ADVERTISEMENT

ಆಳಂದ | ನಾಡ ಕಚೇರಿಗೆ ಬೀಗ: ಜನರ ಪರದಾಟ

ಮಾದನ ಹಿಪ್ಪರಗಿ: ಕಟ್ಟಡದ ಬಾಡಿಗೆ ಹಣ ಪಾವತಿಗೆ ವಿಳಂಬ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 15:46 IST
Last Updated 1 ಜುಲೈ 2025, 15:46 IST
ಆಳಂದ ತಾಲ್ಲೂಕಿನ ಮಾದನಹಿಪ್ಪರಗಿ ವಲಯದ ನಾಡಕಚೇರಿಗೆ ಬೀಗ ಹಾಕಿದ್ದರಿಂದ ಗ್ರಾಮಸ್ಥರು ಹೊರಗೇ ನಿಂತಿದ್ದರು
ಆಳಂದ ತಾಲ್ಲೂಕಿನ ಮಾದನಹಿಪ್ಪರಗಿ ವಲಯದ ನಾಡಕಚೇರಿಗೆ ಬೀಗ ಹಾಕಿದ್ದರಿಂದ ಗ್ರಾಮಸ್ಥರು ಹೊರಗೇ ನಿಂತಿದ್ದರು   

ಆಳಂದ: ತಾಲ್ಲೂಕಿನ ಮಾದನಹಿಪ್ಪರಗಿ ವಲಯದ ನಾಡ ಕಚೇರಿಯ ಕಟ್ಟಡದ ಬಾಡಿಗೆ ಪಾವತಿ ಮಾಡುತ್ತಿಲ ಎಂದು ಕಟ್ಟಡದ ಮಾಲೀಕರು ಮಂಗಳವಾರ ಕಚೇರಿಗೆ ಬೀಗ ಹಾಕಿದ್ದರಿಂದ ಸಾರ್ವಜನಿಕರು ತೊಂದರೆಗೀಡಾದ ಘಟನೆ ನಡೆಯಿತು.

ಬೆಳಿಗ್ಗೆ ಸಾರ್ವಜನಿಕರು ಮತ್ತು ಕಚೇರಿಯ ಸಿಬ್ಬಂದಿ ಮತ್ತು ಉಪತಹಶೀಲ್ದಾರ್‌ರು ಕಚೇರಿಗೆ ಬಂದಾಗ ಕಚೇರಿಯ ಮುಖ್ಯ ದ್ವಾರಕ್ಕೆ ಬೇರೊಂದು ಬೀಗ ಬಿದ್ದಿದ್ದು ಕಂಡು ಬಂತು. ಈ ಕಟ್ಟಡದಲ್ಲಿ ನೆಮ್ಮದಿ ಕೇಂದ್ರ, ಆಧಾರ್‌ ಕೇಂದ್ರ, ಮತ್ತು ನಾಡ ಕಾರ್ಯಾಲಯಗಳು ಕಾರ್ಯನಿರ್ವಹಿಸುತ್ತವೆ. ವಲಯದ ಅನೇಕ ಗ್ರಾಮಗಳ ಹಲವರು ಕಂದಾಯ ಇಲಾಖೆಗೆ ಸಂಬಂಧಪಟ್ಟ ಅನೇಕ ಕೆಲಸಗಳಿಗಾಗಿ ಬಂದಿದ್ದರು.

ಹಿರೋಳ್ಳಿ, ಸರಸಂಬಾ, ಕಿಣ್ಣಿಅಬ್ಬಾಸ್, ಝಳಕಿ ಅಲ್ಲದೆ ಅನೇಕ ಗ್ರಾಮಗಳ ಜನ ಕಚೇರಿಯ ಮುಂದೆ ಜಮಾಯಿಸಿದರು. ಕೆಲವರು ಬೀಗ ಹಾಕಿದ್ದನ್ನು ನೋಡಿ ವಾಪಸ್ ಹೋದರು. ಸ್ಥಳೀಯ ಹತ್ತಿ ಕೈಮಗ್ಗ ನೇಕಾರ ಹಾಗೂ ಮಾರಾಟಗಾರ ಸಂಘದ ಕಟ್ಟಡದಲ್ಲಿ ನಾಡಕಚೇರಿ ಬಾಡಿಗೆ ಇದೆ. ಸಂಘದ ಮೂರು ಕೋಣೆ, ವರಾಂಡ ಇದೆ. ಇಲ್ಲಿನ ಒಂದು ಕೋಣೆಯಲ್ಲಿ ಆಧಾರ್ ಕೇಂದ್ರ, ಮತ್ತೊಂದು ಕೋಣೆಯಲ್ಲಿ ನೆಮ್ಮದಿ ಕೇಂದ್ರ ತೆರೆಯಲಾಗಿದೆ. ಉಪ ತಹಶೀಲ್ದಾರ್‌ ಕೋಣೆ ಇದ್ದು, ಕಳೆದ 6 ವರ್ಷದಿಂದ ಈ ಕಟ್ಟಡದಲ್ಲಿ ಬಾಡಿಗೆ ಪಡೆಯಲಾಗಿದೆ. ಇದರ ₹ 1.30 ಲಕ್ಷ ಬಾಡಿಗೆ ಹಣ ಕೊಡುತ್ತಿಲ್ಲವೆಂದು ಸಂಘದ ಅಧ್ಯಕ್ಷರು ಕಚೇರಿಗೆ ಬೀಗ ಹಾಕಿ ಹೋಗಿದ್ದಾರೆ. ಬಾಡಿಗೆ ನೀಡುವಂತೆ ಸಾಕಷ್ಟು ಸಲ ಕೇಳಿಕೊಂಡರೂ ಸಂಘಕ್ಕೆ ಬಾಡಿಗೆ ಹಣ ಸಂದಾಯ ಮಾಡಿರದಕ್ಕೆ ಬೀಗ ಹಾಕಿದ್ದೇವೆ’ ಎಂದು ಅಧ್ಯಕ್ಷ ಗುರುನಾಥ ಸೊನ್ನದ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಸ್ಥಳೀಯ ನಾಡ ಕಚೇರಿಯ ಉಪತಹಶೀಲ್ದಾರ್ ಮಲ್ಲಿಕಾರ್ಜುನ ಪಾಟೀಲ ಅವರು ಆಳಂದ ತಹಶೀಲ್ದಾರ್‌ ಅವರಿಗೆ ಮಾಹಿತಿ ನೀಡಿದರು. ತಹಶೀಲ್ದಾರ್ ಅಣ್ಣಾರಾಯ ಪಾಟೀಲರು ಒಂದು ತಿಂಗಳ ಒಳಗಾಗಿ ಕಟ್ಟಡದ ಬಾಡಿಗೆ ಕೊಟ್ಟು ಕಚೇರಿ ಖಾಲಿ ಮಾಡುತ್ತೇವೆ ಎಂದು ಲಿಖಿತವಾಗಿ ಬರೆದುಕೊಟ್ಟ ನಂತರ ಮಧ್ಯಾಹ್ನ ಮೂರು ಗಂಟೆಗೆ ಕಚೇರಿಯ ಬೀಗ ತೆಗೆಯಲಾಯಿತು.

‘ಹೋಬಳಿ ಮಟ್ಟದ ಗ್ರಾಮದಲ್ಲಿ ನಾಡಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣ ಕೈಗೊಳ್ಳಬೇಕು, ಸರ್ಕಾರಿ ಕಟ್ಟಡದ ಬಾಡಿಗೆ ಹಣ ಕಟ್ಟಲು ಅಧಿಕಾರಿಗಳು ಸತಾಯಿಸುವುದು ಸರಿಯಲ್ಲ’ ಎಂದು ಮುಖಂಡ ಶಾಂತಮಲ್ಲ ಜಮಾದಾರ ಹೇಳಿದರು.

ಸರ್ಕಾರದ ಸ್ವಂತ ಕಟ್ಟಡವನ್ನು ಗುರುತಿಸಲಾಗಿದ್ದು ದುರಸ್ತಿ ಕಾರ್ಯ ಪೂರ್ಣಗೊಂಡ ನಂತರ ನಾಡಕಚೇರಿ ಕಟ್ಟಡ ಸ್ಥಳಾಂತರಿಸಲಾಗುವುದು
ಅಣ್ಣಾರಾವ ಪಾಟೀಲ ತಹಶೀಲ್ದಾರ್‌ ಆಳಂದ
ಕೈಮಗ್ಗ ಸಂಘದ ಕಟ್ಟಡದ ಅರ್ಧ ಭಾಗ ನಾಡಕಚೇರಿಗೆ ಬಾಡಿಗೆ ನೀಡಲಾಗಿದೆ. ಕಟ್ಟಡದ ಬಾಡಿಗೆ ನೀಡಿಲ್ಲ. ಕುಶಲಕರ್ಮಿ ಸಂಘದ ಚಟುವಟಿಕೆ ಕೈಗೊಳ್ಳಲು ಆದಾಯ ಇಲ್ಲದಂತಾಗಿದೆ.
ಗುರುನಾಥ ಸೊನ್ನದ ಅಧ್ಯಕ್ಷ ಕೈಮಗ್ಗ ನೇಕಾರರ ಸಂಘ ಮಾದನ ಹಿಪ್ಪರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.