ADVERTISEMENT

ದಾಸೋಹದಷ್ಟೇ ಮೀಸಲಾತಿಯೂ ಅನಿವಾರ್ಯ

ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 4:01 IST
Last Updated 6 ಏಪ್ರಿಲ್ 2021, 4:01 IST
ಕಲಬುರ್ಗಿಯಲ್ಲಿ ಸೋಮವಾರ ನಡೆದ ಶರಣು ಶರಣಾರ್ಥಿ ಕಾರ್ಯಕ್ರಮವನ್ನು ಬಸವಜಯ ಮೃತ್ಯುಂಜಯ ಸ್ವಾಮೀಜಿ ಉದ್ಘಾಟಿಸಿದರು
ಕಲಬುರ್ಗಿಯಲ್ಲಿ ಸೋಮವಾರ ನಡೆದ ಶರಣು ಶರಣಾರ್ಥಿ ಕಾರ್ಯಕ್ರಮವನ್ನು ಬಸವಜಯ ಮೃತ್ಯುಂಜಯ ಸ್ವಾಮೀಜಿ ಉದ್ಘಾಟಿಸಿದರು   

ಕಲಬುರ್ಗಿ: ‘ಸಮಾಜ ಸುಧಾರಣೆಗಾಗಿ 12ನೇ ಶತಮಾನದಲ್ಲಿ ಬಸವಾದಿ ಶರಣರಿಗೆ ದಾಸೋಹ ಅನಿವಾರ್ಯವಾಗಿತ್ತು. ಅದೇ ರೀತಿ ಇಂದು ಮೀಸಲಾತಿ ಅನಿವಾರ್ಯವಾಗಿದೆ’ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಸಹಕರಿಸಿದ ಜನರಿಗೆ ಕೃತಜ್ಞತೆ ಸಲ್ಲಿಸಲು ನಗರದಲ್ಲಿ ಸೋಮವಾರ ಅಖಿಲ ಭಾರತ ದೀಕ್ಷ ಪಂಚಮಸಾಲಿ ಸಮಾಜದ ಜಿಲ್ಲಾ ಘಟಕ ಆಯೋಜಿಸಿದ್ದ ‘ಶರಣು ಶರಣಾರ್ಥಿ’ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಈ ಹಿಂದೆ ಕೂಡ ಲಿಂಗಾಯತ ಸಮಾಜದವರು ಮುಖ್ಯಮಂತ್ರಿ ಆಗಿದ್ದಾರೆ. ಅವರೆಲ್ಲ ‘ಸಮಾಜವಾದಿ’ ಮಾರ್ಗದ ಮೂಲಕ ಆದವರು. ಆದರೆ, ಯಡಿಯೂರಪ್ಪ ಅವರು ತಾವು ಲಿಂಗಾಯತ ಎಂದು ಹೇಳಿಕೊಂಡೇ ಮುಖ್ಯಮಂತ್ರಿ ಆಗಿದ್ದಾರೆ. ಸಮಾಜದ ಋಣದಿಂದ ಅವರಿಗೆ ಈ ಪಟ್ಟ ಸಿಕ್ಕಿದೆ. ಹಾಗಾಗಿ, ಸಮಾಜಕ್ಕಾಗಿ ಅವರು ಏನನ್ನಾದರೂ ಕೊಡುಗೆ ನೀಡಬೇಕಲ್ಲವೇ?’ ಎಂದೂ ಸ್ವಾಮೀಜಿ ಪ್ರಶ್ನಿಸಿದರು.

ADVERTISEMENT

‘ಪಂಚಮಸಾಲಿಗರನ್ನು 2ಎ ಪಟ್ಟಿಗೆ ಸೇರಿಸುವುದಾಗಿ ಯಡಿಯೂರಪ್ಪ ಅವರು ಹಾದಿ–ಬೀದಿಯಲ್ಲೋ, ಕಾಗದ ಪತ್ರದಲ್ಲೋ ಹೇಳಿದ್ದರೆ ಅದರಿಂದ ನುಣುಚಿಕೊಳ್ಳಬಹುದಿತ್ತು. ಆದರೆ, ವಿಧಾನಸೌಧದಲ್ಲೇ ಹೇಳಿದ್ದಾರೆ. ಆ ಕಾರಣಕ್ಕಾಗಿಯೇ ನಮ್ಮ ಹೋರಾಟಕ್ಕೆ ಅರ್ಧ ಗೆಲುವು ಸಿಕ್ಕಂತಾಗಿದೆ’ ಎಂದೂ ಹೇಳಿದರು.

‘ಮೀಸಲಾತಿ ಹೋರಾಟ ಆರಂಭವಾದ ಮೇಲೆ ಲಿಂಗಾಯತರಲ್ಲಿನ ಒಳಪಂಗಡಗಳು ಮರೆತು, ಅಖಂಡ ಲಿಂಗಾಯತ ಸಂದೇಶ ರವಾಣೆಯಾಗಿದೆ. ಹಿಂದೆ ಕಾಂಗ್ರೆಸ್ಸಿನಲ್ಲಿ ಶಾಮನೂರು ಶಿವಶಂಕರಪ್ಪ, ಭೀಮಣ್ಣ ಖಂಡ್ರೆ ಅವರಷ್ಟೇ ಲಿಂಗಾಯತರು ಎಂದು ಬಿಂಬಿತರಾಗಿದ್ದರು. ಅದೇ ರೀತಿ ಬಿಜೆಪಿಯಲ್ಲಿ ಯಡಿಯೂರಪ್ಪ, ಜಗದೀಶ ಶೆಟ್ಟರ ಮಾತ್ರ ಲಿಂಗಾಯತರ ಮುಖವಾಣಿ ಆಗಿದ್ದರು. ಆದರೆ, ಈಗ ಅಖಂಡ ಲಿಂಗಾಯತರು ಎಂದರೆ ಯಾರು, ಎಷ್ಟು ಸಮರ್ಥರು ಎಂಬುದು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಅರ್ಥವಾಗಿದೆ’ ಎಂದೂ ಸ್ವಾಮೀಜಿ ವಿವರಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ,‘ನಾವು ರಾಜಕೀಯ ಮೀಸಲಾತಿ ಕೇಳುತ್ತಿಲ್ಲ. ಶೈಕ್ಷಣಿಕ ಹಾಗೂ ಉದ್ಯೋಗ ಮೀಸಲಾತಿ ಮಾತ್ರ ಕೇಳಿದ್ದೇವೆ’ ಎಂದೂ ಹೇಳಿದರು.

ಅಖಿಲ ಭಾರತ ಪಂಚಮಸಾಲಿ ಸಮಾಜದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ‘ಕೇಂದ್ರದಲ್ಲಿ ಒಬಿಸಿ, ರಾಜ್ಯದಲ್ಲಿ 2ಎ–ಗೆ ಸೇರಿಸುವವರೆಗೂ ನಾವು ವಿಶ್ರಮಿಸುವುದಿಲ್ಲ. ಮುಖ್ಯಮಂತ್ರಿಗಳು ನೀಡಿದ ಭರವಸೆಯಿಂದ ತಾತ್ಕಾಲಿಕವಾಗಿ ಹೋರಾಟ ಹಿಂದೆ ಪಡೆದಿದ್ದೇವೆ. ನಿಗದಿತ ಸಮಯದಲ್ಲಿ ಅದು ಈಡೇರದಿದ್ದರೆ ಮತ್ತೆ ಉಗ್ರ ಹೋರಾಟ ಆರಂಭವಾಗಲಿದೆ’ ಎಂದು ಎಚ್ಚರಿಸಿದರು.

ಸುಲಫಲ ಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ, ಕಾಂಗ್ರೆಸ್‌ ಮುಖಂಡ ಬಿ.ಆರ್‌. ಪಾಟೀಲ, ಬಿಜೆಪಿ ಮುಖಂಡ ಅಮರನಾಥ ಪಾಟೀಲ, ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಪಪ್ಪಾ, ಡಾ.ಸುಧಾ ಹಾಲಕಾಯಿ, ಅರುಣಕುಮಾರ ಪಾಟೀಲ ಸೇರಿದಂತೆ ಹಲವು ಮುಖಂಡರು ವೇದಿಕೆ ಮೇಲಿದ್ದರು.

’ಪಂಚಮಸಾಲಿ ಶ್ರೀಗೆ ₹ 10 ಕೋಟಿ ಆಮಿಷ’

ಕಲಬುರ್ಗಿ: ‘ಪಂಚಮಸಾಲಿ ಸಮಾಜ ವನ್ನು 2ಎಗೆ ಸೇರಿಸುವಂತೆ ನಡೆದ ಹೋರಾಟ ಕೈಬಿಡುವಂತೆ ಬಸವ ಜಯಮೃತ್ಯುಂಜಯ ಸ್ವಾಮೀಜಿಗೆ ಸಚಿವರೊಬ್ಬರು₹ 10 ಕೋಟಿಯ ಆಮಿಷ ಒಡ್ಡಿದ್ದರು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.

ಸೋಮವಾರ ಇಲ್ಲಿ ನಡೆದ ‘ಶರಣು ಶರಣಾರ್ಥಿ’ ಸಮಾರಂಭದಲ್ಲಿ ಮಾತನಾಡಿದ ಅವರು,‘₹ 10 ಕೋಟಿಯ ಬ್ಯಾಗ್‌ ಹಿಡಿದುಕೊಂಡು ಬಂದಿದ್ದ ಸಚಿವರನ್ನು ದೂರತಳ್ಳಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೋರಾಟ ಮುಂದುವರಿಸಿದರು. ನಮ್ಮೊಂದಿಗಿದ್ದ ‘ಇನ್ನೊಬ್ಬ ಸ್ವಾಮಿ’ ₹ 10 ಕೋಟಿ ಎತ್ತಿಕೊಂಡು ಹೋರಾಟ ಬಿಟ್ಟು ಮಠಕ್ಕೆ ಹೋಗಿ ಕುಳಿತಿದ್ದಾನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.