
ಅಳವಂಡಿ: ಮಹಿಳಾ ಸ್ವಸಹಾಯ ಸಂಘದ ಸದಸ್ಯರೊಬ್ಬರು ಮೊಟ್ಟೆ ಇಡುವ ಕೋಳಿಗಳ ಸಾಕಾಣಿಕೆ ಮಾಡಿ ನಿರಂತರ ಆದಾಯ ಗಳಿಸುತ್ತಾ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.
ಕೊಪ್ಪಳ ತಾಲ್ಲೂಕಿನ ಅಳವಂಡಿ ಸಮೀಪದ ಕವಲೂರು ಗ್ರಾಮದ ಬೆಳಕು ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರಾದ ದ್ಯಾಮವ್ವ ಯಂಕಪ್ಪ ಹಳ್ಳಿ ಅವರು ರಿವಾರ್ಡ್ ಯೋಜನೆಯಡಿ ಸಹಾಯಧನ, ಸಂಜೀವಿನಿ ಒಕ್ಕೂಟದ ಯೋಜನೆಯಡಿ ಸಾಲ ಪಡೆದು ಕೋಳಿ ಸಾಕಾಣಿಕೆ ಮಾಡುತ್ತಾ ಕೋಳಿ ಮೊಟ್ಟೆ ಮಾರಾಟ ಮಾಡಿ, ಉತ್ತಮ ಲಾಭ ಗಳಿಸುತ್ತಿದ್ದಾರೆ.
ಈ ಮೊದಲು ದ್ಯಾಮವ್ವ ಅವರು ಕೃಷಿ ಚಟುವಟಿಕೆಯಲ್ಲಿ ಹಾಗೂ ಕೂಲಿ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಬಳಿಕ ಅವರು ಜಲಾನಯನ ಅಭಿವೃದ್ಧಿ ರಿವಾರ್ಡ್ ಯೋಜನೆಯಡಿ ಸಹಾಯಧನ ಮೂಲಕ ಮೊಟ್ಟೆ ಕೋಳಿ ಸಾಕಾಣಿಕೆ ಮಾಡಲು ಮುಂದಾದರು. ಇದಕ್ಕೆ ಮತ್ತಷ್ಟು ಆರ್ಥಿಕ ನೆರವು ನೀಡಲು ಗ್ರಾಮದ ಕಲ್ಪವೃಕ್ಷ ಸಂಜೀವಿನಿ ಒಕ್ಕೂಟದವರು ಮುಂದಾದರು. ಬಳಿಕ ದ್ಯಾಮವ್ವ ಹಳ್ಳಿ ಅವರು ಗ್ರಾಮದ ಹೊರವಲಯದಲ್ಲಿ ಕೋಳಿ ಶೆಡ್ ನಿರ್ಮಾಣ ಮಾಡಿ, ಮೊಟ್ಟೆ ಇಡುವ ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ.
ಮೊಟ್ಟೆ ಇಡುವ ಕೋಳಿಗಳನ್ನು ಕುಕನೂರು ತಾಲ್ಲೂಕಿನ ಕುದರಿ ಮೋತಿ ಗ್ರಾಮದಿಂದ ಪ್ರತಿ ಕೋಳಿಗೆ ₹350ರಂತೆ ಸುಮಾರು 680 ಕೋಳಿಗಳನ್ನು ಖರೀದಿಸಿ ತಂದಿದ್ದಾರೆ. ಕೋಳಿಗಳಿಗೆ ಹುಬ್ಬಳ್ಳಿ ನಗರದಿಂದ ಆಹಾರ ಧಾನ್ಯವನ್ನು ವಿತರಣೆ ಮಾಡುತ್ತಿದ್ದು, ಅದರಲ್ಲಿ ಸೋಯಾಬೀನ್, ಮೆಕ್ಕೆಜೋಳ ಇತ್ಯಾದಿ ಒಳಗೊಂಡ ತಯಾರಿಸಿದ ಆಹಾರವನ್ನು 50 ಕೆ.ಜಿಯ ಪ್ರತಿ ಚೀಲಕ್ಕೆ ₹1,350ರಂತೆ ಖರೀದಿಸಿ, ಪ್ರತಿ ದಿನಕ್ಕೆ 680 ಕೋಳಿಗಳಿಗೆ 75 ಕೆ.ಜಿ ಆಹಾರವನ್ನು ಕೋಳಿಗಳಿಗೆ ನೀಡುತ್ತಿದ್ದಾರೆ.
‘ನಿತ್ಯ ಕೋಳಿಗಳಿಂದ ಸುಮಾರು 600ರಿಂದ 700 ಮೊಟ್ಟೆಗಳು ಸಿಗುತ್ತವೆ. ಗ್ರಾಮದ ಅಂಗನವಾಡಿಗಳಿಗೆ ಹಾಗೂ ಸರ್ಕಾರಿ ಶಾಲೆಗಳಿಗೆ ಪೂರೈಸಲಾಗುತ್ತದೆ. ಮಾರುಕಟ್ಟೆಯಲ್ಲಿ ಮೊಟ್ಟೆ ಬೆಲೆ ಏರಿಕೆಯಿದ್ದರು. ಅಂಗನವಾಡಿ ಹಾಗೂ ಶಾಲೆಗಳಿಗೆ ಸರ್ಕಾರ ನಿಗದಿಪಡಿಸಿದ ಹಣದಲ್ಲಿಯೇ ಮೊಟ್ಟೆ ನೀಡುತ್ತಿದ್ದೇವೆ. ಶಾಲೆಗಳಿಗೆ ಹಾಗೂ ಅಂಗನವಾಡಿಗಳಿಗೆ ಕೊಟ್ಟು ಉಳಿದ ಮೊಟ್ಟೆಗಳನ್ನು ಮಾರುಕಟ್ಟೆಯ ಇದ್ದ ಬೆಲೆಗೆ ಮಾರಾಟ ಮಾಡುತ್ತೇವೆ’ ಎನ್ನುತ್ತಾರೆ ದ್ಯಾಮವ್ವ ಅವರು.
‘ಸ್ಥಳೀಯವಾಗಿ ಮಾರಾಟ ಮಾಡುವುದರಿಂದ ಸಾಗಣೆ ವೆಚ್ಚವೂ ಕೂಡ ಉಳಿತಾಯವಾಗುತ್ತದೆ. ಕೋಳಿ ಶೆಡ್ ಹಾಗೂ ಕೋಳಿ ಖರೀದಿ ಸೇರಿದಂತೆ ಸುಮಾರು ₹8 ಲಕ್ಷ ಖರ್ಚಾಗಿದೆ. ರಿವಾರ್ಡ್ ಯೋಜನೆಯಡಿ ₹4 ಲಕ್ಷ, ಸಂಜೀವಿನಿ ಒಕ್ಕೂಟದ ಮೂಲಕ ₹2 ಲಕ್ಷ ಪಡೆದಿದ್ದೇವೆ. ಉಳಿದ ಹಣವನ್ನು ನಾವೇ ಹಾಕಿದ್ದೇವೆ. ಎಲ್ಲಾ ಖರ್ಚು, ವೆಚ್ಚ ತೆಗೆದು ತಿಂಗಳಿಗೆ ₹15 ಸಾವಿರದಿಂದ ₹25 ಸಾವಿರ ಆದಾಯ ಪಡೆಯುತ್ತಿದ್ದೇವೆ. ಕೋಳಿ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡ ನನ್ನ ತಾಯಿಗೆ ನಾನು, ನನ್ನ ತಂದೆ, ತಮ್ಮ ಸಾಥ್ ನೀಡುತ್ತಿದ್ದೇವೆ’ ಎನ್ನುತ್ತಾರೆ ದ್ಯಾಮವ್ವ ಅವರ ಮಗಳು ನೇತ್ರಾ ಗಾರವಾಡ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.