ADVERTISEMENT

ಕಲಬುರ್ಗಿ: 780ಕ್ಕೂ ಹೆಚ್ಚು ಹಂದಿಗಳ ಸ್ಥಳಾಂತರ

ಮಹಾನಗರ ಪಾಲಿಕೆಯಿಂದ ಭಾರಿ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 3:21 IST
Last Updated 4 ನವೆಂಬರ್ 2020, 3:21 IST
ಕಲಬುರ್ಗಿಯ ಬಡಾವಣೆಯೊಂದರಲ್ಲಿ ಹಂದಿಗಳನ್ನು ಹುಬ್ಬಳ್ಳಿಯಿಂದ ಬಂದ ತಂಡದವರು ಸ್ಥಳಾಂತರಿಸಿದರು
ಕಲಬುರ್ಗಿಯ ಬಡಾವಣೆಯೊಂದರಲ್ಲಿ ಹಂದಿಗಳನ್ನು ಹುಬ್ಬಳ್ಳಿಯಿಂದ ಬಂದ ತಂಡದವರು ಸ್ಥಳಾಂತರಿಸಿದರು   

ಕಲಬುರ್ಗಿ: ಮಹಾನಗರ ಪಾಲಿಕೆಯು ಮಂಗಳವಾರ ಹುಬ್ಬಳ್ಳಿ–ಧಾರವಾಡದಿಂದ ಹಂದಿ ಹಿಡಿಯುವ ತಂಡದವರ ಸಹಾಯದಿಂದ ನಗರದ ವಿವಿಧ ಬಡಾವಣೆಗಲ್ಲಿನ ಸುಮಾರು 780ಕ್ಕೂ ಹೆಚ್ಚು ಹಂದಿಗಳನ್ನು ಹಿಡಿದು ಸ್ಥಳಾಂತರಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಸ್ಬೇಹಲ್ ಸುಧಾಕರ ಲೋಖಂಡೆ ತಿಳಿಸಿದ್ದಾರೆ.

ಜಯನಗರ, ಪೂಜಾ ಕಾಲೊನಿ, ಓಂ ನಗರ, ಓಕಳಿ ಕ್ಯಾಂಪ್, ಸ್ವಸ್ತಿಕ್ ನಗರ, ತಿಲಕ್ ನಗರ, ಪ್ರಶಾಂತ್ ಕಾಲೊನಿ, ಅಣೆಮ್ಮ ನಗರ, ಗಣೇಶ ನಗರ, ಅಕ್ಬರ್ ಬಾಗ್ ಹಾಗೂ ರೆಹಮಾನ್ ಕಾಲೊನಿ ಬಡಾವಣೆಗಳಲ್ಲಿ 20 ಜನರನ್ನೊಳಗೊಂಡ ಹಂದಿ ಹಿಡಿಯುವ ತಂಡದೊಂದಿಗೆ ಕಾರ್ಯಾಚರಣೆ ನಡೆಸಿ ಹಂದಿಗಳನ್ನು ಸ್ಥಳಾಂತರಿಸಲಾಗಿದೆ.

ಹಂದಿ ಹಾವಳಿಯ ಕುರಿತು ದಿನನಿತ್ಯ ಹಲವಾರು ದೂರುಗಳು ಬಂರುತ್ತಿವೆ. ಹಂದಿ ಜ್ವರ, ಡೆಂಗಿ, ಮಲೇರಿಯಾ ಮತ್ತಿತರ ರೋಗಗಳು ಸಾರ್ವಜನಿಕರಲ್ಲಿ ಹರಡದಂತೆ ನೋಡಿಕೊಳ್ಳಲು ಮುಂಜಾಗ್ರತಾ ಕ್ರಮವಾಗಿ ಹಂದಿಗಳನ್ನು ಹಿಡಿದು ಸ್ಥಳಾಂತರಿಸಲಾಗುತ್ತಿದೆ.

ADVERTISEMENT

ಈ ಹಿಂದೆ ನಗರದ ಹಂದಿ ಮಾಲೀಕರೊಂದಿಗೆ ಸಭೆಯನ್ನು ನಡೆಸಿ ಕೆಲವು ಹಂದಿ ಮಾಲೀಕರ ಸಹಯೋಗದೊಂದಿಗೆ ಕಳೆದ ಸೆಪ್ಟೆಂಬರ್ 9ರಿಂದ 14ರವರೆಗೆ ನಗರದ ವಿವಿಧ ಬಡಾವಣೆಗಳಲ್ಲಿ ಕಾರ್ಯಾಚರಣೆ ನಡೆಸಿ ಸುಮಾರು 1800ಕ್ಕೂ ಹೆಚ್ಚು ಹಂದಿಗಳನ್ನು ಹಿಡಿದು ಸ್ಥಳಾಂತರಿಸಲಾಗಿದೆ. ಹಂದಿ ಹಾವಳಿ ಕುರಿತು ಸಾರ್ವಜನಿಕರಿಂದ ಹೆಚ್ಚಾಗಿ ದೂರುಗಳು ಬಂದಿರುವುದರಿಂದ ಹಾಗೂ ಇನ್ನು ಕೆಲ ಪ್ರದೇಶದಲ್ಲಿ ಹಂದಿ ಮಾಲೀಕರು ಹಂದಿಗಳನ್ನು ಸ್ಥಳಾಂತರಿಸಲು ಅಸಹಕಾರ ತೋರುತ್ತಿರುವುದರಿಂದ ಹುಬ್ಬಳ್ಳಿಯಿಂದ ಹಂದಿ ಹಿಡಿಯುವ ತಂಡವನ್ನು ಸೆ 19ರಂದು ಹಂದಿಗಳನ್ನು ಹಿಡಿದು ಬೇರೆ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಹಂದಿಗಳ ಸ್ಥಳಾಂತರಕ್ಕೆ ಸೂಚನೆ: ನಗರದಲ್ಲಿನ ಹಂದಿ ಮಾಲೀಕರು ಸ್ವಯಂ ಪ್ರೇರಿತವಾಗಿ ನವೆಂಬರ್ 5ರೊಳಗಾಗಿ ಇನ್ನುಳಿದ ಕೆಲ ಬಡಾವಣೆಗಳಲ್ಲಿನ ಹಂದಿಗಳನ್ನು ಹಿಡಿದು ನಗರ ಪ್ರದೇಶದಿಂದ ಹೊರಗಡೆ ಸ್ಥಳಾಂತರಿಸಬೇಕೆಂದು ಹಂದಿಗಳ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ. ಇಲ್ಲದಿದ್ದಲ್ಲಿ ಹಂದಿ ಮಾಲೀಕರ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿಯೂ ನಗರದಲ್ಲಿನ ಹಂದಿ ಹಾವಳಿಯನ್ನು ನಿಯಂತ್ರಿಸಲು ಈ ತರಹದ ಕಾರ್ಯಕ್ರಮವನ್ನು ರೂಪಿಸಲಾಗುತ್ತದೆ ಎಂದು ಲೋಖಂಡೆ ತಿಳಿಸಿದ್ದಾರೆ.

ಮಹಾನಗರ ಪಾಲಿಕೆಯ ಹಿರಿಯ ಪಶುವೈದ್ಯಾಧಿಕಾರಿ, ಪರಿಸರ ಎಂಜಿನಿಯರ್‌, ನೈರ್ಮಲ್ಯ ನಿರೀಕ್ಷಕರು ಮತ್ತು ಪಶು ವೈದ್ಯಕೀಯ ಪರೀಕ್ಷಕರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.