ADVERTISEMENT

ಒಂದು ಸಿಗರೇಟ್‌ನಿಂದ 11 ನಿಮಿಷ ಆಯುಷ್ಯ ಕಡಿಮೆ

ಶ್ವಾಸಕೋಶ ಕ್ಯಾನ್ಸರ್ ಜಾಗೃತಿ: ಕ್ಯಾನ್ಸರ್‌ ತಜ್ಞ ಡಾ.ಶಾಂತಲಿಂಗ ನಿಗ್ಗುಡಗಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 8:37 IST
Last Updated 4 ಡಿಸೆಂಬರ್ 2019, 8:37 IST
ಕಲಬುರ್ಗಿಯಲ್ಲಿ ಸೋಮವಾರ ಎಚ್‌ಸಿಜಿ ಕ್ಯಾನ್ಸರ್‌ ಆಸ್ಪತ್ರೆಯಿಂದ ಸಂಚಾರ ಪೊಲೀಸರಿಗೆ ಮಾಸ್ಕ್‌ ವಿತರಿಸಲಾಯಿತು
ಕಲಬುರ್ಗಿಯಲ್ಲಿ ಸೋಮವಾರ ಎಚ್‌ಸಿಜಿ ಕ್ಯಾನ್ಸರ್‌ ಆಸ್ಪತ್ರೆಯಿಂದ ಸಂಚಾರ ಪೊಲೀಸರಿಗೆ ಮಾಸ್ಕ್‌ ವಿತರಿಸಲಾಯಿತು   

ಕಲಬುರ್ಗಿ: ‘ಒಮ್ಮೆ ಸಿಗರೇಟ್ ಸೇದಿದರೆ 11 ನಿಮಿಷ ಆಯುಷ್ಯ ಕಡಿಮೆಯಾಗುತ್ತದೆ. ಧೂಮಪಾನ ಚಟ ಇದ್ದವರು ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಕ್ಯಾನ್ಸರ್‌ ತಜ್ಞ ಡಾ.ಶಾಂತಲಿಂಗ ನಿಗ್ಗುಡಗಿ ಎಚ್ಚರಿಸಿದರು.

ಜಿಲ್ಲಾ ಪೊಲೀಸ್‌ ಇಲಾಖೆ, ನಗರ ಸಂಚಾರ ಪೊಲೀಸ್‌ ಹಾಗೂ ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆ ಆಶ್ರಯದಲ್ಲಿ ನಗರದಲ್ಲಿ ಸೋಮವಾರ ನಡೆದ ಶ್ವಾಸಕೋಶ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಧೂಮಪಾನ ಮಾಡುವುದರಿಂದ ಪ್ರತಿ ಹತ್ತು ಜನರಲ್ಲಿ ಆರು ಜನರಿಗೆ ಶ್ವಾಸಕೋಶ ಕ್ಯಾನ್ಸರ್ ಬರುತ್ತಿದೆ. ಕ್ಯಾನ್ಸರ್ ಆರಂಭಿಕ ಮಟ್ಟದಲ್ಲಿದ್ದರೆ ಪೂರ್ಣವಾಗಿ ಗುಣಪಡಿಸಲು ಸಾಧ್ಯ. ಆದರೆ, ಕ್ಯಾನ್ಸರ್‌ಗಿಂತ ಅದರ ಬಗ್ಗೆ ಇರುವ ಭಯವೇ ದೊಡ್ಡ ಅಪಾಯಕಾರಿ’ ಎಂದರು.

ADVERTISEMENT

ಡಾ.ನಂದೀಶಕುಮಾರ್ ಜೀವಣಗಿ ಮಾತನಾಡಿ, ‘ಕಳೆದ ಕೆಲವು ವರ್ಷಗಳಿಂದ ಧೂಮಪಾನಿ ಅಲ್ಲದವರಲ್ಲಿ ಕೂಡ ಶ್ವಾಸಕೋಶದ ಕ್ಯಾನ್ಸರ್ ಹೆಚ್ಚುತ್ತಿದೆ. ವಾಯು ಮಾಲಿನ್ಯವೂ ಇದಕ್ಕೆ ಕಾರಣ’ ಎಂದರು.

ಆಸ್ಪತ್ರೆಯಿಂದ ಪೊಲೀಸ್‌ ಸಿಬ್ಬಂದಿಗೆ ಮಾಲಿನ್ಯ ವಿರೋಧಿ ಮಾಸ್ಕ್ ವಿತರಿಸಲಾಯಿತು. ಬರುವ ದಿನಗಳಲ್ಲಿ ಜಿಲ್ಲೆಯ ಎಲ್ಲ ಬಸ್‌ ನಿಲ್ದಾಣಗಳಲ್ಲಿ ಶ್ವಾಸಕೋಶ ಕ್ಯಾನ್ಸರ್ ಬಗ್ಗೆ ಧ್ವನಿ ವರ್ಧಕ, ಪ್ರಕಟಣೆ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಆಯೋಜಕರು ಹೇಳಿದರು.

ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರ ಚಿಕಿತ್ಸಕ ಡಾ.ಶರಣ ಹತ್ತಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಶಶಿಧರ ಮೂಲಿಮನಿ, ವೀರೇಶ, ಎಸಿಪಿ ರಮೇಶ್ ಕಾಂಬಳೆ, ಸಿಬ್ಬಂದಿಯವರಾದ ಮಹೇಶ ಮಳಖೇಡ, ವೀರೇಶ ಕಿರಣಗಿ, ಮಹ್ಮದ್ ಸೈಯದ್ಅಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.