ADVERTISEMENT

ಆರಗ ಜ್ಞಾನೇಂದ್ರ ಹೇಳಿಕೆಗೆ ಪೋತೆ ಖಂಡನೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2023, 11:38 IST
Last Updated 2 ಆಗಸ್ಟ್ 2023, 11:38 IST
ಎಚ್‌.ಟಿ.ಪೋತೆ
ಎಚ್‌.ಟಿ.ಪೋತೆ   

ಕಲಬುರಗಿ: ಕಸ್ತೂರಿರಂಗನ್ ವರದಿ ಜಾರಿ ಕುರಿತ ಅರಣ್ಯ ಸಚಿವರ ಹೇಳಿಕೆ ವಿರೋಧಿಸಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಅವರು ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮೈಬಣ್ಣದ ಕುರಿತು ನೀಡಿರುವ ಹೇಳಿಕೆಗೆ ಸಾಹಿತಿ, ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಪ್ರೊ. ಎಚ್‌.ಟಿ. ಪೋತೆ ಖಂಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ವರ್ಣದ ಆಧಾರದಲ್ಲಿ ಅವಮಾನಿಸಿರುವುದು ಅಕ್ಷಮ್ಯ ಅಪರಾಧ. ನಾಲಿಗೆ ತನ್ನ ಕುಲವನ್ನು ಅರಹುತ್ತದೆ ಎಂದು ನಮ್ಮ ಹಿರೀಕರು ಹೇಳಿದ್ದಾರೆ. ಜಾತಿ, ವರ್ಣದ ಆಧಾರದ ಮೇಲೆ ಮಾತಾಡುವ ಇವರನ್ನು ಸುಶಿಕ್ಷಿತರೆಂದು ಕರೆಯುವುದಾದರು ಹೇಗೆ? ಬಣ್ಣ, ಧರ್ಮದ ಸಹಿಷ್ಣುತೆ ಇಲ್ಲದ ಇವರು ಜನನಾಯಕರಾಗಲು ಯೋಗ್ಯರಲ್ಲ. ದೇಶದ ಗಡಿಯಲ್ಲಿ ಕಾಯುವವರು ಯಾವ ಬಣ್ಣದವರೆಂದು ನೋಡಿದ್ದೀರಾ? ರಾಗಿ ಧಾನ್ಯದ ಬಣ್ಣ, ನಿಮ್ಮ ಕಣ್ಣು ಕಪ್ಪಲ್ಲವೆ? ಬಹುಸಂಖ್ಯೆಯ ಭಾರತೀಯರು ಆರಾಧಿಸುವ ಕೃಷ್ಣನ ಬಣ್ಣ ಯಾವುದು ನಿಮಗೆ ಅರಿವಿರಬೇಕಲ್ಲ. ವರ್ಣನೀತಿಯ ನಿಮ್ಮನ್ನು ಭಾರತೀಯರೆನ್ನಬೇಕೇ? ನಿಮ್ಮಂಥವರು ಇರುವುದರಿಂದಲೇ ಸರ್ವಜನಾಂಗದ ಶಾಂತಿಯ ತೋಟಕ್ಕೆ ಬಾಧೆಯಾಗುತ್ತಿದೆ. ನಿಮ್ಮ ಮಾತುಗಳಿಂದ ಭಾರತದ ಬಹುಸಂಖ್ಯೆಯ ದಲಿತ, ಶೋಷಿತ ಸಮುದಾಯಕ್ಕೆ ಅವಮಾನವಾಗಿದೆ. ತಕ್ಷಣ ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT