ADVERTISEMENT

ಪಠ್ಯದಲ್ಲಿ ಕೇಸರೀಕರಣ: ಸಚಿವರ ರಾಜೀನಾಮೆಗೆ ಒತ್ತಾಯ

ಪ್ರಬುದ್ಧ ಭಾರತ ಸಂಘರ್ಷ ಸಮಿತಿ, ಬಂಡಾಯ ಸಾಹಿತ್ಯ ಸಂಘಟನೆಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಮೇ 2022, 15:47 IST
Last Updated 24 ಮೇ 2022, 15:47 IST
ಪ್ರಬುದ್ಧ ಭಾರತ ಸಂಘರ್ಷ ಸಮಿತಿ, ಬಂಡಾಯ ಸಾಹಿತ್ಯ ಸಂಘಟನೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು
ಪ್ರಬುದ್ಧ ಭಾರತ ಸಂಘರ್ಷ ಸಮಿತಿ, ಬಂಡಾಯ ಸಾಹಿತ್ಯ ಸಂಘಟನೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು   

ಕಲಬುರಗಿ: ಪಠ್ಯದಲ್ಲಿ ಕೇಸರೀಕರಣ ತರುವ ಪ್ರಯತ್ನಗಳು ವೇಗವಾಗಿ ನಡೆದಿದ್ದು, ಈ ಪ್ರಯತ್ನದಿಂದ ಸರ್ಕಾರ ಹಿಂದೆ ಸರಿಯಬೇಕು. ಈ ಕೃತ್ಯದ ನೈತಿಕ ಹೊಣೆ ಹೊತ್ತು ಶಿಕ್ಷಣ ಸಚಿವ ಎಚ್‌.ವಿ. ನಾಗೇಶ್ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಪ್ರಬುದ್ಧ ಭಾರತ ಸಂಘರ್ಷ ಸಮಿತಿ ಹಾಗೂ ಬಂಡಾಯ ಸಾಹಿತ್ಯ ಸಂಘಟನೆಯ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರಬುದ್ಧ ಭಾರತ ಸಂಘರ್ಷ ಸಮಿತಿಯ ಸಂಚಾಲಕಿ ಅಶ್ವಿನಿ ಮದನಕರ ಮಾತನಾಡಿ, ‘ಭಾರತ ಬಹುತ್ವ ಸಾಂಸ್ಕೃತಿಕ ಪರಂಪರೆಯುಳ್ಳ, ವಿವಿಧತೆಯಲ್ಲಿ ಏಕತೆಯನ್ನು ಕಂಡ ಸೂಫಿ ಸಂತ, ಶರಣರ, ಬುದ್ಧನ ನಾಡು, ಸರ್ವಜನಾಂಗದ ಶಾಂತಿಯ ತೋಟ. ಇಂತಹ ವೈವಿಧ್ಯಮಯ ಸಾಂಸ್ಕೃತಿಕ ಭಾಷಾ ಪಠ್ಯವನ್ನು ರೋಹಿತ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಕೇವಲ ಒಂದೂವರೆ ತಿಂಗಳಲ್ಲಿ ಎಂಟು ಜನರನ್ನು ಒಳಗೊಂಡ ಪಠ್ಯ ಪರಿಷ್ಕರಣ ಸಮಿತಿಯಿಂದ ತಯಾರಾದ ಹೊಸ ಪಠ್ಯಕ್ರಮದ ಸೇರ್ಪಡೆಯು ಮಕ್ಕಳನ್ನು ಬೌದ್ಧಿಕ ಶಿಕ್ಷಣದಿಂದ ದೂರ ಸರಿಸುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಸಮಿತಿಯ ಅಧ್ಯಕ್ಷರಾದಿಯಾಗಿ ಮೇಲ್ವರ್ಗದವರು ಮತ್ತು ಬೆಂಗಳೂರಿನವರೇ ಆಗಿರುವುದರಿಂದ ರಾಜ್ಯದ ಉಳಿದ ಭಾಗಗಳಾದ ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ ಭಾಗದ ತಜ್ಞರಿಗೆ ಅವಕಾಶ ನೀಡಿಲ್ಲ. ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ದಲಿತ ತಳಸಮುದಾಯದ, ಅಲೆಮಾರಿ ಸಮುದಾಯಗಳ ಪ್ರಾದೇಶಿ ಪ್ರಾತಿನಿಧ್ಯತೆಗೆ ಅವಕಾಶ ನೀಡದೆ ಅವರನ್ನು ನೇರವಾಗಿ ಶಿಕ್ಷಣದಿಂದ ವಂಚಿಸುವುದೇ ಈ ಪಠ್ಯ ಪರಿಷ್ಕರಣ ಸಮಿತಿಯ ಉದ್ದೇಶವಾಗಿದೆ ಎಂದು ಟೀಕಿಸಿದರು.

ADVERTISEMENT

ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಕ್ರಾಂತಿಕಾರಿ) ರಾಜ್ಯ ಸಂಚಾಲಕ ಅರ್ಜುನ್ ಭದ್ರೆ, ರಿಪಬ್ಲಿಕನ್‌ ಯೂತ್ ಫೆಡರೇಶನ್‌ನ ಸಂತೋಷ ಮೇಲ್ಮನಿ, ಹಣಮಂತ ಇಟಗಿ, ಪೂಜಾ ಸಿಂಗೆ, ಸವಿತಾ ಕಾಂಬ್ಳೆ, ಭವಾನಿಪ್ರಸಾದ, ಹಣಮಂತ ಗಂಠೆಕರ್, ನಾಗೇಶ್, ಸಾಜೀದ್ ಅಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.