ADVERTISEMENT

ಉತ್ತಮ ಚಿಕಿತ್ಸೆ; ಸುಧಾರಿಸಿದ ಡಯಾಲಿಸಿಸ್ ವ್ಯವಸ್ಥೆ

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಅಂಬಾರಾಯ ರುದ್ರವಾಡಿ ಅವರೊಂದಿಗೆ ‘ಪ್ರಜಾವಾಣಿ’ ಫೋನ್ ಇನ್

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 13:30 IST
Last Updated 11 ಮಾರ್ಚ್ 2023, 13:30 IST
ಡಾ.ಅಂಬಾರಾಯ ರುದ್ರವಾಡಿ
ಡಾ.ಅಂಬಾರಾಯ ರುದ್ರವಾಡಿ   

ಕಲಬುರಗಿ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಸುಸಜ್ಜಿತ ವೈದ್ಯಕೀಯ ತಂಡವಿದ್ದು, 24 ಗಂಟೆಯೂ ಉತ್ತಮ ಚಿಕಿತ್ಸೆ ದೊರೆಯುತ್ತಿದೆ. ವಿವಿಧ ಬಗೆಯ ಶಸ್ತ್ರಚಿಕಿತ್ಸೆ ಮಾಡುವ ತಜ್ಞ ವೈದ್ಯರು, ನರರೋಗ ಹಾಗೂ ಮೂತ್ರರೋಗ ತಜ್ಞರೂ ಇದ್ದಾರೆ. ಆರೋಗ್ಯ ಕಾರ್ಡ್ ಇದ್ದವರಿಗೆ ದುಬಾರಿ ಚಿಕಿತ್ಸೆಯೂ ಉಚಿತವಾಗಿ ದೊರೆಯಲಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಅಂಬಾರಾಯ ರುದ್ರವಾಡಿ ತಿಳಿಸಿದರು.‌

‘ಪ್ರಜಾವಾಣಿ’ ಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಶನಿವಾರ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಕಾಯಿಲೆಯಿಂದ ಬಂದವರಿಗೆ ಚಿಕಿತ್ಸೆ ನೀಡುವುದು ನಮ್ಮ ಆದ್ಯತೆ. ಆಯುಷ್ಮಾನ್ ಭಾರತ–ಆರೋಗ್ಯ ಕರ್ನಾಟಕ (ಎಬಿ–ಎಆರ್‌ಕೆ) ಕಾರ್ಡ್ ಹೊಂದಿದವರಿಗೆ ಗುಣಮಟ್ಟದ ಚಿಕಿತ್ಸೆ ಉಚಿತವಾಗಿ ದೊರೆಯುತ್ತದೆ. ರೋಗಿಗಳು ಬಯಸಿದರೆ ಸರ್ಕಾರಿ ವೈದ್ಯರ ಶಿಫಾರಸಿನ ಮೇರೆಗೆ ಕಲಬುರಗಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶವಿದೆ’ ಎಂದರು.

ಫೋನ್ ಇನ್‌ನಲ್ಲಿ ಸಾರ್ವಜನಿಕರು ಕೇಳಿದ ಪ್ರಶ್ನೆಗಳು ಹಾಗೂ ಅವುಗಳಿಗೆ ನೀಡಿದ ಉತ್ತರಗಳ ಸಂಕ್ಷಿಪ್ತ ರೂಪ ಇಲ್ಲಿದೆ.

ADVERTISEMENT

* ಆಯುಷ್ಮಾನ್ ಭಾರತ ಕಾರ್ಡ್ ಇದ್ದರೂ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡಿದ್ದಕ್ಕೆ ₹ 9 ಸಾವಿರ ಬಿಲ್ ಮಾಡಿದ್ದಾರೆ.

ಆರೋಗ್ಯ ಕಾರ್ಡ್‌ ಇದ್ದರೆ ಔಷಧಿ, ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ಮಾಡಬೇಕು. ಔಷಧಿಯನ್ನೂ ಆಸ್ಪತ್ರೆಯಿಂದ ನೀಡಬೇಕು. ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ದೂರು ನೀಡಿ ಔಷಧಿಗಾಗಿ ನೀಡಿದ್ದ ಹಣವನ್ನು ವಾಪಸ್ ಪಡೆಯಲು ಅವಕಾಶವಿದೆ.

* ಬೇಸಿಗೆಯ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಯಾವ ಕ್ರಮ ಕೈಗೊಳ್ಳಬೇಕು?

ಕಲಬುರಗಿ ಸೇರಿದಂತೆ ರಾಜ್ಯದಾದ್ಯಂತ ಬಿಸಿಲಿನ ಪ್ರಮಾಣ ಹೆಚ್ಚಳವಾಗುತ್ತಿದ್ದು, ಆದಷ್ಟೂ ಮಧ್ಯಾಹ್ನ 12ರಿಂದ 3ರವರೆಗೆ ಮನೆ ಅಥವಾ ಕಚೇರಿಯಿಂದ ಹೊರಗೆ ಬರದೇ ಇರುವುದೇ ಒಳ್ಳೆಯದು. ಬಿಸಿಲಿಗೆ ದೇಹದಲ್ಲಿನ ನೀರಿನ ಅಂಶ ಕಡಿಮೆಯಾಗುವುದರಿಂದ ನಿಂಬೆ ರಸ, ಕಲ್ಲಂಗಡಿ ಸೇರಿ ವಿವಿಧ ಹಣ್ಣುಗಳ ರಸವನ್ನು ಕುಡಿಯುತ್ತಿರಬೇಕು. ನೀರನ್ನು ಆಗಾಗ ಕುಡಿಯುತ್ತಿರಬೇಕು. ‌

ಬಿಸಿಲಿನಲ್ಲಿ ಸಂಚರಿಸಿದರೆ ತಲೆ ಸುತ್ತು ಬರುವುದು, ವಾಂತಿ ಬರುವುದು ಅಥವಾ ಸೂರ್ಯನ ಪ್ರಖರತೆಯಿಂದ ಸಾವು ಸಂಭವಿಸಬಹುದು. ಆದ್ದರಿಂದ ಬೇಸಿಗೆಯಲ್ಲಿ ಓಆರ್‌ಎಸ್ ಪುಡಿಯನ್ನು ನೀರಿನಲ್ಲಿ ಬೆರೆಸಿ ಕುಡಿಯಬೇಕು. ಹೊರಗಡೆ ಸಂಚರಿಸುವಾಗ ದೇಹಕ್ಕೆ ತೆಳುವಾದ ಬಟ್ಟೆಯನ್ನು ಧರಿಸಬೇಕು. ಫ್ರಿಡ್ಜ್‌ನಲ್ಲಿಟ್ಟ ತಂಪು ನೀರನ್ನು ಕುಡಿಯಬಾರದು.

* ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿಯೂ ಸ್ಥೂಲಕಾಯ ಹೆಚ್ಚುತ್ತಿದ್ದು, ಇದಕ್ಕೆ ಕಾರಣವೇನು?

ಆಹಾರ ಕ್ರಮದಲ್ಲಿ ಬದಲಾವಣೆ ಆಗಿರುವುದು, ಜಂಕ್‌ಫುಡ್ ತಿನ್ನುವುದು, ಹಸಿವೇ ಇಲ್ಲದಿದ್ದರೂ ಊಟ ಮಾಡುವುದರಿಂದ ಸ್ಥೂಲ ಕಾಯ ಆಗುತ್ತದೆ. ತರಕಾರಿ ಹಾಗೂ ಆಹಾರ ಪದಾರ್ಥಗಳನ್ನು ಫ್ರಿಡ್ಜ್‌ನಲ್ಲಿ ವಾರಗಟ್ಟಲೇ ಇಟ್ಟು ತಿನ್ನುವ ಬದಲು ತಾಜಾ ತರಕಾರಿ ಸೇವಿಸಬೇಕು. ಮೈದಾ, ಗೋಧಿ ಹಿಟ್ಟಿನಿಂದ ಮಾಡಿದ ಆಹಾರ ಪದಾರ್ಥವನ್ನು ಹೆಚ್ಚು ತಿನ್ನಬಾರದು. ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚು ಗೋಧಿ ಪದಾರ್ಥದ ಬದಲು ಜೋಳದಿಂದ ಮಾಡಿದ ರೊಟ್ಟಿ, ಮೊಸರು, ಮಜ್ಜಿಗೆಯನ್ನು ಹೆಚ್ಚು ಸೇವಿಸಬೇಕು.

* ಸ್ಮಾರ್ಟ್‌ಫೋನ್‌ನ ಅತಿಯಾದ ಬಳಕೆಯಿಂದ ಮಕ್ಕಳಲ್ಲಿ ನಿದ್ರಾಹೀನತೆ ಹೆಚ್ಚುತ್ತಿದೆ. ಇದಕ್ಕೆ ಪರಿಹಾರವೇನು?‌‌

ಕೋವಿಡ್‌ ಸಮಯದಲ್ಲಿ ಶಾಲಾ, ಕಾಲೇಜುಗಳ ಬಂದ್ ಆದಾಗ ಆನ್‌ಲೈನ್‌ ಕ್ಲಾಸ್‌ ಸಲುವಾಗಿ ಸ್ಮಾರ್ಟ್‌ಫೋನ್‌ಗಳ ಬಳಕೆ ಅತಿಯಾಯಿತು. ಬಹುತೇಕ ಮಕ್ಕಳಲ್ಲಿ ಮೊಬೈಲ್ ನೋಡುವುದು ದೊಡ್ಡ ಗೀಳಾಗಿದೆ. ಹೀಗಾಗಿ, ತಡರಾತ್ರಿಯಾದರೂ ಮೊಬೈಲ್ ನೋಡುವುದರಲ್ಲೇ ಮೈಮರೆತಿರುತ್ತಾರೆ. ಗೊತ್ತಿದ್ದೋ ಗೊತ್ತಿಲ್ಲದೆಯೇ ಅಶ್ಲೀಲ ದೃಶ್ಯಗಳನ್ನೂ ವೀಕ್ಷಿಸುತ್ತಾರೆ. ಈ ಬಗ್ಗೆ ಪೋಷಕರು ಮಕ್ಕಳ ಮೇಲೆ ನಿಗಾ ವಹಿಸಲೇಬೇಕು. ಅನಗತ್ಯವಾಗಿ ಮಕ್ಕಳ ಕೈಗೆ ಫೋನ್ ಕೊಡಬಾರದು.

4 ಜಿ, 5 ಜಿ ತರಂಗಾಂತರಗಳು ಮೊಬೈಲ್ ನೆಟ್‌ವರ್ಕ್ ವೇಗಗೊಳಿಸಿವೆ ನಿಜ. ಆದರೆ, ಮುಂದಿನ ದಿನಗಳಲ್ಲಿ ಈ ತರಂಗಾಂತರಗಳಿಂದಲೇ ಹಲವು ಬಗೆಯ ಸಮಸ್ಯೆಗಳು ಎದುರಾಗಬಹುದು. ಈ ಬಗ್ಗೆ ಈಗಿನಿಂದಲೇ ಎಚ್ಚರಿಕೆ ವಹಿಸಬೇಕು.

* ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್ ವ್ಯವಸ್ಥೆ ಸರಿಯಾಗಿ ನಡೆಯುತ್ತಿರಲಿಲ್ಲ. ಈಗ ಪರಿಸ್ಥಿತಿ ಹೇಗಿದೆ?

ರಾಜ್ಯ ಸರ್ಕಾರ ಕಲಬುರಗಿ ಅಷ್ಟೇ ಅಲ್ಲ. ರಾಜ್ಯದಾದ್ಯಂತ ಖಾಸಗಿ ಏಜೆನ್ಸಿಗಳಿಗೆ ಡಯಾಲಿಸಿಸ್ ನಿರ್ವಹಣೆಯನ್ನು ವಹಿಸಿದೆ. ನಾವು ಜಾಗ, ವಿದ್ಯುತ್ ಹಾಗೂ ನೀರನ್ನು ಪೂರೈಸುತ್ತೇವೆ. ಉಳಿದ ವೈದ್ಯಕೀಯ ಸೇವೆಯನ್ನು ಅವರೇ ನೀಡುತ್ತಾರೆ. ಹಿಂದಿನ ಏಜೆನ್ಸಿಯನ್ನು ಬದಲಿಸಿ ಬೇರೆ ಏಜೆನ್ಸಿಗೆ ವಹಿಸಲಾಗಿದೆ. ಈಗ ಪರಿಸ್ಥಿತಿ ಸುಧಾರಿಸುತ್ತಿದೆ.

ಪಡಿತರ ಚೀಟಿಯಂತೆ ಆರೋಗ್ಯ ಕಾರ್ಡ್ ಪಡೆಯಿರಿ

‘ಬಿಪಿಎಲ್‌ ಕಾರ್ಡ್‌ ಹೊಂದಿದ್ದವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಸಿಗದ ಕೆಲವು ಚಿಕಿತ್ಸೆಗೆಳನ್ನು ಖಾಸಗಿ ಆಸ್ಪತ್ರೆಯಲ್ಲಿ ಪಡೆಯಲು ಪಡಿತರ ಚೀಟಿಯಂತೆ ಆರೋಗ್ಯ ಕಾರ್ಡ್ ಪಡೆಯಬೇಕು’ ಎಂದು ಡಾ. ಅಂಬಾರಾಯ ರುದ್ರವಾಡಿ ಸಲಹೆ ನೀಡಿದರು.

ಆಯುಷ್ಮಾನ್ ಭಾರತ್, ಬಿಪಿಎಲ್‌ ಕಾರ್ಡ್ ಅಡಿ ಕೆಲವು ಆರೋಗ್ಯ ಸೇವೆಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಶೇ 50ರಷ್ಟು ಶುಲ್ಕ, ಕೆಲವು ಉಚಿತವಾಗಿ ಸಿಗಲಿವೆ. ಪರಿಶಿಷ್ಟ ಸಮುದಾಯದವರಿಗೆ ಯಾವುದೇ ಶುಲ್ಕ ಇರುವುದಿಲ್ಲ. ಆದರೆ, ಬಿಪಿಎಲ್‌ ಕಾರ್ಡ್‌ ಹೊಂದಿದ್ದ ಹಲವರು ಆರೋಗ್ಯ ಕಾರ್ಡ್‌ ಮಾಡಿಸಿಕೊಳ್ಳುತ್ತಿಲ್ಲ. ಅರ್ಹತೆ ಇದ್ದರೂ ಶುಲ್ಕ ಕೊಟ್ಟು ಆರೋಗ್ಯ ಸೇವೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಬರುವಾಗ ಆಧಾರ್ ಮತ್ತು ಪಡಿತರ ಚೀಟಿ ಕಡ್ಡಾಯವಾಗಿ ತರಬೇಕು ಎಂದರು.

ಕೆಲವರು ಪಡಿತರ ಚೀಟಿ ಇದ್ದು ಆಧಾರ್‌ನೊಂದಿಗೆ ಜೋಡಣೆ ಮಾಡಿರುವುದಿಲ್ಲ. ಕಾರ್ಡ್ ಇಲ್ಲದ ಮಾತ್ರಕ್ಕೆ ಆರೋಗ್ಯ ಸೇವೆ ನಿರಾಕರಿಸುವಂತಿಲ್ಲ. ಅನಿವಾರ್ಯವಾಗಿ ಶುಲ್ಕ ಪಡೆದು ಚಿಕಿತ್ಸೆ ನೀಡಬೇಕಾಗುತ್ತದೆ. ಆಧಾರ್–ಪಡಿತರ ಚೀಟಿ ಜೋಡಣೆಯಾದರೆ ಇನ್ನಷ್ಟು ಉತ್ತಮ ಸೇವೆ ಕೊಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಅರ್ಹ ಕಾರ್ಡ್‌ದಾರರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಸಿಗದ ಚಿಕಿತ್ಸೆಗಳಿಗೆ ಖಾಸಗಿ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗುತ್ತದೆ. ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡ ರಾಜ್ಯ ಅಥವಾ ನೆರೆಯ ರಾಜ್ಯಗಳ ಯಾವುದೇ ಸರ್ಕಾರರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು’ ಎಂದು ತಿಳಿಸಿದರು.

ಸಾಂಕ್ರಾಮಿಕವಲ್ಲದ ರೋಗ, ಅಪಘಾತದಿಂದ ಸಾವು

‘ಕೋವಿಡ್ ಕಾರಣಕ್ಕೆ ಕುಸಿದು ಬಿದ್ದು ಮೃತಪಟ್ಟಿದ್ದಾಗಿ ಎಲ್ಲಿಯೂ ದೃಢಪಟ್ಟಿಲ್ಲ. ಇದಕ್ಕೆ ಸಾಂಕ್ರಾಮಿಕವಲ್ಲದ ರೋಗಗಳು ಪ್ರಮುಖ ಕಾರಣ’ ಎಂದು ಡಾ. ಅಂಬಾರಾಯ ರುದ್ರವಾಡಿ ಅಭಿಪ್ರಾಯಪಟ್ಟರು.

‘ಜನರ ಆಹಾರ ಪದ್ಧತಿ ಬದಲಾಗಿದೆ. ನಾವು ವ್ಯಾಯಾಮ, ದೈಹಿಕ ಚಟುವಟಿಕೆಗಳಿಂದ ದೂರವಾಗಿದ್ದೇವೆ. ಕ್ಯಾನ್ಸರ್, ಹೃದಯಘಾತ, ನರರೋಗ ಪಾರ್ಶ್ವ, ಮೂತ್ರಪಿಂಡದಲ್ಲಿ ಕಲ್ಲಿನಂತಹ ಸಾಂಕ್ರಾಮಿಕವಲ್ಲದ ರೋಗಗಳು ಹೆಚ್ಚಾಗುತ್ತಿವೆ. ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ರೋಗಗಳಿಗಿಂತ ರಸ್ತೆ ಅಪಘಾತದಲ್ಲಿ ಹೆಚ್ಚು ಜನರು ಸಾವನ್ನಪ್ಪುತ್ತಿದ್ದಾರೆ. ಜನರಲ್ಲಿ ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮ ಪಾಲನೆ ಬಗ್ಗೆ ಜಾಗೃತಿ ಮೂಡಿಸಿದರೆ ಸಾವು–ನೋವುಗಳನ್ನು ತಪ್ಪಿಸಬಹುದು ಎಂದರು.

‘ಬದಲಾಗಲಿ ಜೀವನ ಶೈಲಿ’

ಆಧುನಿಕತೆ ಬೆಳೆದಂತೆಲ್ಲ ನಮ್ಮ ಜೀವನ ಶೈಲಿಯಿಂದ ಅನಾರೋಗ್ಯ ಹೆಚ್ಚಾಗುತ್ತಿದೆ. ನಾವು ಚಿಕ್ಕವರಿದ್ದಾರೆ. ಕಬಡ್ಡಿ, ಚಿನ್ನಿದಾಂಡು ಆಡುತ್ತಿದ್ದೆವು. ಇದರಿಂದ ದೇಹಕ್ಕೆ ವ್ಯಾಯಾಮ ಆಗುತ್ತಿತ್ತು. ಬಾವಿಗಳಲ್ಲಿ ಈಜಾಡುತ್ತಿದ್ದೆವು. ಈಗಿನ ಮಕ್ಕಳು ಆಟಗಳತ್ತ ಆಸಕ್ತಿ ವಹಿಸುತ್ತಿಲ್ಲ. ಗಂಟೆಗಟ್ಟಲೇ ಕುಳಿತಲ್ಲಿಯೇ ಕುಳಿತು ಮೊಬೈಲ್ ನೋಡುವ ಗೀಳು ಬೆಳೆಸಿಕೊಂಡಿದ್ದಾರೆ. ಇದರಿಂದಾಗಿ ದೇಹದಲ್ಲಿ ಬೊಜ್ಜು ಬೆಳೆಯುತ್ತಿದೆ. ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವುದು ಅವಶ್ಯವಾಗಿದೆ ಎಂದು ಡಾ. ರುದ್ರವಾಡಿ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.