ಸೇಡಂ: ‘ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರ ಜೊತೆಗೆ ಪಾಲಕರ ಸಹಕಾರ ಅಗತ್ಯವಿದೆ’ ಎಂದು ಪ್ರಾಚಾರ್ಯೆ ಶೋಭಾರಾಣಿ ಪಾಟೀಲ ಅಭಿಪ್ರಾಯಪಟ್ಟರು.
ಪಟ್ಟಣ ಹೊರವಲಯದಲ್ಲಿರುವ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಚಾಲಿತ ವಿದ್ಯಾಮಂದಿರ ಸಿಬಿಎಸ್ಇ ಆಂಗ್ಲಮಾಧ್ಯಮ ಶಾಲೆಯಲ್ಲಿ ಈಚೆಗೆ ನಡೆದ ತಂದೆಯರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಶಾಲಾ ತರಗತಿಯಲ್ಲಿ ಪಠ್ಯಕ್ಕೆ ಸಂಬಂಧಿಸಿರುವುದರ ಜೊತೆಗೆ ಪಠ್ಯೇತರ ಚಟುವಟಿಕೆಗಳ ಬಗ್ಗೆ ಹೇಳಲಾಗುತ್ತದೆ. ತರಗತಿಯಲ್ಲಿ ಹೇಳಿರುವ ಅಂಶಗಳನ್ನು ಮಕ್ಕಳು ಪಾಲಿಸುತ್ತಿದ್ದಾರೆಯೇ ಎನ್ನುವುದರತ್ತ ಗಮನ ಹರಿಸಿ, ಅವರ ಶೈಕ್ಷಣಿಕ ಪ್ರಗತಿಯತ್ತ ಗಮನ ಹರಿಸಬೇಕು. ಮಕ್ಕಳ ಏಳಿಗೆಯಲ್ಲಿ ಶಿಕ್ಷಕರಷ್ಟೇ ತಂದೆ– ತಾಯಿ ಪಾತ್ರ ಅಮೂಲ್ಯವಾಗಿದೆ’ ಎಂದರು.
ಮುಖಂಡ ಚಂದ್ರಶೇಖರೆಡ್ಡಿ ಪಾಟೀಲ ಮಾತನಾಡಿ, ‘ಪಾಲಕರು ತಮ್ಮ ಮಕ್ಕಳನ್ನು ದೇಶದ ಭವಿಷ್ಯ ನಾಗರಿಕರನ್ನಾಗಿ ಮಾಡುವ ಉದ್ದೇಶ ಹೊಂದಿರಬೇಕು. ಜೊತೆಗೆ ಮಕ್ಕಳ ಬೆಳವಣಿಗೆ ಹಾಗೂ ಗುರಿ ಸಾಧನೆಯತ್ತ ಪ್ರೋತ್ಸಾಹಿಸಬೇಕು’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಾಲಕರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ವಿಜಯಶಾಲಿಯಾದ ಪಾಲಕರಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕರಾದ ಅನಿತಾ ಹರಸೂರ, ಜಯಶ್ರೀ, ಸುಷ್ಮಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.