ಕಲಬುರ್ಗಿ:'ಬೀಜ ವಿಧೇಯಕ 2019' ಹೆಸರಲ್ಲಿ ಬಿತ್ತನೆ ಬೀಜ ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತರಲು ಹೊರಟಿರುವುದು ಖಂಡನೀಯ. ಈಗಾಗಲೇ ಬೆಳೆ ನಷ್ಟ, ಅತಿವೃಷ್ಟಿ–ಅನಾವೃಷ್ಟಿ, ಸರಿಯಾದ ಬೆಂಬಲ ಬೆಲೆ ಹಾಗೂ ಮಾರುಕಟ್ಟೆ ದೊರಕದೇ ತೀವ್ರ ಸಂಕಷ್ಟ ಅನುಭವಿಸುತ್ತಿರುವ ರೈತರಿಗೆ ಇದೊಂದು ಮಾರಕ ಕಾಯ್ದೆಯಾಗಿ ಪರಿಣಮಿಸಲಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಅಲ್ಲದೇ, ಈ ಕಾಯ್ದೆಯಿಂದ ರೈತರ ಸ್ವಂತ ಬ್ರಾಂಡ್‌ನ ಬಿತ್ತನೆ ಬೀಜ ಮಾರಾಟಕ್ಕೆ ಕಡಿವಾಣ ಬೀಳುತ್ತದೆ. ಬಹುರಾಷ್ಟ್ರೀಯ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಸಲುವಾಗಿ ದೇಶದ ಬೀಜ ವೈವಿಧ್ಯವನ್ನು ನಾಶ ಮಾಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ.
ಈ ಕಾಯ್ದೆಯ ಪ್ರಕಾರ ಬೆಲೆ ನಿಯಂತ್ರಣ ಸರ್ಕಾರದ ಕೈಯಲಿಲ್ಲ. ಹಾಗಾಗಿ ಕಂಪನಿಗಳು ನಿಗದಿ ಪಡಿಸಿದ ಬೆಲೆಗೆ ರೈತರು ಬಿತ್ತನೆ ಬೀಜ ಕೊಂಡುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.
ಒಂದು ವೇಳೆ ಕಂಪೆನಿ ಪೂರೈಸಿದ ಬೀಜಗಳು ಕಳಪೆಯಾಗಿದ್ದಲ್ಲಿ ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವ ಕಾನೂನು ವಿಧೇಯಕದಲ್ಲಿಲ್ಲ. ಕಂಪನಿ ಸೂಚಿಸಿದ ವಿಧಾನ ಪಾಲಿಸಿ ಬೆಳೆದರೆ ಮಾತ್ರ ಪರಿಹಾರ ಸಿಗುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಈ 'ಬೀಜ ವಿಧೇಯಕ 2019' ಎಲ್ಲಾ ರೀತಿಯಿಂದಲೂ ರೈತರಿಗೆ ಮಾರಕವಾಗಿದೆಯೇ ಹೊರತು ರೈತಪರವಾಗಿಲ್ಲ. ಹೀಗಾಗಿ, ಕೇಂದ್ರ ಸರ್ಕಾರವು ಕೂಡಲೇ ಈ ವಿಧೇಯಕವನ್ನು ಕೈ ಬಿಡಬೇಕು ಎಂದು ಪ್ರಿಯಾಂಕ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.