ADVERTISEMENT

ಚಿಂಚೋಳಿ: ಪೊಲೀಸರಿಗೆ ಬಾಡಿಗೆ ಮನೆಯೇ ಗತಿ!

ವಸತಿ ಗೃಹ ನಿರ್ಮಾಣವಾಗಿ 10 ತಿಂಗಳಾದರೂ ಇಲ್ಲ ಉದ್ಘಾಟನೆ

ಜಗನ್ನಾಥ ಡಿ.ಶೇರಿಕಾರ
Published 28 ಡಿಸೆಂಬರ್ 2023, 6:17 IST
Last Updated 28 ಡಿಸೆಂಬರ್ 2023, 6:17 IST
ಚಿಂಚೋಳಿ ಪಟ್ಟಣದ ಪೊಲೀಸ್ ಕಾಲೊನಿಯಲ್ಲಿ ನಿರ್ಮಿಸಿದ ಸುಸಜ್ಜಿತ ವಸತಿ ಪೊಲೀಸ್ ಸಮುಚ್ಚಯ
ಚಿಂಚೋಳಿ ಪಟ್ಟಣದ ಪೊಲೀಸ್ ಕಾಲೊನಿಯಲ್ಲಿ ನಿರ್ಮಿಸಿದ ಸುಸಜ್ಜಿತ ವಸತಿ ಪೊಲೀಸ್ ಸಮುಚ್ಚಯ   

ಚಿಂಚೋಳಿ: ಇಲ್ಲಿನ ಚಂದಾಪುರದ ಪೊಲೀಸ್ ವಸತಿಗೃಹ ಕಾಲೊನಿಯಲ್ಲಿ ನಿರ್ಮಿಸಿದ ಪೊಲೀಸ್ ಸಿಬ್ಬಂದಿ ವಸತಿ ಗೃಹ ಕಟ್ಟಡ ಹಾಗೂ ಸುಲೇಪೇಟ ಪೊಲೀಸ್ ಠಾಣೆಯ ಎದುರಿಗೆ ನಿರ್ಮಿಸಿದ ವಸತಿಗೃಹ ಕಟ್ಟಡಗಳು 10 ತಿಂಗಳಿಮದ ಉದ್ಘಾಟನೆಗೆ ಕಾಯುತ್ತಿವೆ. 

ಚಂದಾಪುರದ ಕಟ್ಟಡದಲ್ಲಿ ಸುಮಾರು 24 ಕುಟುಂಬಗಳು, ಸುಲೇಪೇಟ ಕಟ್ಟಡದಲ್ಲಿ 12 ಕುಟುಂಬಗಳು ವಾಸಿಸಬಹು. ಎರಡು ಕಟ್ಟಡಗಳನ್ನು ಅಂದಾಜು ₹9 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಹಾಲ್, 2 ಬೆಡ್‌ ರೂಂ, ಅಡುಗೆ ಮನೆ, ಸಿಟೌಟ್, ಶೌಚಗೃಹ ಹೊಂದಿವೆ.

ADVERTISEMENT

ನೂತನ ಕಟ್ಟಡಗಳು ಉದ್ಘಾಟನೆಗೊಳ್ಳದ ಕಾರಣ 20ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಬಾಡಿಗೆ ಮನೆಗಳಲ್ಲಿ, ಲೋಕೋಪಯೋಗಿ ಇಲಾಖೆಯ (ಸೋರುತ್ತಿರುವ) ವಸತಿ ಗೃಹಗಳಲ್ಲಿ ವಾಸ ಮಾಡುವುದು ಅನಿವಾರ್ಯವಾಗಿದೆ.

ಚಂದಾಪುರದ ಕೈಗಾರಿಕಾ ವಸಾಹತು ಪ್ರದೇಶದ ಸಮೀಪದಲ್ಲಿ ಅಂದಾಜು ರೂ 6 ಕೋಟಿ ವೆಚ್ಚದಲ್ಲಿ ಕಟ್ಟಡ ತಲೆ ಎತ್ತಿದೆ. ಇದರ ಜತೆಗೆ ಸುಲೇಪೇಟದ ಕಟ್ಟಡ ರೂ 3 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ.

ಯಾದಗಿರಿಯಲ್ಲಿಯೂ ಇಂತ ಕಟ್ಟಡ ನಿರ್ಮಾಣವಾಗಿದ್ದು ಉದ್ಘಾಟನೆಗೆ ಮೊದಲೇ ಪೊಲೀಸ್ ಸಿಬ್ಬಂದಿಗೆ ಹಂಚಿಕೆ ಮಾಡಿ ವಾಸಿಸಲು ಅನುಕೂಲ ಮಾಡಿಕೊಡಲಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಪೊಲೀಸ್ ಸಿಬ್ಬಂದಿಗೆ ಸಮರ್ಪಕವಾದ ಬಾಡಿಗೆ ಮನೆ ಸಿಗುವುದಿಲ್ಲ ಸಿಕ್ಕರೂ ಬಾಡಿಗೆ ಹೆಚ್ಚು. ಹೀಗಿರುವಾಗ ನೂತನ ಕಟ್ಟಡ ಉದ್ಘಾಟಿಸಿ ಸಿಬ್ಬಂದಿಗೆ ಹಂಚಿಕೆ ಮಾಡಿದರೆ ಪೊಲೀಸರು ನಿಶ್ಚಿಂತೆಯಿಂದ ಕೆಲಸ ಮಾಡಿಕೊಂಡ ಹೋಗಬಹುದಾಗಿದೆ. ಕೆಲವರು ಬಾಡಿಗೆ ಮನೆಯಲ್ಲಿರಲು ಇಷ್ಟಪಡದೇ ಸ್ವಗ್ರಾಮದಿಂದಲೇ ಹೋಗಿ ಬರುವುದು ಮಾಡುತ್ತಿದ್ದಾರೆ.

ಚಿಂಚೋಳಿ ಮತ್ತು ಮಿರಿಯಾಣ ಠಾಣೆಯ 20ಕ್ಕೂ ಹೆಚ್ಚು ಸಿಬ್ಬಂದಿ ಬಾಡಿಗೆ ಮನೆಗಳಲ್ಲಿ ಹೆಚ್ಚು ಬಾಡಿಗೆ ಹಣ ನೀಡಿ ವಾಸಿಸುತ್ತಿದ್ದಾರೆ. ಇವರು 1 ಬಿಎಚ್‌ಕೆಯಲ್ಲಿ ವಾಸಿಸಲು ಮಾಸಿಕ ₹5 ಸಾವಿರ ಬಾಡಿಗೆ ಪಾವತಿಸುತ್ತಿದ್ದಾರೆ.

ಪೊಲೀಸ್ ವಸತಿ ಗೃಹದಲ್ಲಿ ವಾಸವಾದರೆ ಪೊಲೀಸರ (ಬೇಸಿಕ್)ಮೂಲ ವೇತನದ ಶೇ 10 ಮಾತ್ರ ಎಚ್‌ಆರ್‌ಎಂಎಸ್‌ನಲ್ಲಿ ಕಡಿತವಾಗುತ್ತದೆ. ಈ ಕಟ್ಟಡ ಹಂಚಿಕೆಯಾದರೆ ಪೊಲೀಸ ಸಿಬ್ಬಂದಿಗೆ ಬಾಡಿಗೆ ಹಣದಲ್ಲೂ ಉಳಿತಾಯವಾಗುವುದರ ಜತೆಗೆ ಎರಡು ಬಿಎಚ್‌ಕೆ ಕಟ್ಟಡ ಸಿಗಲಿದೆ.

ಅನ್ವರ್ ಖತೀಬ್ ಪುರಸಭೆ ಸದಸ್ಯರು ಚಿಂಚೋಳಿ
ಪೊಲೀಸ್ ಸಿಬ್ಬಂದಿಗೆ ಬೇಗ ವಾಸಿಸಲು ಮನೆ ಹಂಚಿಕೆ ಮಾಡಬೇಕು ಇದರಿಂದ ಅವರಿಗೆ ಬಾಡಿಗೆ ಹಣ ಉಳಿತಾಯದ ಜತೆಗೆ ಉತ್ತಮ ಸೌಲಭ್ಯಗಳು ಸಿಗಲಿವೆ
ಅನ್ವರ್ ಖತೀಬ್ ಪುರಸಭೆ ಸದಸ್ಯ ಚಿಂಚೋಳಿ
ಡಾ. ಶರಣಪ್ರಕಾಶ ಪಾಟೀಲ  ವೈದ್ಯಕೀಯ ಶಿಕ್ಷಣ ಸಚಿವರು 
ವಸತಿ ಗೃಹ ಕಟ್ಟಡ ಪೊಲೀಸ್ ಸಿಬ್ಬಂದಿಗೆ ಹಂಚಿಕೆ ಮಾಡದಿರಲು ಏನು ಕಾರಣ ಗೊತ್ತಾಗಿಲ್ಲ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಮಾತನಾಡುತ್ತೇನೆ
ಡಾ. ಶರಣಪ್ರಕಾಶ ಪಾಟೀಲ ವೈದ್ಯಕೀಯ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.