ADVERTISEMENT

ಕ್ಯಾನ್ಸರ್‌ಗೆ ರೊಬಾಟಿಕ್‌ ಸರ್ಜರಿ ಪರಿಣಾಮಕಾರಿ: ಡಾ.ಜಗದೀಶ್ವರ ಗೌಡ

ಬಸವೇಶ್ವರ ಆಸ್ಪತ್ರೆಯಲ್ಲಿ ನಡೆದ ಮುಂದುವರಿದ ಶಿಕ್ಷಣ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 3:43 IST
Last Updated 14 ಫೆಬ್ರುವರಿ 2021, 3:43 IST
ಕಲಬುರ್ಗಿಯ ಬಸವೇಶ್ವರ ಆಸ್ಪತ್ರೆಯಲ್ಲಿ ಶನಿವಾರ ಆಯೋಜಿಸಿದ್ದ ವೈದ್ಯಕೀಯ ಕ್ಷೇತ್ರದ ಸಿಎಂಇ ಕಾರ್ಯಾಗಾರವನ್ನು ಡಾ.ಜಗದೀಶ್ವರ ಗೌಡ ಉದ್ಘಾಟಿಸಿದರು
ಕಲಬುರ್ಗಿಯ ಬಸವೇಶ್ವರ ಆಸ್ಪತ್ರೆಯಲ್ಲಿ ಶನಿವಾರ ಆಯೋಜಿಸಿದ್ದ ವೈದ್ಯಕೀಯ ಕ್ಷೇತ್ರದ ಸಿಎಂಇ ಕಾರ್ಯಾಗಾರವನ್ನು ಡಾ.ಜಗದೀಶ್ವರ ಗೌಡ ಉದ್ಘಾಟಿಸಿದರು   

ಕಲಬುರ್ಗಿ: ‘ಅತ್ಯಾಧುನಿಕ ಮಾದರಿಯ ರೊಬೊಟಿಕ್ ಸರ್ಜರಿ ಪದ್ಧತಿಯು ಕ್ಯಾನ್ಸರ್‌ ನಿವಾರಣೆಯಲ್ಲಿ ರಾಮಬಾಣವಾಗಿದೆ. ಸುದೀರ್ಘ ಕ್ಯಾನ್ಸರ್‌ ಕಾಯಿಲೆಗಳಿಗೂಕಡಿಮೆ ಸಮಯದಲ್ಲಿ ಹಾಗೂ ಕಡಿಮೆ ವೆಚ್ಚದಲ್ಲಿ ಗುಣಮುಖ ಮಾಡಲು ಸಾಧ್ಯವಾಗಿದೆ’ ಎಂದು ಹೈದರಾಬಾದ್‌ನ ಅಮೆರಿಕನ್ ಆಂಕಾಲಜಿ ಇನ್‍ಸ್ಟಿಟ್ಯೂಟ್‍ನ ತಜ್ಞವೈದ್ಯ ಡಾ.ಜಗದೀಶ್ವರ ಗೌಡ ತಿಳಿಸಿದರು.

ಹೈದರಾಬಾದಿನ ಅಮೆರಿಕನ್ ಆಂಕಾಲಜಿ ಇನ್‍ಸ್ಟಿಟ್ಯೂಟ್, ಇಲ್ಲಿನ ಸಿಟಿಜನ್ಸ್ ಹಾಸ್ಟಿಟಲ್, ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗ ಹಾಗೂ ಎಎಸ್‍ಐ ಆಶ್ರಯದಲ್ಲ ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ಶನಿವಾರಆಯೋಜಿಸಿದ್ದ ‘ಕ್ಯಾನ್ಸರ್‌ ಶಸ್ತ್ರಚಿಕಿತ್ಸೆಯಲ್ಲಿ ಈಚಿನ ಹೊಸ ತಂತ್ರಜ್ಞಾನ ಬೆಳವಣಿಗೆಗಳು’ ಕುರಿತ ಮುಂದುವರಿದ ವೈದ್ಯಕೀಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ವೈದ್ಯಕೀಯ ಕ್ಷೇತ್ರದ ನೂತನ ಆವಿಷ್ಕಾರಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದರಿಂದ ಹಲವು ಕ್ಯಾನ್ಸರ್‌ ರೋಗಗಳನ್ನು ಶಸ್ತ್ರಕ್ರಿಯೆ ಇಲ್ಲದೆಯೇ ಗುಣ ಮಾಡಬಹುದು. ಅದರಲ್ಲೂ ರೊಬೊಟಿಕ್ ಸರ್ಜರಿಗೆ ಹೆಚ್ಚು ಪರಿಣಾಕಾರಿ ಆಗಿದೆ. ಕ್ಯಾನ್ಸರ್ ಚಿಕಿತ್ಸಾ ಕ್ಷೇತ್ರದಲ್ಲಿ ಆಗಿರುವ ಬದಲಾವಣೆ ಮತ್ತು ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಂಡು ಅತ್ಯಲ್ಪ ಸಮಯದಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡಬಹುದಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

ಕಾರ್ಯಾಗಾರ ಉದ್ಘಾಟಿಸಿದಮಹಾದೇವಪ್ಪ ರಾಂಪೂರೆ ಮೆಡಿಕಲ್‌ ಕಾಲೇಜಿನ ಡೀನ್ ಡಾ.ಉಮೇಶಚಂದ್ರ ಮಾತನಾಡಿ, ‘ಬದಲಾದ ಜೀವನಶೈಲಿಯಿಂದ ಕ್ಯಾನ್ಸರ್‌ನಂಥ ಕಾಯಿಲೆಗಳಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕೆಲವೊಂದು ಜೀವನ ಪದ್ಧತಿಗಳನ್ನು ಪಾಲಿಸುವ ಮೂಲಕ ರೋಗಮುಕ್ತರಾಗಬಹುದು. ರೋಗ ಬರದಂತೆ ನೋಡಿಕೊಳ್ಳಲು ಜೀವಲಶೈಲಿಗಳನ್ನು ನಿಯಮಿತ ಮಾಡಿಕೊಳ್ಳಬೇಕು. ಈ ಭಾಗದಲ್ಲಿಯೂ ಕ್ಯಾನ್ಸರ್‌ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಎಚ್‍ಕೆಇ ಸಂಸ್ಥೆಯು ರೋಗಿಗಳಿಗೆ ಉತ್ತಮ ವೈದ್ಯಕೀಯ ಸವಲತ್ತುಗಳನ್ನು ಕಲ್ಪಿಸಲು ಶ್ರಮಿಸುತ್ತಿದೆ’ ಎಂದರು.

ಕಾಲೇಜಿನ ಸರ್ಜರಿ ವಿಭಾಗ ಮುಖ್ಯಸ್ಥ ಡಾ.ವಿಜಯಕುಮಾರ ಕಪ್ಪಿಕೇರಿ, ಎಎಸ್‍ಐ/ ಕೆಎಸ್‍ಸಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ರಾಜಶೇಖರ ಪಾಟೀಲ, ಪ್ರಾಧ್ಯಾಪಕರಾದ ಡಾ.ಎಸ್.ಎಸ್. ಕಾರಭಾರಿ, ಡಾ.ರವೀಂದ್ರ ಪಾಟೀಲ, ಡಾ.ಡಿ.ಎಸ್.ಸಜ್ಜನ, ಎಂಆರ್‌ಡಿ ವಿಭಾಗದ ಮುಖ್ಯಸ್ಥ ಸದಾನಂದ ಮಹಾಗಾಂವ, ಡಾ.ಪ್ರೀತಿ ಕೊಣ್ಣೂರ, ಡಾ.ಸುರೇಶ ಪಾಟೀಲ, ಕೆಬಿಎನ್ ಕಾಲೇಜಿನ ಡಾ.ರವೀಂದ್ರ ದೇವಣಿ, ಇಎಸ್‍ಐಸಿ ಕಾಲೇಜಿನ ಡಾ.ರವೀಂದ್ರ ದಡೇದ, ಡಾ.ವಿಜಯಕುಮಾರ ವೇಮೂರಿ, ಬಸವೇಶ್ವರ ಆಸ್ಪತ್ರೆಯ ಮೆಡಿಕಲ್ ಸಹ ಅಧೀಕ್ಷಕ ಡಾ.ಎಂ.ಆರ್.ಪೂಜಾರಿ ವೇದಿಕೆ ಮೇಲಿದ್ದರು.

ಹಲವು ವೈದ್ಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಾರ್ಯಾಗಾರದ ಸದುಪಯೋಗ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.