ADVERTISEMENT

ಮಹಿಳಾ ದೌರ್ಜನ್ಯ ತಡೆ ನಮ್ಮೆಲ್ಲರ ಜವಾಬ್ದಾರಿ: ಜೇಬಾ ಪರವೀನ್

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2023, 14:05 IST
Last Updated 19 ಸೆಪ್ಟೆಂಬರ್ 2023, 14:05 IST
ಕಲಬುರಗಿಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯಲ್ಲಿ ಮಹಿಳಾ ದೌರ್ಜನ್ಯ ತಡೆಗಾಗಿ ಅರಿವಿನ ಆಂದೋಲನ ನಡೆಸಲು ಸಂಪನ್ಮೂಲ ವ್ಯಕ್ತಿಗಳನ್ನು ಸಿದ್ಧಪಡಿಸುವ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು
ಕಲಬುರಗಿಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯಲ್ಲಿ ಮಹಿಳಾ ದೌರ್ಜನ್ಯ ತಡೆಗಾಗಿ ಅರಿವಿನ ಆಂದೋಲನ ನಡೆಸಲು ಸಂಪನ್ಮೂಲ ವ್ಯಕ್ತಿಗಳನ್ನು ಸಿದ್ಧಪಡಿಸುವ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು   

ಕಲಬುರಗಿ: ‘ದೇಶದಲ್ಲಿ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯಗಳು ನಾಗರಿಕರು ತಲೆ ತಗ್ಗಿಸುವಂತೆ ಮಾಡಿವೆ. ಸಮಾಜದಲ್ಲಿ ಅರಿವು ಮೂಡಿಸುವ ಜವಾಬ್ದಾರಿ ಪ್ರಜ್ಞಾವಂತರಾದ ನಮ್ಮೆಲ್ಲರ ಮೇಲಿದೆ‘ ಎಂದು ಬೀಬಿ ರಜಾ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯೆ ಜೇಬಾ ಪರವೀನ್ ಹೇಳಿದರು.

ಪ್ರಜ್ಞಾ ಕಾನೂನು ಸಲಹಾ ಸಮಿತಿ ಮತ್ತು ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ ವತಿಯಿಂದ ಮಹಿಳಾ ದೌರ್ಜನ್ಯ ತಡೆಗಾಗಿ ಅರಿವಿನ ಆಂದೋಲನ ನಡೆಸಲು ಸಂಪನ್ಮೂಲ ವ್ಯಕ್ತಿಗಳನ್ನು ಸಿದ್ಧಪಡಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಪ್ರಾಸ್ತಾವಿಕ ಮಾತನಾಡಿದ ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಮೀನಾಕ್ಷಿ ಬಾಳಿ, ‘ಜಿಲ್ಲೆಯಲ್ಲಿ ಇತ್ತೀಚೆಗೆ ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ಅತ್ಯಾಚಾರ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ಘಟನೆ ಬಳಿಕ ಪ್ರತಿಭಟಿಸುವುದಕ್ಕಿಂತ ಘಟಿಸದಂತೆ ನೋಡಿಕೊಳ್ಳುವುದು, ಎಲ್ಲ ಬಗೆಯ ದೌರ್ಜನ್ಯಗಳು ನಿರ್ನಾಮವಾಗುವಂತೆ ಮಾಡುವುದೇ ನಮ್ಮ ಗುರಿ. ಲಿಂಗ ಅಸಮಾನತೆಯನ್ನು ಹೋಗಲಾಡಿಸಬೇಕು. ಅದಕ್ಕಾಗಿ ನಾವು ಸಮಾಜದ ಎಲ್ಲ ವಿಭಾಗಗಳಿಗೆ ಲಿಂಗ ಸಂವೇದನಾಶೀಲ ತರಬೇತಿ ನೀಡಬೇಕು. ತರಬೇತಿ ನೀಡುವ ವ್ಯಕ್ತಿಗಳನ್ನು ತಯಾರು ಮಾಡಲು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

ADVERTISEMENT

ರಾಜೇಂದ್ರ ಕೊಂಡಾ ಮಾತನಾಡಿ, ‘ಪ್ರತಿ ಹತ್ತು ಅತ್ಯಾಚಾರಗಳ ಪೈಕಿ ಆರು ಪ್ರಕರಣಗಳು ಅಪ್ರಾಪ್ತ ಮಕ್ಕಳ ಮೇಲೆ ಘಟಿಸುತ್ತಿವೆ. ಆದರೆ ನಮ್ಮ ಕಾನೂನು ವಯಸ್ಕರ ಮೇಲಿನ ಅತ್ಯಾಚಾರ ಮತ್ತು ಅಪ್ರಾಪ್ತರ ಅತ್ಯಾಚಾರಗಳ ನಡುವೆ ವ್ಯತ್ಯಾಸ ಮಾಡುವುದಿಲ್ಲ. ಈ ಬಗ್ಗೆ ಚರ್ಚೆಯಾಗಬೇಕಿದೆ’ ಎಂದರು.

ನಿವೃತ್ತ ಪ್ರಾಧ್ಯಾಪಕಿ ಶಕುಂತಲಾ ದುರಗಿ,  ನಾಗೇಂದ್ರಪ್ಪ ಅವರಾದ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ವಾಣಿ ಪೆರಿಯೋಡಿ ಹಲವು ಚಟುವಟಿಕೆಗಳ ಮೂಲಕ ವಿಷಯ ಮಂಡಿಸಿದರು. ವಿವಿಧ ವರ್ಗಗಳ ಮಕ್ಕಳೊಂದಿಗೆ ಹೇಗೆ ಮಾತನಾಡಬೇಕು ಎನ್ನುವುದನ್ನು ಪರಿಣಾಮಕಾರಿಯಾಗಿ ವಿವರಿಸಿದರು. 

ಅಧ್ಯಕ್ಷತೆ ವಹಿಸಿದ್ದ ಹೋರಾಟಗಾರ್ತಿ ಕೆ.ನೀಲಾ ಮಾತನಾಡಿದರು. ಸಂಗೀತ ಉಪನ್ಯಾಸಕಿ ರೇಣುಕಾ ಹಾಗರಗುಂಡಗಿ, ಲೈಂಗಿಕ ದೌರ್ಜನ್ಯ ತಡೆ ಸಮಿತಿ ಸಂಚಾಲಕಿ ಚಂದ್ರಕಲಾ ಪಾಟೀಲ, ಉಪನ್ಯಾಸಕಿ ಶಿವಲೀಲಾ ಧೋತ್ರೆ, ಸಿದ್ಧಾರ್ಥ ಹೊಸೂರೆ ಸೇರಿದಂತೆ ಪ್ರಮುಖರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.