ADVERTISEMENT

ಕಲಬುರಗಿ | ಬಾಲಕಿ ಮೇಲೆ ಅತ್ಯಾಚಾರ: ಚಿಕ್ಕಪ್ಪನಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 10 ಮೇ 2025, 4:44 IST
Last Updated 10 ಮೇ 2025, 4:44 IST
<div class="paragraphs"><p>ಜೈಲು (ಪ್ರಾತಿನಿಧಿಕ ಚಿತ್ರ)</p></div>

ಜೈಲು (ಪ್ರಾತಿನಿಧಿಕ ಚಿತ್ರ)

   

ಕಲಬುರಗಿ: ಹತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾಗಿದ್ದರಿಂದ ತಾಲ್ಲೂಕಿನ ತಾಂಡಾವೊಂದರ ನಿವಾಸಿ ಸೋನು ತಾರಾಸಿಂಗ್ ಜಾಧವ್ (19) ಎಂಬಾತನಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ವಿಶೇಷ ಪೋಕ್ಸೊ) ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ₹ 30 ಸಾವಿರ ದಂಡ ವಿಧಿಸಿದೆ.

‘2024ರ ಆಗಸ್ಟ್ 9ರಂದು ಮನೆಯಲ್ಲಿ ಜೋಕಾಲಿ ಆಡುತ್ತಿದ್ದ ಬಾಲಕಿಯನ್ನು ‘ಗಿಡಗಳಿಗೆ ನೀರು ಹಾಕೋಣ’ ಎಂದು ಪುಸಲಾಯಿಸಿ ಆಕೆಯ ಚಿಕ್ಕಪ್ಪನಾದ ಸೋನು ಮನೆಯ ಮೇಲಿನ ಕೊಠಡಿಗೆ ಕರೆದೊಯ್ದು ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರ ಎಸಗಿದ್ದಾನೆ’ ಎಂದು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ADVERTISEMENT

‘ನನ್ನ ಮಗನಿಂದ ತಪ್ಪಾಗಿದೆ. ಬಾಲಕಿಗೆ ತಾಳಿ ಕಟ್ಟಿ ಕರೆದುಕೊಂಡು ಹೋಗಲು ತಯಾರಿದ್ದೇವೆ’ ಎಂದು ಸೋನು ಪೋಷಕರು ಹೇಳಿದ್ದರು. ‘ಸೋನುಗೆ ಬಾಲಕಿ ಅಣ್ಣನ ಮಗಳಾಗಬೇಕು. ಆತನೊಂದಿಗೆ ಹೇಗೆ ಮದುವೆ ಮಾಡಲು ಸಾಧ್ಯ’ ಎಂದು ಪ್ರಶ್ನಿಸಿದ್ದ ಬಾಲಕಿಯ ಪೋಷಕರು ದೂರು ದಾಖಲಿಸಿದ್ದರು.

ಪಿಎಸ್‌ಐ ರೇಣುಕಾದೇವಿ ಹಾಗೂ ಪಿಐ ಸುಶೀಲಕುಮಾರ್ ಅವರು ಸೋನು ಜಾಧವ್ ವಿರುದ್ಧ ಬಿಎನ್‌ಎಸ್ ಕಾಯ್ದೆ ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಅವರು, ಅಪರಾಧಿಗೆ ಶಿಕ್ಷೆ ವಿಧಿಸಿದ್ದಾರೆ. ದಂಡದ ಮೊತ್ತವನ್ನು ಪಾವತಿಸಲು ವಿಫಲನಾದರೆ ಆರು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಸಂತ್ರಸ್ತ ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ₹ 7 ಲಕ್ಷ ಪರಿಹಾರವನ್ನು ಒಂದು ತಿಂಗಳ ಒಳಗೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ಬಿ. ತುಪ್ಪದ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.