ADVERTISEMENT

‘ಆರೈಕೆ ಮಾಡಲಿಲ್ಲ, ಅದಕ್ಕೇ ಡಿಸ್ಚಾರ್ಜ್ ಮಾಡಿಸಿದೆ’

‘ಪ್ರಜಾವಾಣಿ’ಯೊಂದಿಗೆ ಚಿಕಿತ್ಸೆಯ ಅವ್ಯವಸ್ಥೆ ಹಂಚಿಕೊಂಡ ಓದುಗರು; ಆಂಬುಲೆನ್ಸ್‌ನವರಿಂದ ಸುಲಿಗೆ ಆರೋಪ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2021, 6:56 IST
Last Updated 26 ಏಪ್ರಿಲ್ 2021, 6:56 IST

ಕಲಬುರ್ಗಿ: ‘ಕೊರೊನಾ ಪಾಸಿಟಿವ್ ಆಗಿರುವ ನನ್ನ ತಾಯಿಯನ್ನು ಜಿಮ್ಸ್ ಆಸ್ಪತ್ರೆಯಲ್ಲಿ ಕಷ್ಟಪಟ್ಟು ಸೇರಿಸಿದ ಬಳಿಕ ಸೂಕ್ತ ಶುಶ್ರೂಷೆ ಸಿಗಲಿಲ್ಲ. ಎರಡು ದಿನ ಅಲ್ಲಿ ಏನು ನಡೆಯುತ್ತಿದೆ ಎಂಬುದೇ ಗೊತ್ತಾಗಲಿಲ್ಲ. ಆದ್ದರಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಬಂದು ಮನೆಯಲ್ಲೇ ಹೋಮ್ ಐಸೋಲೇಷನ್‌ನಲ್ಲಿ ಇರಿಸಿದ್ದೇನೆ...’

–ಇದು ಬಸವೇಶ್ವರ ಕಾಲೊನಿಯ ನಿವೃತ್ತ ಶಿಕ್ಷಕ ಅಬ್ದುಲ್ ವಹೀದ್ ಅವರ ಬೇಸರದ ನುಡಿಗಳು.

‘ಪ್ರಜಾವಾಣಿ’ಗೆ ಕರೆಗೆ ಸ್ಪಂದಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡಿರುವ ಅಬ್ದುಲ್ ವಹೀದ್, ‘ನಮ್ಮ ಮನೆಯಲ್ಲಿ ಜ್ವರದಿಂದ ಬಳಲುತ್ತಿದ್ದ ತಂಗಿಗೆ ತಪಾಸಣೆ ಮಾಡಿಸಿದಾಗ, ಪಾಸಿಟಿವ್ ವರದಿ ಬಂತು. ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದೆವು. ನಂತರ ನನ್ನ ತಾಯಿ, ಪತ್ನಿ, ತಂಗಿಯ ಮಗಳಿಗೂ ಪಾಸಿಟಿವ್ ಬಂದಿದೆ. ತಾಯಿಯನ್ನು ಜಿಮ್ಸ್‌ ಆಸ್ಪತ್ರೆಗೆ ದಾಖಲಿಸಬೇಕೆಂದು ಅಲ್ಲಿನ ಉಸ್ತುವಾರಿ ಸಿಬ್ಬಂದಿಗೆ ಕರೆ ಮಾಡಿದಾಗ ಆಕ್ಸಿಜನ್ ಬೆಡ್ ಖಾಲಿ ಇದೆ. ಕರೆದುಕೊಂಡು ಬನ್ನಿ’ ಎಂದರು.

ADVERTISEMENT

‘ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿನ ವೈದ್ಯರು ಬೆಡ್ ಖಾಲಿ ಇಲ್ಲ ಎಂದರು. ನಾನು ಫೋನ್ ಮಾಡಿದ್ದನ್ನು ಹೇಳಿದಾಗ, ಎರಡು ಗಂಟೆ ಬಳಿಕ ದಾಖಲಿಸಿಕೊಂಡರು. ಮನೆಯಿಂದ ಜಿಮ್ಸ್‌ಗೆ ಅಂಬುಲೆನ್ಸ್‌ನವರು ₹ 3500 ವಸೂಲಿ ಮಾಡಿದರು. ಇದು ಸುಲಿಗೆಯಲ್ಲವೇ? ನಾಲ್ಕನೇ ಮಹಡಿಯಲ್ಲಿ ದಾಖಲಿಸಿದ್ದರು. ಒಂದು ಆಂಟಿಬಯಾಟಿಕ್ ಇಂಜೆಕ್ಷನ್ ಕೊಟ್ಟು ಹೋದ ವೈದ್ಯಕೀಯ ಸಿಬ್ಬಂದಿ. ಎರಡು ದಿನಗಳಾದರೂ ವಾಪಸ್‌ ತಾಯಿಯ ಆರೋಗ್ಯ ಪರೀಕ್ಷಿಸಲಿಲ್ಲ. ಹೀಗಾಗಿ, ಮನೆಯಲ್ಲೇ ಆರೈಕೆ ಮಾಡಿದರಾಯಿತು ಎಂದು ಕರೆದುಕೊಂಡು ಬಂದಿದ್ದೇನೆ’ ಎಂದರು.

‘ಕಾಳಸಂತೆಯಲ್ಲಿ ₹ 15 ಸಾವಿರಕ್ಕೆ ಇಂಜೆಕ್ಷನ್: ‘ತಾಯಿಯ ಸಮಸ್ಯೆ ಹೀಗಾದರೆ ನನ್ನ ತಂಗಿಯದ್ದು ಇನ್ನೊಂದು ಬಗೆಯದು. ನನಗೆ ಪರಿಚಯವಿರುವ ಆಸ್ಪತ್ರೆಯಲ್ಲಿ ದಿನಕ್ಕೆ ₹ 30 ಸಾವಿರ ಬೆಡ್‌ ಚಾರ್ಜ್ ನೀಡಿ ಏ.16ರಂದು ದಾಖಲಿಸಿದ್ದೇನೆ. ಏ.18ರಂದು ರೆಮ್‌ಡಿಸಿವಿರ್ ಇಂಜೆಕ್ಷನ್ ತರಲು ಹೇಳಿದರು. ಕಾಳಸಂತೆಯಲ್ಲಿ ₹ 15 ಸಾವಿರ ಕೊಟ್ಟು ತಂದು ಕೊಟ್ಟಿದ್ದೇನೆ. ನಾಲ್ಕು ದಿನಗಳ ನಂತರ ಆಕ್ಸಿಜನ್ ಪ್ರಮಾಣ 93 ಇದ್ದುದು ಮತ್ತೆ ಕೆಳಗಿಳಿಯಲು ಪ್ರಾರಂಭವಾಗಿದೆ. ಇದೀಗ ವೆಂಟಿಲೇಟರ್‌ನಲ್ಲಿದ್ದಾಳೆ’ ಎಂದರು.

ಸಾಯುವುದು ಗೊತ್ತಾದರೆ ಹೊರ ಹಾಕುತ್ತಾರೆ!

‘ಕೋವಿಡ್‌ನಿಂದ ಬಳಲುತ್ತಿರುವ ವ್ಯಕ್ತಿ ಸಾವಿಗೀಡಾಗುತ್ತಾನೆ ಎಂಬುದು ಗೊತ್ತಾದರೆ ಆಸ್ಪತ್ರೆಯ ಹೆಸರು ಕೆಡುತ್ತದೆ ಎಂದು ಹೊರಗೆ ಹಾಕುತ್ತಾರೆ’ ಎಂದು ಮಹಿಳೆಯೊಬ್ಬರು ದೂರಿದರು.

‘ಇತ್ತೀಚೆಗೆ ತಮ್ಮ ಭಾವನನ್ನು ಕೋವಿಡ್‌ನಿಂದ ಕಳೆದುಕೊಂಡಿರುವ ಅವರು, ‘ಇನ್ನು ನಾಲ್ಕು ಗಂಟೆಗಳಲ್ಲಿ ಆಕ್ಸಿಜನ್ ಖಾಲಿಯಾಗುತ್ತದೆ ಎಂಬ ನೆಪ ಹೇಳಿ ರೋಗಿಯನ್ನು ಬೇರೆ ಆಸ್ಪತ್ರೆಗೆ ಸಾಗಿಸುವಂತೆ ಒತ್ತಡ ಹೇರತೊಡಗಿದರು. ಅಂತಹ ಸಮಯದಲ್ಲಿ ನಾವಾದರೂ ಎಲ್ಲಿಗೆ ಕರೆದೊಯ್ಯಬೇಕು? ಕೊನೆಗೆ ಕಷ್ಟಪಟ್ಟು ಮತ್ತೊಂದು ಆಸ್ಪತ್ರೆಯಲ್ಲಿ ಬೆಡ್‌ ಸಿಕ್ಕಿತು. ಆದರೆ, ದಾಖಲಿಸಿದ ಎರಡು ದಿನಗಳಲ್ಲೇ ಅವರು ತೀರಿಕೊಂಡರು’ ಎಂದು ಆ ಮಹಿಳೆ ರೋದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.