ಕಾಳಗಿ: ‘ನೀರಿನ ಝರಿಗಳು ಮುಚ್ಚಿಕೊಳ್ಳದಂತೆ, ಶಿಲ್ಪಕಲೆಯ ಅಂದ ಹೆಚ್ಚುವಂತೆ ಮತ್ತು ಪ್ರವಾಸಿಗರನ್ನು ಆಕರ್ಷಿಸುವಂತೆ ಪುಷ್ಕರಣಿಯನ್ನು ಅಭಿವೃದ್ಧಿ ಪಡಿಸಬೇಕಿದೆ. ಈ ರೀತಿಯಲ್ಲಿ ನೀಲನಕ್ಷೆ ತಯಾರಿಸಿ, ಅಂದಾಜು ವೆಚ್ಚದ ಅಂತಿಮ ಕ್ರಿಯಾಯೋಜನೆ ರೂಪಿಸಿಕೊಡಿ’ ಎಂದು ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಅವರು ಖಾಸಗಿ ಎಂಜಿನಿಯರ್‌ಗೆ ಹೇಳಿದರು.
ಶನಿವಾರ ಪಟ್ಟಣದ ಐತಿಹಾಸಿಕ ನೀಲಕಂಠ ಕಾಳೇಶ್ವರ ದೇವಸ್ಥಾನ ಪಕ್ಕದಲ್ಲಿರುವ ರಾಮತೀರ್ಥ ಪುಷ್ಕರಣಿ, ರಾಮಲಿಂಗೇಶ್ವರ ದೇವಸ್ಥಾನ ಮತ್ತು ಅದರ ಮೆಟ್ಟಿಲುಗಳ (ಅಭಿವೃದ್ಧಿ) ನಿರ್ಮಾಣಕ್ಕಾಗಿ ತಾತ್ಕಾಲಿಕವಾಗಿ ಸಿದ್ಧಪಡಿಸಲಾದ ನೀಲನಕ್ಷೆ ವೀಕ್ಷಿಸಿ ಸಲಹೆ ನೀಡಿದರು.
‘ಇಲ್ಲಿ ನೈಸರ್ಗಿಕವಾಗಿ ನೀರಿನ ಬುಗ್ಗೆಗಳಿವೆ. ಕಾಮಗಾರಿ ಕೈಗೊಳ್ಳುವುದರಿಂದ ಅವುಗಳಿಗೆ ಯಾವುದೇ ತರಹದ ಧಕ್ಕೆಯಾಗಬಾರದು. ಸುತ್ತಲೂ ಶಿಲ್ಪಕಲೆ ವೈಭವೀಕರಿಸುವ ಕಪ್ಪು ಬಣ್ಣದ ದೊಡ್ಡ ಕಲ್ಲುಗಳಿವೆ. ಅವುಗಳಂತೆಯೇ ಕಲ್ಲುಗಳನ್ನು ಬಳಸಿ ರಾಮಲಿಂಗೇಶ್ವರ ದೇವಸ್ಥಾನ, ರಾಮತೀರ್ಥ ಪುಷ್ಕರಣಿಯ ನೋಟ ಹೆಚ್ಚಿಸಬೇಕು. ತಗಲುವ ವೆಚ್ಚವನ್ನು ಸರ್ಕಾರದಿಂದ ಮಂಜೂರು ಮಾಡಿಸಲಾಗುವುದು’ ಎಂದು ತಿಳಿಸಿದರು.
ಅಂದಾಜು ವೆಚ್ಚದೊಂದಿಗೆ ನೀಲನಕ್ಷೆ ತಯಾರಿಸಿದ ಖಾಸಗಿ ಎಂಜಿನಿಯರ್ ಮಹ್ಮದ ರಫಿಕ್ ಅವರು ₹3.5 ಕೋಟಿ ವೆಚ್ಚದ ಮೂರು ಕಾಮಗಾರಿಗಳ ಬಗ್ಗೆ ವಿವರಿಸಿದರು. ‘ಕಾಮಗಾರಿಯಲ್ಲಿ ತಮಿಳುನಾಡಿನ ಮೈಲಡಿ ಕಲ್ಲುಗಳು ಮತ್ತು ಮರಳು ಬಳಸಬೇಕಾಗುತ್ತದೆ. ನುರಿತ ಕಾರ್ಮಿಕರು ಯಂತ್ರ ಉಪಯೋಗಿಸಿ ಕೆಲಸ ಮಾಡಬೇಕಾಗುತ್ತದೆ’ ಎಂದು ಮಾಹಿತಿ ನೀಡಿದರು.
‘ಬರುವ ದಿನಗಳಲ್ಲಿ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಆಹ್ವಾನಿಸಿ ಇಲ್ಲಿನ ಐತಿಹಾಸಿಕ ತಾಣಗಳ ಅಭಿವೃದ್ಧಿಗೆ ಸಹಕರಿಸಲು ಕೋರುತ್ತೇನೆ’ ಎಂದು ಜಗದೇವ ಗುತ್ತೇದಾರ ಹೇಳಿದರು.
ಈ ಕುರಿತು ಹಲವು ವಿಚಾರಗಳ ಚರ್ಚೆ ನಡೆಯಿತು. ಪ್ರಮುಖರಾದ ಶಿವಶರಣಪ್ಪ ಕಮಲಾಪುರ, ಶಿವಶರಣಪ್ಪ ಗುತ್ತೇದಾರ, ವಿಶ್ವನಾಥ ವನಮಾಲಿ, ಬಸಯ್ಯ ಪ್ಯಾಟಿಮಠ, ಸಂತೋಷ ಪತಂಗೆ, ನೀಲಕಂಠ ಮಡಿವಾಳ, ಬಾಬು ನಾಟೀಕಾರ, ಹನುಮಂತಪ್ಪ ಕಾಂತಿ, ರವಿದಾಸ ಪತಂಗೆ, ಶಾಮರಾವ ಕಡಬೂರ, ವಿಠಲ ಸೇಗಾಂವಕರ್, ಅವಿನಾಶ ಗುತ್ತೇದಾರ, ಪುರುಷೋತ್ತಮ ಗುತ್ತೇದಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.