ADVERTISEMENT

ಸಾಲಿನಲ್ಲಿ ನಿಲ್ಲುವ ಸಮಸ್ಯೆಗೆ ಸಿಗದ ‘ಚಿಕಿತ್ಸೆ’

ಜಿಮ್ಸ್‌ ಆಸ್ಪತ್ರೆ: ಹೊರರೋಗಿಗಳ ವಿಭಾಗದಲ್ಲಿ ನೋಂದಣಿ ಚೀಟಿ ಪಡೆಯಲು ರೋಗಿಗಳ ಹರಸಾಹಸ

ರಾಮಮೂರ್ತಿ ಪಿ.
Published 23 ನವೆಂಬರ್ 2022, 23:45 IST
Last Updated 23 ನವೆಂಬರ್ 2022, 23:45 IST
ಕಲಬುರಗಿಯ ಜಿಮ್ಸ್‌ ಆಸ್ಪತ್ರೆಯಲ್ಲಿ ಹೊರರೋಗಿಗಳ ವಿಭಾಗದ ಮುಂದೆ ನೋಂದಣಿ ಚೀಟಿ ಪಡೆಯಲು ನೂಕುನುಗ್ಗಲಿನ ಸಾಲಿನಲ್ಲಿ ರೋಗಿಗಳು ನಿಂತಿರುವುದು  ಪ್ರಜಾವಾಣಿ ಚಿತ್ರಗಳು / ಮಲ್ಲಪ್ಪ ಪಾರೇಗಾಂವ
ಕಲಬುರಗಿಯ ಜಿಮ್ಸ್‌ ಆಸ್ಪತ್ರೆಯಲ್ಲಿ ಹೊರರೋಗಿಗಳ ವಿಭಾಗದ ಮುಂದೆ ನೋಂದಣಿ ಚೀಟಿ ಪಡೆಯಲು ನೂಕುನುಗ್ಗಲಿನ ಸಾಲಿನಲ್ಲಿ ರೋಗಿಗಳು ನಿಂತಿರುವುದು  ಪ್ರಜಾವಾಣಿ ಚಿತ್ರಗಳು / ಮಲ್ಲಪ್ಪ ಪಾರೇಗಾಂವ   

ಕಲಬುರಗಿ: ‘ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನಿಂದ ಬೆಳಿಗ್ಗೆಯೇ ಬಂದಿದ್ದೇನೆ. ಇಲ್ಲಿ ಹೊರರೋಗಿಗಳ ಚೀಟಿ ಪಡೆಯಲು ಕನಿಷ್ಠ ಒಂದು ಗಂಟೆ ಬೇಕು. ಚೀಟಿ ಸಿಕ್ಕ ಬಳಿಕ ವೈದ್ಯರಿಂದ ಚಿಕಿತ್ಸೆ ಪಡೆದು ಮರಳಿ ಊರಿಗೆ ಹೋಗುವಷ್ಟರಲ್ಲಿ ಕತ್ತಲಾಗುತ್ತೆ. ಊರಿಗೆ ಹೋಗಲು ಒಮ್ಮೊಮ್ಮೆ ವಾಹನಗಳೂ ಸಿಗಲ್ಲ..’

ನಗರದ ಜಿಮ್ಸ್‌ (ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ) ಆಸ್ಪತ್ರೆಯಲ್ಲಿ ಹೊರರೋಗಿಗಳ ವಿಭಾಗದ ಮುಂದೆ ನೋಂದಣಿ ಚೀಟಿ ಪಡೆಯಲು ನೂಕುನುಗ್ಗಲಿನ ಸಾಲಿನಲ್ಲಿ ನಿಂತಿದ್ದ ಶರಣಪ್ಪ ಅವರು ಬೇಸರದಿಂದ ಆಡಿದ ಮಾತಿದು.

ನಗರ, ಜಿಲ್ಲೆಯ ಗ್ರಾಮೀಣ ಭಾಗದಿಂದ ಮಾತ್ರವಲ್ಲದೆ ಯಾದಗಿರಿ ಜಿಲ್ಲೆಯ ಶಹಾಪುರ, ಸುರಪುರ ಮತ್ತು ಬೀದರ್‌ ಜಿಲ್ಲೆಯ ಹುಮನಾಬಾದ್‌ನಿಂದ ಹೆಚ್ಚಾಗಿ ಬರುವ ರೋಗಿಗಳು ಮತ್ತು ರೋಗಿಗಳ ಸಂಬಂಧಿಕರು ಆಸ್ಪತ್ರೆಯಲ್ಲಿ ಉದ್ದನೆಯ ಸಾಲಿನಲ್ಲಿ ನಿಲ್ಲಬೇಕಾದ ಅನಿವಾರ್ಯ ಪರಿಸ್ಥಿತಿ ಇಲ್ಲಿದೆ. ಪ್ರತ್ಯೇಕ ಸಾಲುಗಳಲ್ಲಿ ನಿಲ್ಲುವ ಮಹಿಳೆಯರು ಹಾಗೂ ಪುರುಷರು ‘ನಾಮುಂದು, ತಾಮುಂದು’ ಎಂದು ಆಗಾಗ ಜಗಳವಾಡುತ್ತಾರೆ. ಇದು ಇಲ್ಲಿಯ ನಿತ್ಯ ನೋಟ.

ADVERTISEMENT

3 ಕೌಂಟರ್‌ಗಳಲ್ಲಿ ಹೊರರೋಗಿಗಳಿಗೆ ನೋಂದಣಿ ಚೀಟಿ, ಎರಡು ಕೌಂಟರ್‌ಗಳಲ್ಲಿ ಶುಲ್ಕ ಪಾವತಿಸಿಕೊಳ್ಳಲಾಗುತ್ತಿದೆ. ಇವುಬೆಳಿಗ್ಗೆ 9ರಿಂದ 4.30ರ ವರೆಗೆ ತೆರೆದಿರುತ್ತವೆ. ತುರ್ತು ಚಿಕಿತ್ಸಾ ರೋಗಿ ನೋಂದಣಿಗೆ ಒಂದು ಕೌಂಟರ್ ಮೀಸಲಿಡಲಾಗಿದೆ. ದಿನದ 24 ಗಂಟೆಯೂ ಇದರ ಸೇವೆ ಪಡೆಯಬಹುದು.

‘ಸೋಮವಾರದಿಂದ ಶುಕ್ರವಾರದವರೆಗೆ ಹೆಚ್ಚಿನ ಸಂಖ್ಯೆಯ ರೋಗಿಗಳು ಆಸ್ಪತ್ರೆಗೆ ಬರುತ್ತಾರೆ. ಶನಿವಾರ, ಭಾನುವಾರ ಮತ್ತು ಹಬ್ಬದ ದಿನಗಳಲ್ಲಿ ಈ ಪ್ರಮಾಣ ಸ್ವಲ್ಪ ಕಡಿಮೆ ಇರುತ್ತದೆ’ ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದರು.

‘ದಿನವೊಂದಕ್ಕೆ ಸಾವಿರಕ್ಕಿಂತ ಹೆಚ್ಚು ಹೊರರೋಗಿಗಳು ಈ ಆಸ್ಪತ್ರೆಗೆ ಬರುತ್ತಾರೆ. ಜಿಲ್ಲೆಯ ರೋಗಿಗಳು ಅಲ್ಲದೇ ಬೇರೆ ಬೇರೆ ಜಿಲ್ಲೆಗಳಿಂದಲೂ ರೋಗಿಗಳು ಬರುವ ಕಾರಣ ಸಹಜವಾಗಿಯೇ ದಟ್ಟಣೆ ಆಗುತ್ತದೆ. ಬೇರೆ ಜಿಲ್ಲೆಯವರಿಗೆ ಬರಬೇಡಿ ಎನ್ನಲಾಗದು. ಇರುವ ಸಂಪನ್ಮೂಲ ಬಳಸಿಕೊಂಡು ಉತ್ತಮ ಚಿಕಿತ್ಸೆ ನೀಡುತ್ತೇವೆ’ ಎಂದು ಆಸ್ಪತ್ರೆಯ ವೈದ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.‌

ಕುಡಿಯುವ ನೀರಿಲ್ಲ: ಜಿಮ್ಸ್‌ ಆಸ್ಪತ್ರೆಯಲ್ಲಿ ಹೊರರೋಗಿಗಳಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ನೀರು ಕುಡಿಯಲು ಹೊರ
ಭಾಗದಲ್ಲಿ ಇರುವ ಇಂದಿರಾ ಕ್ಯಾಂಟೀನ್ ಅಥವಾ ಹೋಟೆಲ್‌ಗಳಿಗೆ ಹೋಗಬೇಕು. ವೈದ್ಯರು, ಸಿಬ್ಬಂದಿ ಮತ್ತು ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ ವಾರ್ಡ್‌ಗಳಲ್ಲಿ
ಕುಡಿಯುವ ನೀರಿನ ವ್ಯವಸ್ಥೆ ಇದೆ. ಹೊರರೋಗಿಗಳು ಹೊರಗಿನಿಂದಲೇ ನೀರಿನ ಬಾಟಲಿ ಒಯ್ಯಬೇಕು.

‘ಬಡವರೇ ಹೆಚ್ಚಾಗಿ ಬರುವ ಈ ದೊಡ್ಡ ಆಸ್ಪತ್ರೆಯಲ್ಲಿ ಕುಡಿಯಲು ನೀರಿಲ್ಲ. ಸಾಲು ಬಿಟ್ಟು ನೀರು ಕುಡಿಯಲು ಹೊರ ಹೋದರೆ
ಮತ್ತೆ ಕೊನೆಯಲ್ಲಿ ಸಾಲುಗಟ್ಟಿ ನಿಲ್ಲಬೇಕು. ಹೀಗಾಗಿ, ಬಾಯಾರಿಕೆ ಇದ್ದರೂ ಇಲ್ಲಿಯೇ ನಿಂತಿದ್ದೇನೆ. ಶುದ್ಧ ನೀರಿನ ಘಟಕಗಳನ್ನು ಆರಂಭಿಸಿ ರೋಗಿಗಳಿಗೆ ನೀರು ಸಿಗುವಂತೆ ಮಾಡಬೇಕು’ ಎಂದು ಶಹಾಬಾದ್‌ನ ಗುಂಡಪ್ಪ ಒತ್ತಾಯಿಸಿದರು.

‘ಬೈಕ್‌ ಕಳವು ಪ್ರಕರಣ ನಿರಂತರ’

ಜಿಮ್ಸ್‌ ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಿದ ದ್ವಿಚಕ್ರ ವಾಹನಗಳ ಕಳವು ಪ್ರಕರಣಗಳು ನಿರಂತರ ನಡೆಯುತ್ತಿವೆ ಎಂದು ಸಾರ್ವಜನಿಕರು ದೂರಿದ್ದಾರೆ.

‘2022ರಲ್ಲಿ ಜಿಮ್ಸ್‌ ಆವರಣದಲ್ಲಿ ಈವರೆಗೆ 17 ದ್ವಿಚಕ್ರ ವಾಹನಗಳು ಕಳವು ಆದ ಬಗ್ಗೆ ದೂರು ದಾಖಲಾಗಿವೆ. 3–4 ಪ್ರವೇಶದ್ವಾರಗಳು ಇರುವುದನ್ನೇ ಉಪಯೋಗಿಸಿಕೊಂಡು ಖದೀಮರು ಕಳವು ಎಸಗುತ್ತಿದ್ದಾರೆ. ನಿತ್ಯವೂ ಆಸ್ಪತ್ರೆ ಬಳಿ ಪಾಳಿಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಅವರು ಒಳಗೆ, ಹೊರಗೆ ಹೋಗುವ ಪ್ರತಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ‘ಆಸ್ಪತ್ರೆ ಪ್ರವೇಶದ್ವಾರದ ಬಳಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಟೆಂಡರ್‌ ಕರೆಯುವ ಪ್ರಕ್ರಿಯೆ ನಡೆಯುತ್ತಿದೆ. ಆದಷ್ಟು ಶೀಘ್ರವೇ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಮ್ಸ್‌ ಆಸ್ಪತ್ರೆ ನಿರ್ದೇಶಕಿ ಡಾ.ಕವಿತಾ ಪಾಟೀಲ ತಿಳಿಸಿದರು.

‘ರೋಗಿಗಳಿಗೆ ಸಮಸ್ಯೆ ಆಗದಂತೆ ವ್ಯವಸ್ಥೆ’

ಕೋವಿಡ್ ದಿನಗಳಲ್ಲಿ ಹಲವು ವಿಭಾಗಗಳ ಸೇವೆ ನೀಡಲಾಗದ ಸ್ಥಿತಿಯಿತ್ತು. ಹೀಗಾಗಿ ಹೊರರೋಗಿಗಳ ಸಂಖ್ಯೆ ಕಡಿಮೆ ಇತ್ತು. ಇದೀಗ ಎಲ್ಲಾ ವಿಭಾಗಗಳಲ್ಲೂ ಚಿಕಿತ್ಸೆ ನೀಡಲಾಗುತ್ತಿದೆ. ಈ ಭಾಗದ ಉತ್ತಮ ಸರ್ಕಾರಿ ಆಸ್ಪತ್ರೆ ಇದಾಗಿರುವ ಕಾರಣ ರೋಗಿಗಳು ಹೆಚ್ಚಾಗಿ ಬರುತ್ತಿದ್ದಾರೆ’ ಎಂದು ಜಿಮ್ಸ್‌ ಆಸ್ಪತ್ರೆ ನಿರ್ದೇಶಕಿ ಡಾ.ಕವಿತಾ ಪಾಟೀಲ ತಿಳಿಸಿದರು.

‘ಶುಲ್ಕ ಪಾವತಿ ಕೌಂಟರ್‌ಗೆ ಬರುವ ರೋಗಿಗಳು ಅಗತ್ಯ ದಾಖಲೆಗಳನ್ನು ಸರಿಯಾಗಿ ತರುವುದಿಲ್ಲ. ಆಸ್ಪತ್ರೆಗೆ ನೀಡಿದ ಮೊಬೈಲ್‌ ಸಂಖ್ಯೆಯನ್ನು ಕುಟುಂಬದ ಮತ್ತೊಬ್ಬರು ಬಳಸುವುದರಿಂದ ಒಟಿಪಿ ಅವರಿಗೆ ಹೋಗಿರುತ್ತೆ. ಅವರಿಗೆ ಕರೆ ಮಾಡಿ ಒಟಿಪಿ ತಿಳಿದು, ಅಪ್‌ಡೇಟ್ ಮಾಡುವಷ್ಟರಲ್ಲಿ ವಿಳಂಬವಾಗುತ್ತೆ. ಹೀಗಿದ್ದರೂ, ರೋಗಿಗಳಿಗೆ ಸಮಸ್ಯೆ ಆಗದಂತೆ ಸಾಲಿನಲ್ಲಿ ನಿಲ್ಲಲು ಸೂಕ್ತ ವ್ಯವಸ್ಥೆ ಮಾಡಿದ್ದೇವೆ. ತುರ್ತು ಚಿಕಿತ್ಸೆ ಅಗತ್ಯ ಇರುವವರಿಗಾಗಿ ಪ್ರತ್ಯೇಕ ಕೌಂಟರ್ ಇದೆ’ ಎಂದು ಅವರು ತಿಳಿಸಿದರು.

‘ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.