ADVERTISEMENT

ಕಲಬುರಗಿ | ಪಿ.ಎಂ.ಆವಾಸ್ ಯೋಜನೆ: ದಾಖಲೆ ಸಲ್ಲಿಕೆಗೆ ಸಿಇಒ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2024, 14:03 IST
Last Updated 13 ಸೆಪ್ಟೆಂಬರ್ 2024, 14:03 IST
ಭಂವರ್‌ ಸಿಂಗ್ ಮೀನಾ
ಭಂವರ್‌ ಸಿಂಗ್ ಮೀನಾ   

ಕಲಬುರಗಿ: ಪ್ರಧಾನಮಂತ್ರಿ ಆವಾಸ್ ಯೋಜನೆ(ಗ್ರಾಮೀಣ) ಅಡಿಯಲ್ಲಿ 2024–25ನೇ ಸಾಲಿಗೆ ಕಲಬುರಗಿ ಜಿಲ್ಲೆಗೆ 13,175 ಮನೆಗಳನ್ನು ಜಿಪಿಎಸ್ ಮಾಡಲು ಗುರಿ ಹೊಂದಲಾಗಿದೆ. ಆದ್ಯತಾ ಪಟ್ಟಿಯಲ್ಲಿರುವ ಫಲಾನುಭವಿಗಳು ಸೆ.15ರೊಳಗೆ ಅಗತ್ಯ ದಾಖಲೆಗಳನ್ನು ಗ್ರಾಮ ಪಂಚಾಯಿತಿಗೆ ಸಲ್ಲಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ ಸೂಚಿಸಿದ್ದಾರೆ.

ಜಿಲ್ಲೆಯ 13,175 ಮನೆಗಳ ಫಲಾನುಭವಿಗಳ ಪಟ್ಟಿ ಈಗಾಗಲೇ ಗ್ರಾಮ ಪಂಚಾಯಿತಿಯಲ್ಲಿ ಲಭ್ಯವಿದ್ದು, ಇದನ್ನು ಖಾತ್ರಿಪಡಿಸಿಕೊಂಡು ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಸಂಖ್ಯೆ, ಜಾಬ್ ಕಾರ್ಡ್, ಪಡಿತರ ಚೀಟಿ ಹಾಗೂ ಇತರೆ ಅಗತ್ಯ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

ಅದರಂತೆ ಪಿಡಿಒ, ಟಿಎನ್‌ಒ ಹಾಗೂ ಡಿಇಒ ಅವರು ಸೆ.12ರಿಂದ ಸೆ.15ರ ವರೆಗೆ ರಜೆ ದಿನಗಳು ಸೇರಿದಂತೆ ಫಲಾನುಭವಿಗಳು ನೀಡುವ ಆಧಾರ್‌ ಕಾರ್ಡ್‌, ಬ್ಯಾಂಕ್ ಪಾಸ್‌ಬುಕ್, ಮೊಬೈಲ್ ಸಂಖ್ಯೆ, ಜಿಪಿಎಸ್ ಫೋಟೋಗಳನ್ನು ಕಡ್ಡಾಯವಾಗಿ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಬೇಕು.

ADVERTISEMENT

ಈ ಸಂಬಂಧ ಫಲಾನುಭವಿಗಳಿಂದ ಏನೇ ದೂರು, ಆಕ್ಷೇಪಣೆಗಳಿದಲ್ಲಿ ಸಂಬಂಧಪಟ್ಟ ತಾಲ್ಲೂಕು ಪಂಚಾಯಿತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ಸಲ್ಲಿಸಿ ಪರಿಹರಿಸಸಿಕೊಳ್ಳಬೇಕೆಂದು ತಿಳಿಸಲಾಗಿದೆ.

ಕೇಂದ್ರ ಸರ್ಕಾರದಿಂದ ಪ್ರಸಕ್ತ ಸಾಲಿಗೆ ರಾಜ್ಯಕ್ಕೆ 2,26,175 ಮನೆಗಳ ವಿತರಣೆ ಗುರಿ ಮಂಜೂರು ಮಾಡಿದ್ದು, ಪ್ರಧಾನಮಂತ್ರಿಗಳು ಸೆ.15ರಂದು ರಾಜ್ಯದ 1 ಲಕ್ಷ ಮನೆಗಳಿಗೆ ಏಕಕಾಲಕ್ಕೆ ಮೊದಲ ಕಂತಿನ ಅನುದಾನ ಬಿಡುಗಡೆ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.