ಕಲಬುರಗಿ: 'ಭಾರತವು ಜಗತ್ತಿನ ಚುಕ್ಕಾಣಿ ಹಿಡಿಯಬೇಕಾದರೆ ಜ್ಞಾನದ ಸಂಪತ್ತಿಗೆ ಒತ್ತುನೀಡಬೇಕಿದೆ' ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಐಟಿ ಬಿಟಿ ಹಾಗೂ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
2024-25 ಮತ್ತು 2025-26 ಸಾಲಿನ ಕೆಕೆಆರ್ ಡಿಬಿ ಮ್ಯಾಕ್ರೋ ಯೋಜನೆಯಡಿಯಲ್ಲಿ ನವೀಕರಣಗೊಂಡ ನಗರದ ಡಾ.ಎಸ್. ಎಂ. ಪಂಡಿತ್ ರಂಗಮಂದಿರ ಉದ್ಘಾಟನೆ ನೆರವೇರಿಸಿ ಹಾಗೂ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
'ಜ್ಞಾನ ಹಾಗೂ ಕೌಶಲ್ಯದ ರಾಜಧಾನಿಯಾಗಿ ರಾಜ್ಯ ಮುನ್ನುಗ್ಗುತ್ತಿದೆ. ಬಂಡವಾಳ ಆಕರ್ಷಣೆಗೆ ಕೇವಲ ಆರ್ಥಿಕ ನೀತಿಗಳಲ್ಲ ಶಿಕ್ಷಣ ಹಾಗೂ ಜ್ಞಾನಕ್ಕೆ ಅಗ್ರಸ್ಥಾನ ನೀಡಬೇಕು. ಈ ಕೆಲಸ ಶಿಕ್ಷಕರಿಂದ ಮಾತ್ರ ಸಾಧ್ಯ. ಶಿಕ್ಷಕರಿಲ್ಲದೇ ಸಮಾಜವಿಲ್ಲ ಹಾಗೂ ದೇಶವಿಲ್ಲ' ಎಂದರು.
'ಪ್ರಗತಿಪರ ಸಮಾಜ ಕಟ್ಟಬೇಕಾದರೆ ವೈಜ್ಞಾನಿಕ ಮನೋಭಾವನೆ ಬೆಳೆಸಬೇಕು. ಇದರ ಜೊತೆಗೆ ಮಕ್ಕಳಲ್ಲಿ ಕುತೂಹಲ ಬೆಳೆಸುವುದು ಕೂಡಾ ಬಹಳ ಮುಖ್ಯವಾಗಿದೆ. ವಿದ್ಯಾರ್ಥಿಗಳು ಪ್ರಶ್ನೆ ಕೇಳುವಂತೆ ಅವರನ್ನು ಪ್ರೇರೇಪಿಸಬೇಕು' ಎಂದರು.
' ಪುರಾಣಗಳು ನಮ್ಮ ಸಾಂಸ್ಕೃತಿಕ ಗುರುತಿನ ಪ್ರತೀಕಗಳಾಗಿವೆ. ಆಧ್ಯಾತ್ಮಿಕ ಹಾಗೂ ನೈತಿಕ ಮೌಲ್ಯಗಳ ಬೆಳವಣಿಗೆಗೆ ಪುರಾಣಗಳು ಬೇಕು. ಆದರೆ, ಪುರಾಣಗಳನ್ನು ಇತಿಹಾಸಗಳೆಂದು ಹಾಗೂ ವಿಜ್ಞಾನವೆಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ಬದಲಿಗೆ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು' ಎಂದು ಅಭಿಪ್ರಾಯಪಟ್ಟರು.
'ಪ್ರಬುದ್ಧ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ. ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರು ಕೂಡಾ ಪ್ರಬುದ್ಧ ಸಮಾಜ ನಿರ್ಮಾಣಕ್ಕೆ ಒತ್ತು ನೀಡಿದ್ದರು ಇದನ್ನು ಶಿಕ್ಷಕರು ಮನಗಾಣಬೇಕು' ಎಂದರು.
ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಅಗತ್ಯವಿರುವ ಕಾರ್ಯಕ್ರಮಗಳಿದ್ದರೂ ಕೂಡಾ ಪರೀಕ್ಷಾ ಫಲಿತಾಂಶದ ಶೇಕಡಾವಾರು ಪ್ರಗತಿ ಕಂಡುಬರುತ್ತಿಲ್ಲ ಎಂದು ಸಚಿವರು ಈ ಸಲದ ಎಸ್ ಎಸ್ ಎಲ್ ಸಿ ಯ ಪರೀಕ್ಷೆಯ ಫಲಿತಾಂಶ ನಿರಾಶಾದಾಯಕ ವಾಗಿತ್ತು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಕರು ಈ ನಿಟ್ಟಿನಲ್ಲಿ ಅಗತ್ಯಶ್ರಮವಹಿಸಿ ಮುಂಬರುವ ಪರೀಕ್ಷೆ ಗಳಲ್ಲಿ ಫಲಿತಾಂಶದ ಗಣನೀಯ ಹೆಚ್ಚಳಕ್ಕೆ ಪ್ರಯತ್ನಿಸಬೇಕು ಎಂದು ಶಿಕ್ಷಕರಿಗೆ ಕರೆ ನೀಡಿದರು.
2024-25ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸರ್ಕಾರ ಶಾಲೆಯ ಮೂವರು ವಿದ್ಯಾರ್ಥಿಗಳಾದ ನೀಲಮ್ಮ, ಶಿವಕುಮಾರ ಹಾಗೂ ಸಂಪತ್ ಕುಮಾರ್ ಅವರಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು.
ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ 23 ಶಿಕ್ಷಕರಿಗೆ ಸನ್ಮಾನ ನೆರವೇರಿಸಲಾಯಿತು.
ವೇದಿಕೆಯ ಮೇಲೆ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ನಮೋಶಿ, ಬಿ.ಜಿ.ಪಾಟೀಲ, ಮಹಾನಗರ ಪಾಲಿಕೆ ಮೇಯರ್ ವರ್ಷಾ ರಾಜೀವ್ ಜಾನೆ, ಕುಡಾ ಅಧ್ಯಕ್ಷ ಮಜರ್ ಆಲಂಖಾನ್, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ., ಕೆಕೆಆರ್ಟಿಸಿ ವ್ಯವಸ್ಥಾಪಕಿ ಬಿ.ಸುಶೀಲಾ, ಕೆಕೆಆರ್‌ಡಿಬಿ ಕಾರ್ಯದರ್ಶಿ ನಲಿನ್ ಅತುಲ್, ಎಸ್ಪಿ ಅಡ್ಡೂರು ಶ್ರೀನಿವಾಸಲು, ಪಾಲಿಕೆ ಆಯುಕ್ತ ಅವಿನಾಶ್ ಶಿಂದೆ, ಸೇರಿದಂತೆ ಮತ್ತಿತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.