ADVERTISEMENT

ಸಫಾಯಿ ಕರ್ಮಚಾರಿಗಳ ಕಾಯಂಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಜುಲೈ 2022, 4:41 IST
Last Updated 2 ಜುಲೈ 2022, 4:41 IST
ಕಲಬುರಗಿ ನಗರದ ಜಗತ್‌ ವೃತ್ತದ ಬಳಿ ಶುಕ್ರವಾರ ಕಲ್ಯಾಣ ಕರ್ನಾಟಕ ಗುತ್ತಿಗೆ ಸಫಾಯಿ ಕರ್ಮಚಾರಿ ಸಂಘಟನೆ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದರು
ಕಲಬುರಗಿ ನಗರದ ಜಗತ್‌ ವೃತ್ತದ ಬಳಿ ಶುಕ್ರವಾರ ಕಲ್ಯಾಣ ಕರ್ನಾಟಕ ಗುತ್ತಿಗೆ ಸಫಾಯಿ ಕರ್ಮಚಾರಿ ಸಂಘಟನೆ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದರು   

ಕಲಬುರಗಿ: ರಾಜ್ಯದ ಎಲ್ಲ ಕಸದ ವಾಹನ ಚಾಲಕರು,ಗುತ್ತಿಗೆ ಮತ್ತು ಒಳಚರಂಡಿ ಕಾರ್ಮಿಕರು ಸೇರಿ ಇತರರನ್ನು ಕಾಯಂಗೊಳಿಸುವಂತೆ ಒತ್ತಾಯಿಸಿ ನಗರದ ಜಗತ್‌ ವೃತ್ತದ ಬಳಿ ಶುಕ್ರವಾರ ಕಲ್ಯಾಣ ಕರ್ನಾಟಕ ಗುತ್ತಿಗೆ ಸಫಾಯಿ ಕರ್ಮಚಾರಿ ಸಂಘಟನೆಯ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದರು.

‘ಸಫಾಯಿ ಕರ್ಮಚಾರಿಗಳ ಹಲವು ಹೋರಾಟದ ಫಲವಾಗಿ ಈ ಹಿಂದಿನ ಕಾಂಗ್ರೆಸ್ ಸರ್ಕಾರ ಗುತ್ತಿಗೆ ಪದ್ಧತಿ ರದ್ದುಪಡಿಸಿತ್ತು. ಎಲ್ಲಾ ಸ್ವಚ್ಛತಾ ಕಾರ್ಮಿಕರನ್ನು ಕಾಯಂ ಮಾಡಲು ಸಚಿವ ಸಂಪುಟದಲ್ಲಿ ನಿರ್ಣಯ ಸಹ ತೆಗೆದುಕೊಂಡಿತ್ತು. ಗುತ್ತಿಗೆ ಪದ್ಧತಿ ರದ್ದಾದ ಕೂಡಲೇ ಎಲ್ಲರನ್ನೂ ವಿಲೀನಗೊಳಿಸಿಕೊಂಡು ಕಾಯಂಗೊಳಿಸಬೇಕಿತ್ತು. ಆದರೆ, ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯದ ಅಧಿಕಾರಿಗಳು ಸಂಪುಟದ ನಿರ್ಣಯವನ್ನು ಜಾರಿಗೆ ತರಲಿಲ್ಲ’ ಎಂದು ಪ್ರತಿಭಟನಾನಿರತರು ಬೇಸರ ವ್ಯಕ್ತಪಡಿಸಿದರು.

‘ಎಲ್ಲಾ ಕಾರ್ಮಿಕರನ್ನು ಏಕಕಾಲಕ್ಕೆ ಕಾಯಂಗೊಳಿಸಬೇಕು. ಮಹಿಳಾ ಕಾರ್ಮಿಕರಿಗಾಗಿ ಶೌಚಾಲಯ, ಕುಡಿಯುವ ನೀರು, ಹೆರಿಗೆ ಭತ್ಯೆ, ವಿಶ್ರಾಂತಿ ಗೃಹದ ವ್ಯವಸ್ಥೆ ಕಲ್ಪಿಸಬೇಕು. ಪೌರ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಹಣಕಾಸಿನ ನೆರವು ನೀಡಬೇಕು. ನಿವೃತ್ತರಿಗೆ ತಲಾ ₹10 ಲಕ್ಷಪರಿಹಾರದ ಜತೆಗೆ ಮಾಸಿಕ ₹5 ಸಾವಿರ ವೇತನ, ಅವಲಂಬಿತರಿಗೆ ಉದ್ಯೋಗ ನೀಡಬೇಕ’ ಎಂದು ಅವರು ಆಗ್ರಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.