ADVERTISEMENT

ಕಲಬುರಗಿ: ಸರ್ಕಾರವೇ ಕಲಾಕೃತಿಗಳನ್ನು ಖರೀದಿಸಲಿ; ಮಾನಯ್ಯ ನಾ. ಬಡಿಗೇರ

8ನೇ ವಾರ್ಷಿಕ ಕಲಾಪ್ರದರ್ಶನ ಸಮಾರೋಪ ಹಾಗೂ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 4:04 IST
Last Updated 15 ನವೆಂಬರ್ 2021, 4:04 IST
ಕಲಬುರಗಿಯಲ್ಲಿ ಭಾನುವಾರ ಕಲಾವಿದರಾದ ಹಣಮಂತ ಬಾಡದ, ವಿನೋದ ಅರ್ಜುನ, ಶ್ರೀದತ್ತ ಗಡಾದೆ, ಗಿರೀಶ ಬಿ. ಕುಲಕರ್ಣಿ, ಕಾವೇರಿ ಎಚ್‌. ಪೂಜಾರ, ಸಂತೋಷಸಿಂಗ್‌ ಹಜೇರಿ ಅವರಿಗೆ ‘ದೃಶ್ಯಬೆಳಕು ಪ್ರಶಸ್ತಿ’ ಪ್ರಶಸ್ತಿ ನೀಡಲಾಯಿತು. ಬಿ.ನಯನಾ, ನಾಗಪ್ಪ ಪ್ರದಾನಿ, ಬಸವರಾಜ ಜಾನೆ, ಪ್ರಭಾಕರ ಜೋಶಿ, ಮಾನಯ್ಯ ಬಡಿಗೇರ, ಪರಶುರಾಮ ಇದ್ದರು
ಕಲಬುರಗಿಯಲ್ಲಿ ಭಾನುವಾರ ಕಲಾವಿದರಾದ ಹಣಮಂತ ಬಾಡದ, ವಿನೋದ ಅರ್ಜುನ, ಶ್ರೀದತ್ತ ಗಡಾದೆ, ಗಿರೀಶ ಬಿ. ಕುಲಕರ್ಣಿ, ಕಾವೇರಿ ಎಚ್‌. ಪೂಜಾರ, ಸಂತೋಷಸಿಂಗ್‌ ಹಜೇರಿ ಅವರಿಗೆ ‘ದೃಶ್ಯಬೆಳಕು ಪ್ರಶಸ್ತಿ’ ಪ್ರಶಸ್ತಿ ನೀಡಲಾಯಿತು. ಬಿ.ನಯನಾ, ನಾಗಪ್ಪ ಪ್ರದಾನಿ, ಬಸವರಾಜ ಜಾನೆ, ಪ್ರಭಾಕರ ಜೋಶಿ, ಮಾನಯ್ಯ ಬಡಿಗೇರ, ಪರಶುರಾಮ ಇದ್ದರು   

ಕಲಬುರಗಿ: ‘ಭಾರತೀಯ ಸಾಂಪ್ರದಾಯಿಕ ಕಲೆ ಮತ್ತು ಕಲಾವಿದರನ್ನು ರಕ್ಷಿಸಬೇಕಿದ್ದರೆ, ಸರ್ಕಾರವೇ ಅವರ ಕಲಾಕೃತಿಗಳನ್ನು ಖರೀದಿಸಬೇಕು. ವಿಧಾನಸೌಧದಿಂದ ಹಿಡಿದು ಗ್ರಾಮ ಪಂಚಾಯಿತಿವರೆಗೂ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕುಂಚದಿಂದ ಮಾಡಿದ ಕಲಾಕೃತಿಗಳನ್ನೇ ಹಾಕಬೇಕು’ ಎಂದು ಶಿಲ್ಪಕಲಾವಿದ ಮಾನಯ್ಯ ನಾ. ಬಡಿಗೇರ ಆಗ್ರಹಿಸಿದರು.

ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಗರದ ರಂಗಾಯಣದಲ್ಲಿ ಭಾನುವಾರ ನಡೆದ 8ನೇ ವಾರ್ಷಿಕ ಕಲಾಪ್ರದರ್ಶನ ಸಮಾರೋಪ ಹಾಗೂ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕಲಾವಿದರು ಉಳಿದರೆ ಮಾತ್ರ ಕಲೆ ಉಳಿಯುತ್ತದೆ. ಕಲಾವಿದರು ಉಳಿಯಬೇಕೆಂದರೆ ಅವರ ಕಲಾಕೃತಿಗಳು ಹೆಚ್ಚು ಮಾರಾಟವಾಗಬೇಕು. ಪ್ರಿಂಟಿಂಗ್‌ ಕಲಾಕೃತಿಗಳ ಹಾವಳಿ ಹೆಚ್ಚಾದ ಮೇಲೆ ಕುಂಚದ ಕಲಾವಿದರಿಗೆ ಪ್ರೋತ್ಸಾಹ ಇಲ್ಲದಂತಾಗಿದೆ. ಒಂದು ನಿಮಿಷದಲ್ಲಿ ಸಾವಿರಾರು ಕಲಾಕೃತಿಗಳನ್ನು ಪ್ರಿಂಟ್‌ ಮಾಡಬಹುದು. ಆದರೆ, ಕುಂಚ ಕಲಾವಿದ ಒಂದು ಕಲಾಕೃತಿ ರಚಿಸಲು ತಪ‍ಸ್ಸು ಮಾಡಬೇಕು. ಆದ್ದರಿಂದ ಕುಂಚ ಕಲೆಗೆ ಸರ್ಕಾರ ಪ‍್ರೋತ್ಸಾಹಿಸಬೇಕು’ ಎಂದರು.

ADVERTISEMENT

ಚಿತ್ರಕಲಾವಿದ ಬಸವರಾಜ ಎಲ್‌. ಜಾನೆ, ‘ಬೇರೆ ಲಲಿತ ಕಲೆಗಳಿಗೆ ಸಿಕ್ಕಂಥ ಪ್ರೋತ್ಸಾಹವೇ ಚಿತ್ರಕಲೆಗೂ ಸಿಗಬೇಕಿದೆ. ಈ ದೃಷ್ಟಿಯಲ್ಲಿ ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಎಂಟು ವರ್ಷಗಳಿಂದ ಇಷ್ಟು ದೊಡ್ಡ ಮಟ್ಟದ ಕಲಾಪ್ರದರ್ಶನ ಹಾಗೂ ಪ್ರಶಸ್ತಿ ಪ್ರದಾನ ಮಾಡಿದ್ದು, ಅಭಿನಂದನೀಯ’ ಎಂದರು.

ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಮಾತನಾಡಿ, ‘ಪ್ರಶಸ್ತಿಗಳು ಯಾವಾಗ ಬೇಕಾದರೂ ಹುಟ್ಟುತ್ತವೆ, ಕಣ್ಮರೆಯಾಗುತ್ತವೆ. ಒಬ್ಬ ವ್ಯಕ್ತಿಗೆ ಪ್ರಶಸ್ತಿ ನೀಡಿದಾಗ ಅದರ ಮೌಲ್ಯ ಹೆಚ್ಚುವಂತಿರಬೇಕು’ ಎಂದರು.

ಶಿಲ್ಪಕಲಾವಿದ ನಾಗಪ್ಪ ಪ್ರದಾನಿ ಅವರಿಗೆ ‘ದೃಶ್ಯಬೆಳಕು ಗೌರವ ಪುರಸ್ಕಾರ’ ಪ್ರದಾನ ಮಾಡಲಾಯಿತು. ಕಲಾವಿದರಾದ ಕಾವೇರಿ ಎಚ್‌. ಪೂಜಾರ (ಬಾದಾಮಿ), ಶ್ರೀದತ್ತ ಗಡಾದೆ (ಪುಣೆ), ಗಿರೀಶ ಬಿ. ಕುಲಕರ್ಣಿ (ಕಲಬುರಗಿ), ವಿನೋದ ಅರ್ಜುನ (ಚಾಮರಾಜನಗರ), ಸಂತೋಷಸಿಂಗ್‌ ಹಜೇರಿ (ಬಾಗಲಕೋಟೆ), ಹಣಮಂತ ಬಾಡದ (ಯಾದಗಿರಿ) ಅವರಿಗೆ ‘ದೃಶ್ಯಬೆಳಕು ಪ್ರಶಸ್ತಿ’ ಪ್ರಶಸ್ತಿ ನೀಡಲಾಯಿತು.

ಕರ್ನಾಟಕ ಲಲಿತಕಲಾ ಅಕಾಡೆಮಿಯ ವಾರ್ಷಿಕ ಕಲಾ ಪ‍್ರದರ್ಶನದ ಪ್ರಶಸ್ತಿ ಪಡೆದ ಸಂತೋಷ ರಾಠೋಡ, ಚಂದ್ರಶೇಖರ ಬಿ. ಪಾಟೀಲ, ದಸ್ತಗಿರಿ ಮಸ್ತಾನಸಾಬ್‌, ಕೆ–ಸೆಟ್‌ ಪರೀಕ್ಷೆಯಲ್ಲಿ ಉತ್ತೀರ್ಣರಾದ ಶಿವಪ್ರಸಾದ ಎಸ್‌. ಬನ್ನಟ್ಟಿ ಅವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಪಿ.ಪರಶುರಾಮ ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯದರ್ಶಿ ಬಿ.ನಯನಾ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಕಲಾವಿದರು ಸುಗಮ ಸಂಗೀತ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.