸಭಾ ಚುನಾವಣೆಯಲ್ಲಿ ಗೆಲುವು ಖಚಿತ. 11 ಬಾರಿ ಗೆದ್ದಿದ್ದೇನೆ; ಇನ್ನೊಂದು ಬಾರಿಯೂ ಗೆಲ್ಲುತ್ತೇನೆ’ ಎಂದು ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಲ್ಲೆಲ್ಲಿ ಎಷ್ಟೆಷ್ಟು ಮತದಾನವಾಗಿದೆ, ಯಾವ ಮತಗಟ್ಟೆಗಳಲ್ಲಿ ಏನಾಗಿದೆ, ಯಾವ ಮುಖಂಡರು ಎಲ್ಲೆಲ್ಲಿ ಸುತ್ತಾಡಿದ್ದಾರೆ ಎಂಬುದನ್ನು ತಿಳಿದುಕೊಂಡಿದ್ದೇನೆ. ನನ್ನ ಲೆಕ್ಕಾಚಾರದ ಪ್ರಕಾರ ಗೆಲುವು ಸುಲಭವಾಗಿದೆ. ನಿಮ್ಮದೇನಿದೆ ಹೇಳಿ’ ಎಂದು ಕಿಚಾಯಿಸಿದರು.

‘ಕೆಲವು ಸಣ್ಣ ಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಜಿಲ್ಲೆಯಾದ್ಯಂತ ಬಹುತೇಕ ಶಾಂತಿಯುತವಾಗಿ ಮತದಾನ ನಡೆದಿದೆ. ಇಂತಹ ಘಟನೆಗಳು ನಡೆಯಬಾರದಿತ್ತು. ಆದರೆ, ನಡೆದಿವೆ. ಯಾವುದರಲ್ಲೂ ನಾವು ನೂರಕ್ಕೆ ನೂರನ್ನು ನಿರೀಕ್ಷಿಸಲು ಆಗುವುದಿಲ್ಲ’ ಎಂದರು.

ADVERTISEMENT

‘ಈ ಬಾರಿ ಶೇಕಡಾವಾರು ಮತದಾನ ಪ್ರಮಾಣ ಇನ್ನೂ ಹೆಚ್ಚಾಗಬೇಕಿತ್ತು. ಸುಶಿಕ್ಷಿತರು ಮನೆಯಿಂದ ಆಚೆ ಬಂದು ಮತ ಚಲಾಯಿಸುವುದಿಲ್ಲ. ಆದರೆ, ಹೀಗೆ, ಹಾಗೆ ಎಂದು ಭಾಷಣ ಮಾಡುತ್ತಾರೆ. ಗೆಲುವು ಸೋಲಿಗಿಂತ ಪ್ರಜಾಪ್ರಭುತ್ವದ ಉಳಿವಿಗಾಗಿ ಪ್ರತಿಯೊಬ್ಬರೂ ಮತದಾನ ಮಾಡಬೇಕು. ಯಾರಿಗಾದರೂ ಮತ ಹಾಕಲಿ, ಆದರೆ ಭಾಗವಹಿಸುವಿಕೆ ಮುಖ್ಯ. ಇದರಿಂದ ಪ್ರಜಾಪ್ರಭುತ್ವದ ಮೌಲ್ಯ ಹೆಚ್ಚುತ್ತದೆ’ ಎಂದು ಹೇಳಿದರು.

ವಿ.ವಿ ಪ್ಯಾಟ್‌ಗಳಲ್ಲಿ ದೋಷ: ‘ಜಿಲ್ಲೆಯಲ್ಲಿ 200ಕ್ಕೂ ವಿ.ವಿ ಪ್ಯಾಟ್ ಯಂತ್ರಗಳಲ್ಲಿ ದೋಷ ಕಂಡುಬಂದಿದೆ. ಇದರಿಂದ ಮತದಾನ ಪ್ರಕ್ರಿಯೆ ಒಂದರಿಂದ ಎರಡು ಗಂಟೆಯಷ್ಟು ವಿಳಂಬವಾಗಿದೆ. ಸ್ವಯಂಪ್ರೇರಿತರಾಗಿ ಮತದಾನ ಮಾಡಲು ಬಂದವರಲ್ಲಿ ಇದು ನಿರಾಸೆ ಉಂಟು ಮಾಡಿದೆ. ಇಲ್ಲವಾದಲ್ಲಿ ಇನ್ನೂ ಶೇ 4–5ರಷ್ಟು ಮತದಾನ ಹೆಚ್ಚಳವಾಗುತ್ತಿತ್ತು. ಆದ್ದರಿಂದ ಕೇಂದ್ರ ಚುನಾವಣಾ ಆಯೋಗವು ಮತಯಂತ್ರಗಳನ್ನು ಸಾಕಷ್ಟು ಬಾರಿ ಪರಿಶೀಲನೆಗೆ ಒಳಪಡಿಸಬೇಕು’ ಎಂದು ಸಲಹೆ ನೀಡಿದರು.

‘ಏ.26ರಂದು ಮಹಾರಾಷ್ಟ್ರದ ಶಿರಡಿ ಹಾಗೂ ಅಹಮದ್ ನಗರದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶಾಸಕ ಎಂ.ವೈ.ಪಾಟೀಲ, ಮುಖಂಡರಾದ ಕೆ.ಬಿ.ಶಾಣಪ್ಪ, ವಿಧಾನ ಪರಿಷತ್ ಮಾಜಿ ಸಭಾಪತಿ ಡೇವಿಡ್ ಸಿಮಿಯಾನ್ ಇದ್ದರು.

ಫೋಟೊಗೆ ಪೋಸ್ ನೀಡಿದ್ದಕ್ಕೆ ತೊಂದರೆ!

‘ಮತದಾನ ಕೇಂದ್ರದಲ್ಲಿ ನೀವೆಲ್ಲ (ಮಾಧ್ಯಮದವರು) ಹೇಳಿದ್ದಕ್ಕೆ ಫೋಟೊ ತೆಗೆಸಿಕೊಂಡೆ. ಅದರಿಂದ ನನಗೆ ತೊಂದರೆ ಆಗಿದೆ’ ಎಂದು ಮಲ್ಲಿಕಾರ್ಜುನ ಖರ್ಗೆ ನಗುತ್ತಲೇ ಹೇಳಿದರು.

ಪಕ್ಕದಲ್ಲೇ ಇದ್ದ ಕೆ.ಬಿ.ಶಾಣಪ್ಪ, ‘ನೀವು ಹೊರಗೆ ಬಂದು ಫೋಟೊ ತೆಗೆಸಿಕೊಳ್ಳಬೇಕಿತ್ತು’ ಎಂದರು.

‘ಈ ಹಿಂದೆ ಎನ್.ಧರ್ಮಸಿಂಗ್ ಜತೆ ಅವರ ಪತ್ನಿ ಮತದಾನ ಕೇಂದ್ರಕ್ಕೆ ತೆರಳಿದ್ದರು. ಬೆರಳು ಒತ್ತಲು ಸಹಾಯ ಮಾಡಿದ್ದರು. ವಯಸ್ಸಾದ ಮೇಲೆ ಪತ್ನಿಯ ಸಹಾಯ ಬೇಕಾಗುತ್ತದೆ’ ಎಂದು ಶಾಣಪ್ಪ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ‘ನನಗೆ ಅಂತಹ ಸಹಾಯವೇನೂ ಬೇಕಿಲ್ಲ’ ಎಂದಾಗ ನಗುವ ಸರದಿ ಎಲ್ಲರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.