ನಗದು
(ಐಸ್ಟೋಕ್ ಚಿತ್ರ)
ಕಲಬುರಗಿ: ಅಂಚೆ ಪತ್ರದ ಮೂಲಕ ಪ್ರೈಸ್ ಮನಿ ಬಂದಿದೆ ಎಂದು ಆಮಿಷವೊಡ್ಡಿ ಮೊಬೈಲ್ ನಂಬರ್‌ಗೆ ಕರೆ ಮಾಡಿದ್ದ ವಂಚಕರ ಜಾಲಕ್ಕೆ ಸಿಲುಕಿ ಅಣ್ಣ– ತಂಗಿ ₹40.54 ಲಕ್ಷ ಕಳೆದುಕೊಂಡಿದ್ದಾರೆ.
ನಗರದ ಕಾಲೇಜೊಂದರಲ್ಲಿನ ಬಿಕಾಂ ವಿದ್ಯಾರ್ಥಿನಿ ಮೇಘಾ ಸುಭಾಷ್ ಚಂದ್ರ ಹಾಗೂ ಸಿಆರ್‌ಪಿಎಫ್ ಮೀಸಲು ಪಡೆಯ ಕಾನ್‌ಸ್ಟೆಬಲ್ ಮಂಜುನಾಥ ಮಡಿವಾಳ ಹಣ ಕಳೆದುಕೊಂಡ ಸಂತ್ರಸ್ತರು. ಮುಂಬೈ ಮೂಲದ ಶ್ರೀಕಂಠ ಹಾಗೂ ಶ್ರೀನಿವಾಸ ಎಂಬುವವರ ವಿರುದ್ಧ ನಗರ ಸೈಬರ್, ಆರ್ಥಿಕ ಮತ್ತು ಮಾದಕವಸ್ತು ತಡೆ (ಸೆನ್) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇಘಾ ಅವರು ಆನ್‌ಲೈನ್ ಶಾಂಪಿಂಗ್ ಮಾಡುತ್ತಿದ್ದು, ಆಕೆಯ ಅಣ್ಣನಿಗೆ 2024ರ ಮೇ 8ರಂದು ಮೀಶೊ ಕಂಪನಿ ಹೆಸರಿನಲ್ಲಿ ಗಿಫ್ಟ್ ಕಾರ್ಡ್‌ನ ಅಂಚಿ ಚೀಟಿ ಬಂದಿತ್ತು. ಅದನ್ನು ತೆಗೆದು ನೋಡಿದಾಗ ₹14.75 ಲಕ್ಷ ಪ್ರೈಸ್ ಮನಿ ಎಂದಿತ್ತು.
ಪ್ರೈಸ್ ಮನಿ ಆಮಿಷಕ್ಕೆ ಒಳಗಾಗಿ, ಚೀಟಿಯಲ್ಲಿದ್ದ ಮೊಬೈಲ್ ನಂಬರ್‌ಗೆ ಮಂಜುನಾಥ ಅವರು ಕರೆ ಮಾಡಿದ್ದರು. ವಂಚಕರು ಹೇಳಿದಂತೆ ಆದಾಯ ತೆರಿಗೆ, ಜಿಎಸ್‌ಟಿ, ಟಿಡಿಎಸ್, ಆರ್‌ಬಿಐ ಫಂಡ್ ರೀಲಿಸ್ ಸೇರಿದಂತೆ ನಾನಾ ಕಾರಣಗಳಿಗೆ ವಂಚಕರು ಸೂಚಿಸಿದ ಖಾತೆಗಳಿಗೆ ಅಣ್ಣ– ತಂಗಿ ಇಬ್ಬರೂ ಹಂತ– ಹಂತವಾಗಿ ₹40.54 ಲಕ್ಷ ವರ್ಗಾವಣೆ ಮಾಡಿದ್ದಾರೆ. ಪ್ರೈಸ್ ಮನಿ ಬಾರದೆ ಇದ್ದಾಗ ತಾವು ಮೋಸ ಹೋಗಿದ್ದು ಗೊತ್ತಾಗಿ, ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸರ್ಕಾರಿ ವೈದ್ಯನಿಗೆ ₹19.63 ಲಕ್ಷ ವಂಚನೆ
ಟ್ರೇಡಿಂಗ್ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುವುದಾಗಿ ನಂಬಿಸಿ ಟ್ರೇಡಿಂಗ್ ವ್ಯವಹಾರ ಮಾಡುವ ಸರ್ಕಾರಿ ವೈದ್ಯನಿಗೆ ಸೈಬರ್ ವಂಚಕರು ₹19.63 ಲಕ್ಷ ವಂಚಿಸಿದ್ದಾರೆ.
ಸೇಡಂ ತಾಲ್ಲೂಕಿನ ಸರ್ಕಾರಿ ವೈದ್ಯ ಡಾ. ಶಶಿಕಾಂತ ರೆಡ್ಡಿ ಹಣ ಕಳೆದುಕೊಂಡವರು. ದೆಹಲಿ ಮೂಲದ ಪ್ರಿಯಾಂಕಾ ವಿಟೋರಿ ಎಂಬುವರ ವಿರುದ್ಧ ‘ಸೆನ್’ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯೂಟ್ಯೂಬ್ ಮತ್ತು ಆನ್‌ಲೈನ್‌ನಲ್ಲಿ ತರಬೇತಿ ಪಡೆದಿದ್ದ ಶಶಿಕಾಂತ, 7 ವರ್ಷಗಳಿಂದ ಆನ್‌ಲೈನ್ ಟ್ರೇಡಿಂಗ್ ಮಾಡುತ್ತಿದ್ದರು. ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಪರಿಚಯವಾದ ಪ್ರಿಯಾಂಕಾ ಜತೆಗೆ ಹಣ ಹೂಡಿಕೆ ಸಂಬಂಧ ಚಾಟ್ ಮಾಡಿದ್ದರು. ಸಿಟಿ ಗ್ರೂಪ್ ಟ್ರೇಡಿಂಗ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದಲ್ಲಿ ಶೇ 30ರಷ್ಟು ಲಾಭಾಂಶ ಕೊಡಿಸುವುದಾಗಿ ನಂಬಿಸಿದ್ದರು. ಆಕೆಯ ಮಾತು ನಂಬಿ, ಪ್ರಿಯಾಂಕಾ ಸೂಚಿಸಿದ್ದ ಬ್ಯಾಂಕ್ ಖಾತೆಗಳಿಗೆ ಹಂತ– ಹಂತವಾಗಿ ₹22 ಲಕ್ಷ ವರ್ಗಾವಣೆ ಮಾಡಿದ್ದರು. ಅದರಲ್ಲಿ ₹2.40 ಲಕ್ಷ ಮಾತ್ರ ವಾಪಸ್ ಕೊಟ್ಟು, ಉಳಿದ ₹19.63 ಲಕ್ಷ ಕೊಡದೆ ವಂಚಿಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.