ADVERTISEMENT

‘ಪರಿಷತ್ತಿನಲ್ಲಿ ಪ್ರಯೋಗಾತ್ಮಕ ಕೆಲಸ ಮಾಡುವೆ’

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 4:21 IST
Last Updated 25 ಅಕ್ಟೋಬರ್ 2021, 4:21 IST
ಬಿ.ಎಚ್.ನಿರಗುಡಿ
ಬಿ.ಎಚ್.ನಿರಗುಡಿ   

ಕಲಬುರಗಿ: ‘ಕನ್ನಡ ಸಾಹಿತ್ಯ ‍ಪರಿಷತ್ತಿನಿಂದ ಜಿಲ್ಲೆಯಲ್ಲಿ ಪ್ರಯೋಗಾತ್ಮಕ ಕೆಲಸ ಮಾಡುವ ಉತ್ಸಾಹವಿದೆ. ಇದಕ್ಕೆ ಕನ್ನಡಿಗರು ಅವಕಾಶ ನೀಡಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಸ್ಪರ್ಧಿ ಬಿ.ಎಚ್.ನಿರಗುಡಿ ಕೋರಿದರು.‌

‘ಕೊರೊನಾ ಕಾರಣ ಮುಂದೂಡಲಾಗಿದ್ದ ಪರಿಷತ್‌ ಚುನಾವಣೆ ನವೆಂಬರ್‌ 21ಕ್ಕೆ ನಿಗದಿಯಾಗಿದೆ. ಜಿಲ್ಲೆಯಲ್ಲಿ ಒಟ್ಟು 16,621 ಮತದಾರರು ಇದ್ದಾರೆ. ಈವರೆಗೆ ಅರ್ಧಕ್ಕೂ ಹೆಚ್ಚು ಮತದಾರರನ್ನು ಭೇಟಿ ಮಾಡಿ ಮತ ಕೋರಿದ್ದೇನೆ. ಎಲ್ಲ ಕಡೆ ಬೆಂಬಲ ಸಿಗುವ ನಿರೀಕ್ಷೆ ಇದೆ’ ಎಂದು ಅವರು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಈ ಹಿಂದೆ ಒಂದು ಬಾರಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ ಅನುಭವವಿದೆ. ಅಧ್ಯಕ್ಷ ಸ್ಥಾನಕ್ಕೆ ಎರಡನೇ ಬಾರಿ ಸ್ಪರ್ಧಿಸಿದ್ದೇನೆ. ನಾನು ಆಯ್ಕೆಯಾದರೆ ನಗರದ ಬಾಪುಗೌಡ ದರ್ಶನಾಪುರ ರಂಗಮಂದಿರಕ್ಕೆ ಆಧುನಿಕ ಸಲಕರಣೆಗಳನ್ನು ಒದಗಿಸುವ ಆಸಕ್ತಿ ಇದೆ’ ಎಂದು ಅವರು ತಿಳಿಸಿದರು.

ADVERTISEMENT

‘ರಂಗಮಂದಿರಕ್ಕೆ ಧ್ವನಿವರ್ಧಕ, ಬೆಳಕು, ಆಸನಗಳ ವ್ಯವಸ್ಥೆ ಸರಿಯಾಗಿ ಕಲ್ಪಿಸುವುದು ನನ್ನ ಉದ್ದೇಶ. ತಾಲ್ಲೂಕು ಕೇಂದ್ರಗಳಲ್ಲೂ ಕನ್ನಡ ಭವನ, ವಲಯ ಮಟ್ಟದಲ್ಲಿ ಸಾಹಿತ್ಯ ಚಟುವಟಿಕೆಗಳು, ಪುಸ್ತಕ ಸಂತೆ, ಗಡಿನಾಡು ಕನ್ನಡ ಕಾರ್ಯಕ್ರಮ ಕಡ್ಡಾಯವಾಗಿ ಏರ್ಪಡಿಸುವೆ’ ಎಂದರು.

ಪರಿಷತ್ತಿನ ಮಾಜಿ ಘಟಕದ ಗೌರವ ಕಾರ್ಯದರ್ಶಿ ವಿಜಯಕುಮಾರ ಪರುತೆ, ಲಿಂಗರಾಜ ಸಿರಗಾಪುರ, ರಾಜೇಂದ್ರ ಯರನಾಳೆ, ಸೋಮಶೇಖರ, ವಿಜಯಕುಮಾರ ಮಠಪತಿ, ಎಸ್.ಎಲ್. ಪಾಟೀಲ, ಆನಂದ ಕಪನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.