ADVERTISEMENT

ಕಾಂಗ್ರೆಸ್‌ ಕುತಂತ್ರ ಗಮನಿಸುತ್ತಿದೆ ದೇಶ

ಪಾಕಿಸ್ತಾನ ಮಾನ ಹರಾಜು ಹಾಕಲು ಸಿಎಎ ಜಾರಿ: ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 13:46 IST
Last Updated 28 ಡಿಸೆಂಬರ್ 2019, 13:46 IST

ಕಲಬುರ್ಗಿ: ‘ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ನಂತರ ನಡೆಯುತ್ತಿರುವ ವಿದ್ಯಾಮಾನಗಳನ್ನು ದೇಶದ ಜನ ಶಾಂತರಾಗಿ ಗಮನಿಸುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಮಾಡಿದ ಕೆಲಸ ಎಂಥದ್ದು, ಅದಕ್ಕೆ ಕಾಂಗ್ರೆಸ್‌ ಮಾಡುತ್ತಿರುವ ಕುತಂತ್ರ ಏನೆಂದು ಜನರಿಗೆ ಅರ್ಥವಾಗಿದೆ’ ಎಂದು ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್‌ ಹೇಳಿದರು.

‘ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಯಲ್ಲಿ ಪಾಕಿಸ್ತಾನ ಸಂಪೂರ್ಣ ವಿಫಲವಾಗಿದೆ. ಆ ದೇಶದ ಮಾನವನ್ನು ವಿಶ್ವಮಟ್ಟದಲ್ಲಿ ಹರಾಜು ಹಾಕಲು ಮೋದಿ ಅವರು ಪೌರತ್ವ ಕಾಯ್ದೆ ಜಾರಿಗೆ ತಂದರು. ಆದರೆ, ಇದನ್ನು ವಿರೋಧಿಸುವ ಮೂಲಕ ಕಾಂಗ್ರೆಸ್‌ ಪಾಕಿಸ್ತಾನವನ್ನು ರಕ್ಷಿಸಲು ಹೊರಟಿದೆ’ ಎಂದು ಅವರು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ದೇಶ ವಿಭಜನೆ ಆದ ಮೇಲೆ ನೆಹರೂ ಹಾಗೂ ಪಾಕಿಸ್ತಾನದ ಲಿಯಾಕತ್‌ ಅವರು ಒಂದು ಒಪ್ಪಂದಕ್ಕೆ ಸಹಿ ಹಾಕಿದ್ದರು. ಅದರ ಪ್ರಕಾರ ಆಯಾ ದೇಶಗಳು ಅಲ್ಲಿನ ಅಲ್ಪಸಂಖ್ಯಾತರ ಹಿತರಕ್ಷಣೆ ಕಾಪಾಡಲು ಬದ್ಧವಾಗಿರಬೇಕು. ಭಾರತ ತನ್ನ ಪಾಲಿನ ಕೆಲಸವನ್ನು ಬದ್ಧತೆಯಿಂದ ಮಾಡಿಕೊಂಡು ಬಂದಿದೆ. ಆದರೆ, ಪಾಕ್‌ನಲ್ಲಿನ ಹಿಂದೂಗಳನ್ನು ರಕ್ಷಿಸುವಲ್ಲಿ ಆ ದೇಶ ಕಾಳಜಿ ತೋರಲಿಲ್ಲ. ಮಾನವ ಹಕ್ಕುಗಳ ರಕ್ಷಣೆಯಲ್ಲಿ ವಿಶ್ವ ಸಂಸ್ಥೆ ನಿಮಯಗಳನ್ನೂ ಗಾಳಿಗೆ ತೂರಿದೆ. ಇದನ್ನು ಜಗತ್ತಿನ ಮುಂದಿಡಲು ಮೋದಿ ಸರ್ಕಾರ ಹೊರಟಿದೆ’ ಎಂದು ವಿವರಿಸಿದರು.

ADVERTISEMENT

‘ಈ ಕಾಯ್ದೆಯಿಂದ ಭಾರತದ ಮುಸ್ಲಮರಿಗೆ ಯಾವುದೇ ಅಪಾಯವಿಲ್ಲ. ಪೌರತ್ವ ಕಾಯ್ದೆಯನ್ನು ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರೇ ಪ್ರತಿಪಾದನೆ ಮಾಡಿದ್ದರು. ಈಗಿನ ಕಾಯ್ದೆಯಲ್ಲಿ ಯಾರ ಪೌರತ್ವ ಕಿತ್ತುಕೊಳ್ಳುವ ಅಂಶವಿಲ್ಲ. ಇದು ಮುಸ್ಲಿಮರಿಗೂ ಗೊತ್ತಿದೆ. ಆದರೆ, ಕಾಂಗ್ರೆನ್‌ ತನ್ನ ವೋಟ್‌ಬ್ಯಾಂಕ್‌ ಸಲುವಾಗಿ ಪ್ರಚೋದನೆ ನೀಡುತ್ತಿದೆ. ಕಾಂಗ್ರೆಸ್‌ನ ಕುತಂತ್ರ ರಾಜಕಾರಣದ ಮುಂದೆ ನಾವು ಸೋತಿದ್ದೇವೆ’ ಎಂದು ಹೇಳಿದರು.

‘ಈ ಕಾಯ್ದೆ ಮಾನವೀಯ ಕಳಕಳಿ ನೆಲೆಯಲ್ಲಿ ಜಾರಿಗೆ ತಂದಿರುವಂಥದ್ದು. ನೆರೆಯ ಮುಸ್ಲಿಂ ರಾಷ್ಟ್ರಗಳಲ್ಲಿ ಬದುಕಲು ಸಾಧ್ಯವಾಗದ ಎಲ್ಲ ಧರ್ಮ– ಜಾತಿಯವರಿಗೂ ನೆಲೆ ಕಲ್ಪಿಸುವುದು ಮಾನವೀಯತೆ ಅಲ್ಲವೇ? ಎಲ್ಲಕ್ಕಿಂತ ಹೆಚ್ಚಾಗಿ, ಪಾಕಿಸ್ತಾನದಿಂದ ವಲಸೆ ಬಂದವರಲ್ಲಿ ಶೇಕಡ 90 ಮಂದಿ ಶೋಷಿತರು, ದಲಿತರೇ ಆಗಿದ್ದಾರೆ. ಅವರಿಗೆ ರಕ್ಷಣೆ ಕೊಡುವುದಕ್ಕೆ ಪ್ರಧಾನಿ ಮುಂದಾಗಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.