ADVERTISEMENT

ಸನ್ನಡತೆ ಆಧಾರದ ಮೇಲೆ ಕೈದಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2019, 13:13 IST
Last Updated 7 ನವೆಂಬರ್ 2019, 13:13 IST

ಕಲಬುರ್ಗಿ: ಕಾರಾಗೃಹದ ಪ್ರತಿಯೊಬ್ಬ ಬಂದಿಯೂ ಕಾಯಕ ಶ್ರಮಜೀವಿಯಾಗಿ ಸನ್ನಡತೆ ಆಧಾರದ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಬಿಡುಗಡೆ ಹೊಂದಿ ಕುಟುಂಬದವರೊಡನೆ ಉತ್ತಮ ಜೀವನ ನಡೆಸುವುದರ ಜೊತೆಗೆ ತಮ್ಮ ಜೀವನದಲ್ಲಿ ಗಾಂಧೀಜಿಯವರ ತತ್ವಾದರ್ಶ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಗೋಮತಿ ರಾಘವೇಂದ್ರ ತಿಳಿಸಿದರು.

ಕೇಂದ್ರ ಕಾರಾಗೃಹದಲ್ಲಿ ಮಹಾತ್ಮ ಗಾಂಧೀಜಿಯವರ 150ನೇ ಜಯಂತಿ ಅಂಗವಾಗಿ ಇತ್ತೀಚೆಗೆ ಅಲ್ಪಾವಧಿ ಶಿಕ್ಷಾ ಬಂದಿ ಅವಧಿ ಪೂರ್ವ ಬಿಡುಗಡೆ ಸಮಾರಂಭದಲ್ಲಿ ಸನ್ನಡತೆಯ ಆಧಾರದ ಮೇಲೆ ಬಿಡುಗಡೆಯಾದ ಬ್ರಿಜೇಶಕುಮಾರ ಶಿವಬಾಲಕ ಅವರಿಗೆ ಬಿಡುಗಡೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕಲಬುರ್ಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ಎಸ್. ರಮೇಶ್ ಮಾತನಾಡಿ, ಪ್ರತಿಯೊಬ್ಬರೂ ಎಲ್ಲ ಬಂದಿಗಳ ಜೊತೆಗೆ ಸಹೋದರತ್ವ ಬೆಳೆಸಿಕೊಳ್ಳಬೇಕು. ಸಹಬಂದಿಗಳನ್ನು ಪ್ರೀತಿಯಿಂದ ಕಾಣಬೇಕು. ಕಾರಾಗೃಹದಲ್ಲಿನ ಕಾರ್ಖಾನೆ ವಿಭಾಗದಲ್ಲಿ ಕೆಲಸ ಮಾಡಿ ಆರ್ಥಿಕವಾಗಿ ಸಬಲರಾಗಿ ಕುಟುಂಬದವರ ಮೇಲೆ ಅವಲಂಬಿತರಾಗದೇ ಸ್ವಾವಲಂಬಿಯಾಗಿ ಬದುಕುವುದಕ್ಕೆ ಶ್ರಮವಹಿಸಿ ಕೆಲಸ ಮಾಡಬೇಕು. ಒಳ್ಳೆಯ ನಡತೆಯನ್ನು ಬೆಳೆಸಿಕೊಂಡು ಇಲ್ಲಿಂದ ಬಿಡುಗಡೆಯಾಗಿ ಹೋಗಬೇಕು ಎಂದರು.

ADVERTISEMENT

ಕಾರಾಗೃಹದ ಅಧೀಕ್ಷಕ ಡಾ.ಐ.ಜೆ.ಮ್ಯಾಗೇರಿ, ಡಾ.ಬಸವರಾಜ ಕಿರಣಗಿ, ವೈದ್ಯಾಧಿಕಾರಿಗಳು ಮತ್ತು ಜೈಲರ್‌ಗಳು ಪಾಲ್ಗೊಂಡಿದ್ದರು. ವೀಕ್ಷಕಿ ದೇವಮ್ಮ ಸ್ವಾಗತ ಗೀತೆ ಹಾಡಿದರು ಸುನಂದಾ ಸ್ವಾಗತಿಸಿದರು. ಸರೋಜಾ ವಂದಿಸಿದರು. ಶಿಕ್ಷಕ ನಾಗರಾಜ ಮೂಲಗೆ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.