ADVERTISEMENT

ಕಲಬುರ್ಗಿ: ಮಾಸ್ಕ್ ಹಾಕದವರಿಗೆ ₹ 2.19 ಲಕ್ಷ ದಂಡ

ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು; ಕಠಿಣ ಕ್ರಮಕ್ಕೆ ಮುಂದಾದ ಪೊಲೀಸರು

ಮನೋಜ ಕುಮಾರ್ ಗುದ್ದಿ
Published 16 ಮಾರ್ಚ್ 2021, 4:17 IST
Last Updated 16 ಮಾರ್ಚ್ 2021, 4:17 IST
ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಪಾಲಿಕೆಯ ಸಿಬ್ಬಂದಿ ಮುಖಗವಸು ಹಾಕದ ವ್ಯಕ್ತಿಗೆ ಕಲಬುರ್ಗಿಯ ಎಸ್‌ವಿಪಿ ವೃತ್ತದಲ್ಲಿ ಸೋಮವಾರ ದಂಡ ವಿಧಿಸಲು ಮುಂದಾದ ಸಂದರ್ಭದಲ್ಲಿ ದಂಡ ವಿಧಿಸದಂತೆ ಕೈಮುಗಿದು ಕೇಳಿಕೊಂಡ ನೋಟ
ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಪಾಲಿಕೆಯ ಸಿಬ್ಬಂದಿ ಮುಖಗವಸು ಹಾಕದ ವ್ಯಕ್ತಿಗೆ ಕಲಬುರ್ಗಿಯ ಎಸ್‌ವಿಪಿ ವೃತ್ತದಲ್ಲಿ ಸೋಮವಾರ ದಂಡ ವಿಧಿಸಲು ಮುಂದಾದ ಸಂದರ್ಭದಲ್ಲಿ ದಂಡ ವಿಧಿಸದಂತೆ ಕೈಮುಗಿದು ಕೇಳಿಕೊಂಡ ನೋಟ   

ಕಲಬುರ್ಗಿ: ನಿತ್ಯ 15ರಿಂದ 20ರ ಆಸುಪಾಸಿನಲ್ಲಿ ಪತ್ತೆಯಾಗುತ್ತಿದ್ದ ಕೊರೊನಾ ಪ್ರಕರಣಗಳ ಸಂಖ್ಯೆ ಕಳೆದ 15 ದಿನಗಳಿಂದ ಹೆಚ್ಚಾಗುತ್ತಿದ್ದು, ಮನವಿಗೆ ಸಾರ್ವಜನಿಕರು ಓಗೊಡದೇ ಇದ್ದುದರಿಂದ ಪೊಲೀಸರು ಹಾಗೂ ಪಾಲಿಕೆ ಸಿಬ್ಬಂದಿ ದಂಡ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಮಾಸ್ಕ್ ಧರಿಸದ ವ್ಯಕ್ತಿಗಳಿಗೆ ₹ 250ರಂತೆ ದಂಡ ವಿಧಿಸಲಾಗುತ್ತಿದ್ದು, ಕಲಬುರ್ಗಿ ನಗರ ಪೊಲೀಸರು ಮಾರ್ಚ್‌ 1ರಿಂದ 15ರವರೆಗೆ 1066 ಪ್ರಕರಣಗಳನ್ನು ದಾಖಲಿಸಿ ₹ 1,86,350 ದಂಡ ವಿಧಿಸಿದ್ದರೆ, ಮಹಾನಗರ ಪಾಲಿಕೆಯ ಸಿಬ್ಬಂದಿ ಕಳೆದ ಒಂದು ವಾರದಿಂದ ₹ 33 ಸಾವಿರ ದಂಡ ಸಂಗ್ರಹಿಸಿದ್ದಾರೆ. ಸೂಪರ್‌ ಮಾರ್ಕೆಟ್, ಪಬ್ಲಿಕ್‌ ಗಾರ್ಡನ್, ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡುತ್ತಿರುವ ಪಾಲಿಕೆ ಸಿಬ್ಬಂದಿ ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ತಿಳಿವಳಿಕೆ ನೀಡುತ್ತಿದ್ದಾರೆ.

ಮಹಾರಾಷ್ಟ್ರದಿಂದ ರಸ್ತೆ ಮೂಲಕ ಬರುವವರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ಪ್ರಮಾಣಪತ್ರವನ್ನು ಹಾಜರುಪಡಿಸಬೇಕು ಎಂಬ ನಿಯಮವನ್ನು ಜಿಲ್ಲಾಡಳಿತ ಹೇರಿದ್ದು, ಅದಕ್ಕಾಗಿ ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ಜಿಲ್ಲೆಯ ಅಫಜಲಪುರ ಹಾಗೂ ಆಳಂದ ತಾಲ್ಲೂಕಿನ ಚೆಕ್‌ಪೋಸ್ಟ್‌ಗಳಲ್ಲಿ ದಿನದ 24 ಗಂಟೆಯೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆದಾಗ್ಯೂ, ಇತ್ತೀಚೆಗೆ ಮಹಾರಾಷ್ಟ್ರದಿಂದ ಬಂದಿದ್ದ ಪೋಷಕರಿಂದ ಮಕ್ಕಳಿಗೆ ಸೋಂಕು ತಗುಲಿದ್ದರಿಂದ ಜಿಲ್ಲೆಯ ಕಾಳಗಿ ಪಟ್ಟಣದ ಪ್ರೌಢಶಾಲೆಯನ್ನು ಸೀಲ್‌ಡೌನ್ ಮಾಡಲಾಗಿತ್ತು.

ADVERTISEMENT

ಸದ್ಯಕ್ಕೆ ಲಸಿಕೆ ಲಭ್ಯವಿದ್ದರೂ ಎಲ್ಲರಿಗೂ ಮುಕ್ತವಾಗಿ ಸಿಗುತ್ತಿಲ್ಲ. ಕೊರೊನಾ ವಾರಿಯರ್ಸ್‌ಗಳಿಗೆ, ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಹಾಗೂ ಹಿರಿಯ ನಾಗರಿಕರಿಗೆ ಆದ್ಯತೆ ಮೇರೆಗೆ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಗಳನ್ನು ನೀಡಲಾಗುತ್ತಿದೆ. ಎಲ್ಲರಿಗೂ ಲಸಿಕೆ ಲಭ್ಯವಾಗುವವರೆಗೂ ಕೋವಿಡ್ ನಿಯಂತ್ರಣ ಕ್ರಮಗಳಾದ ಮಾಸ್ಕ್ ಹಾಕುವುದು, ಆಗಾಗ್ಗೆ ಸ್ಯಾನಿಟೈಜರ್ ಸಿಂಪಡಿಸಿಕೊಳ್ಳುವುದು, ಪರಸ್ಪರ ದೈಹಿಕ ಅಂತರ ಕಾಯ್ದುಕೊಳ್ಳುವುದನ್ನು ಜಿಲ್ಲಾಡಳಿತ ಕಡ್ಡಾಯಗೊಳಿಸಿದೆ. ಹೀಗಾಗಿ, ಜಿಲ್ಲೆಯಾದ್ಯಂತ ನಡೆಯಬೇಕಿದ್ದ ಎಲ್ಲ ಜಾತ್ರೆ, ಉರುಸ್‌ನಂತಹ ಧಾರ್ಮಿಕ ಸಮಾರಂಭಗಳಲ್ಲಿ ರದ್ದುಗೊಳಿಸಿ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಆದೇಶ ಹೊರಡಿಸಿದ್ದಾರೆ.

ಸುಮಾರು 6 ಲಕ್ಷ ಜನಸಂಖ್ಯೆ ಹೊಂದಿರುವ ಕಲಬುರ್ಗಿ ನಗರದಲ್ಲಿ ಎರಡು ವಾರಗಳಿಂದ ಮಾಸ್ಕ್ ಧರಿಸಿದವರಿಗೆ ದಂಡದ ಶಿಕ್ಷೆಯನ್ನು ಪೊಲೀಸರು ಹಾಗೂ ಮಹಾನಗರ ಪಾಲಿಕೆ ಸಿಬ್ಬಂದಿ ನೀಡುತ್ತಲೇ ಇದ್ದಾರೆ.

‘ಮಾಸ್ಕ್ ಹಾಕದವರಿಗೆ ದಂಡ ವಿಧಿಸುವ ಕಾರ್ಯಾಚರಣೆ ಮುಂದುವರಿಯಲಿದೆ. ಆದ್ದರಿಂದ ದಂಡಕ್ಕೆ ಆಸ್ಪದ ಕೊಡದೇ ಎಲ್ಲರೂ ಮಾಸ್ಕ್ ಹಾಕಿಕೊಳ್ಳಬೇಕು’ ಎಂದು ಮನವಿ ಮಾಡುತ್ತಾರೆ ಕಲಬುರ್ಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಅವರು, ‘ಕೋವಿಡ್‌ ತಜ್ಞರ ಸಮಿತಿ ನೀಡಿದ ಮಾರ್ಗಸೂಚಿಗಳನ್ನು ಪಾಲಿಸುತ್ತಿದ್ದೇವೆ. ಸದ್ಯಕ್ಕೆ ಮದುವೆ, ಮುಂಜಿವೆಯಂತಹ ಹೆಚ್ಚು ಜನರು ಸೇರುವ ಸ್ಥಳಗಳಲ್ಲಿ ಭೇಟಿ ನೀಡುವ ಜನರಿಗೆ ಮಿತಿ ಹೇರಲಾಗಿದೆ. ಸ್ಯಾನಿಟೈಜರ್, ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದ್ದೇವೆ. ಅಗತ್ಯ ಬಿದ್ದರೆ ಮಾಸ್ಕ್ ಧರಿಸದವರನ್ನು ಪತ್ತೆ ಹಚ್ಚಿ ದಂಡ ವಿಧಿಸಲು ಇನ್ನಷ್ಟು ಸಿಬ್ಬಂದಿಯನ್ನು ನಿಯೋಜಿಸಲಾಗುವುದು’ ಎಂದರು.

‘ಒಂದೇ ಸ್ಥಳದಲ್ಲಿರುವ 20 ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ಕಂಡುಬಂದರೆ ಅಂಥಲ್ಲಿ ಕಂಟೇನ್ಮೆಂಟ್ ವಲಯ ಎಂದು ಘೋಷಿಸಬಹುದು. ಆದರೆ, ಸದ್ಯಕ್ಕೆ ಅಷ್ಟೊಂದು ಪ್ರಕರಣ ಕಂಡು ಬಂದಿಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.