ADVERTISEMENT

ಜೆಸ್ಕಾಂ : ರಿಯಾಯಿತಿ ದರದಲ್ಲಿ ವಿದ್ಯುತ್ ಪೂರೈಕೆ

ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಪಾಂಡ್ವೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 2:18 IST
Last Updated 7 ಆಗಸ್ಟ್ 2021, 2:18 IST
ರಾಹುಲ್ ಪಾಂಡ್ವೆ
ರಾಹುಲ್ ಪಾಂಡ್ವೆ   

ಕಲಬುರ್ಗಿ: ಕೈಗಾರಿಕೆಗಳು, ವಾಣಿಜ್ಯ ಉದ್ದೇಶಕ್ಕೆ ಬಳಸುವವರು, ಆಸ್ಪತ್ರೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ರಿಯಾಯಿತಿ ದರದಲ್ಲಿ ವಿದ್ಯುತ್ ಒದಗಿಸಲು ಯೋಜನೆ ರೂಪಿಸಲಾಗಿದೆ ಎಂದು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಪಾಂಡ್ವೆ ಹೇಳಿದರು.

ಜೆಸ್ಕಾಂ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಕೈಗಾರಿಕೆಗಳು, ವಾಣಿಜ್ಯ ಉದ್ದೇಶಕ್ಕೆ ಬಳಸುವವರು, ಆಸ್ಪತ್ರೆ ಮತ್ತು ಶೈಕ್ಷಣಿಕ ಸಂಸ್ಥೆಗಳು ಖಾಸಗಿಯವರಿಂದ ವಿದ್ಯುತ್ ಖರೀದಿ ಮಾಡುತ್ತಿವೆ. ಅದನ್ನು ತಪ್ಪಿಸಲು ಈ ಯೋಜನೆ ಜಾರಿಗೆ ತರಲಾಗಿದೆ ಎಂದರು.

ಸದ್ಯ ಏಳು ರೂಪಾಯಿ 30 ಪೈಸೆ ದರ ನಿಗದಿಪಡಿಸಲಾಗಿದೆ. ಅದನ್ನು ₹6 ಗೆ ಇಳಿಸಲಾಗುವುದು. ಈ ಯೋಜನೆ ಜುಲೈನಲ್ಲಿ ಆರಂಭವಾಗಿದ್ದು, ಡಿಸೆಂಬರ್ ವರೆಗೆ ಜಾರಿಯಲ್ಲಿ ಇರುತ್ತದೆ ಎಂದರು.

ADVERTISEMENT

ಇಂತಹ 2,178 ಗ್ರಾಹಕರು ಸದ್ಯ ನಮ್ಮ ಬಳಿ ವಿದ್ಯುತ್ ಖರೀದಿ ಮಾಡುತ್ತಿದ್ದಾರೆ. ರಿಯಾಯಿತಿ ದರದಲ್ಲಿ ಖರೀದಿ ಮಾಡಲು ಸಂಡೂರಿನ ಒಂದು ಕೈಗಾರಿಕೆ ಮುಂದೆ ಬಂದಿದೆ. ಇನ್ನೂ 14 ಕೈಗಾರಿಕೆಗಳನ್ನು ಸಂಪರ್ಕ ಮಾಡ
ಲಾಗಿದೆ ಎಂದು ತಿಳಿಸಿದರು.

ಈ ಮೊದಲೇ ನಮ್ಮ ಬಳಿ ಖರೀದಿ
ಸುತ್ತಿರುವವರಿಗೆ ರಿಯಾಯಿತಿ ನೀಡು
ವುದಿಲ್ಲ. 2019ರ ಏಪ್ರಿಲ್‌ನಿಂದ 2021ರ ಮಾರ್ಚ್ ವರೆಗೆ ಅವರು ಬಳಸಿದ ಸರಾಸರಿ ವಿದ್ಯುತ್‌ಗಿಂತ ಹೆಚ್ಚುವರಿಯಾಗಿ ಖರೀದಿ ಮಾಡಿದರೆ ಮಾತ್ರ ಅದಕ್ಕೆ ರಿಯಾಯಿತಿ ನೀಡಲಾಗುತ್ತದೆ ಎಂದು ಅವರು ಹೇಳಿದರು. ಜೆಸ್ಕಾಂಗೆ 30 ಮಿಲಿಯನ್ ಯುನಿಟ್ ವಿದ್ಯುತ್ ಹಂಚಿಕೆಯಾಗುತ್ತಿದೆ. ಅದರಲ್ಲಿ 24 ಮಿಲಿಯನ್ ಯುನಿಟ್ ಬಳಕೆಯಾಗುತ್ತಿದೆ. ಆರು ಮಿಲಿಯನ್ ಯುನಿಟ್ ವಿದ್ಯುತ್ ಉಳಿಕೆಯಾಗುತ್ತಿದೆ. ರಿಯಾಯಿತಿ ದರದಲ್ಲಿ ವಿದ್ಯುತ್ ನೀಡುವುದರಿಂದ ಜೆಸ್ಕಾಂಗೆ ಯಾವುದೇ ನಷ್ಟ ಉಂಟಾಗುವುದಿಲ್ಲ. ಈಗಾಗಲೇ ನಮ್ಮಲ್ಲಿ ಬೇಡಿಕೆಗಿಂತ ಹೆಚ್ಚು ವಿದ್ಯುತ್ ಉತ್ಪಾದನೆ ಆಗುತ್ತಿದೆ ಎಂದು ತಿಳಿಸಿದರು.

ಸ್ಮಾರ್ಟ್‌ ಮತ್ತು ಪ್ರಿಪೇಯ್ಡ್ ವಿದ್ಯುತ್ ಮೀಟರ್ ಅಳವಡಿಸುವ ಸಂಬಂಧ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ನೀಡಿದೆ. ಅದರನ್ವಯ ವಿವರವಾದ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಿ ಡಿಸೆಂಬರ್ ಒಳಗೆ ಅದನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಈಗ ಗ್ರಾಹಕರು ವಿದ್ಯುತ್ ಬಳಸಿದ ನಂತರ ಶುಲ್ಕ ಪಾವತಿಸುತ್ತಾರೆ. ಪ್ರಿಪೇಯ್ಡ್‌ ಮೀಟರ್ ಬಂದ ನಂತರ ಅವರು ಎಷ್ಟು ವಿದ್ಯುತ್ ಬಳಸುತ್ತಾರೋ ಅದಕ್ಕೆ ಮೊದಲೇ ಹಣ ಪಾವತಿಸಬೇಕು. ಸ್ಮಾರ್ಟ್ ಮೀಟರ್‌ ಅಳವಡಿಸಿದರೆ ಗ್ರಾಮೀಣ ಭಾಗದ ಮೀಟರ್‌ಗಳನ್ನು ಇಲ್ಲಿಂದಲೇ ನಿರ್ವಹಣೆ ಮಾಡಬಹುದು ಎಂದರು.

ತಾಂತ್ರಿಕ ಮತ್ತು ವಾಣಿಜ್ಯಿಕ ವಿದ್ಯುತ್ ನಷ್ಟ ಶೇ 12ಕ್ಕಿಂತ ಕಡಿಮೆ ಇರಬೇಕು ಎಂದು ಕೇಂದ್ರ ಸೂಚಿಸಿದೆ. ಈ ವರ್ಷದ ಮೊಲದ ಮೂರು ತಿಂಗಳ ಅವಧಿಯಲ್ಲಿ ಶೇ 15.25 ನಷ್ಟ ಉಂಟಾಗಿದೆ. ತಾಂತ್ರಿಕ, ವಾಣಿಜ್ಯಿಕ ಮತ್ತು ಹಂಚಿಕೆಯಲ್ಲಿ ಆಗುತ್ತಿರುವ ನಷ್ಟ ತಗ್ಗಿಸಲು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು. ಜೆಸ್ಕಾಂ ವ್ಯಾಪ್ತಿಯ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಹಿರಿಯ ಅಧಿಕಾರಿಗಳ
ನ್ನೊಳಗೊಂಡ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಲಾಗಿದೆ. ಇದರಿಂದ ಗ್ರಾಹಕರ ದೂರು, ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಸಾಧ್ಯವಾಗುತ್ತದೆ ಎಂದರು. ಜೆಸ್ಕಾಂ ನಿರ್ದೇಶಕ (ತಾಂತ್ರಿಕ) ಲಕ್ಷ್ಮಣ ಚವಾಣ, ಮುಖ್ಯ ಅರ್ಥಿಕ ಅಧಿಕಾರಿ ಅಬ್ದುಲ್ ವಾಜಿದ್, ಅಧೀಕ್ಷಕ ಎಂಜಿನಿಯರ್‌ (ವಾಣಿಜ್ಯ) ಇ.ರವಿಶಂಕರ್, ಅಧೀಕ್ಷಕ ಎಂಜಿನಿಯರ್ (ತಾಂತ್ರಿಕ) ಸಿದ್ದರಾಮ ಪಾಟೀಲ ಅವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.