ಕಲಬುರಗಿ: ‘ದೇಶದಲ್ಲಿ ವಿಚಾರವಾದವನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸುವಂಥ ಕೆಲಸ ನಡೆದಿದೆ. ಆದರೆ, ಅದು ಜನರ ನಡುವೆ ತರಬೇಕಿದೆ’ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಶರಣಪ್ಪ ಮೂಳೆಗಾಂವ ಹೇಳಿದರು.
ನಗರದ ಜಗತ್ ವೃತ್ತದಲ್ಲಿರುವ ಮಹಾತ್ಮ ಬಸವೇಶ್ವರ ಪುತ್ಥಳಿ ಆವರಣದಲ್ಲಿ ಭಾನುವಾರ ಭಾರತ ಜ್ಞಾನ ವಿಜ್ಞಾನ ಸಮಿತಿ (ಬಿಜಿವಿಎಸ್) ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ಇಡೀ ವಿಶ್ವದಲ್ಲಿ ಎರಡು ರೀತಿಯ ಸಂಘಟನೆಗಳು ಚರ್ಚೆ ಮತ್ತು ಸಂಘರ್ಷದೊಳಗಿರುತ್ತವೆ. ಒಂದು ಸಂಪ್ರದಾಯವಾದಿಗಳು, ಇನ್ನೊಂದು ವಿಚಾರವಾದಿಗಳು. ಇವರಿಬ್ಬರ ನಡುವೆ ಸಾವಿರಾರು ವರ್ಷಗಳಿಂದ ಸಂಘರ್ಷ ನಡೆದಿದೆ. ತಾತ್ಕಾಲಿಕ ಮತ್ತು ಕ್ಷಣಿಕವಾಗಿ ಸಂಪ್ರದಾಯವಾದಿಗಳು ಜಯ ಸಾಧಿಸಿರಬಹುದು. ಆದರೆ, ದೀರ್ಘಕಾಲಿಕವಾಗಿ ಯಾವಾಗಲೂ ವಿಚಾರವಾದಿಗಳೇ ಗೆದ್ದಿದ್ದಾರೆ’ ಎಂದರು.
ಸಮುದಾಯ ಕಲಬುರಗಿ ಕಾರ್ಯದರ್ಶಿ ಶ್ರೀಶೈಲ ಘೂಳಿ ಮಾತನಾಡಿ, ‘ವೈದ್ಯ ನರೇಂದ್ರ ದಾಭೋಲ್ಕರ್ ಅವರು ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಮಿತಿ ಮೂಲಕ ಜನರಲ್ಲಿ ವೈಜ್ಞಾನಿಕ ಮನೋಭಾವ ಬಿತ್ತುವಲ್ಲಿ, ಬಿತ್ತರಿಸುವಲ್ಲಿ ಶ್ರಮಿಸಿದ್ದರು. ಮೌಢ್ಯ, ಅನಾಗರಿಕ, ಪೈಶಾಚಿಕ ಕೃತ್ಯಗಳನ್ನು ಹೋರಾಟಗಳ ಮೂಲಕ ಖಂಡಿಸುತ್ತಿದ್ದರು. 10 ವರ್ಷಗಳ ಹಿಂದೆ ಆ.20ರಂದು ಅವರ ಹತ್ಯೆ ನಡೆಯಿತು’ ಎಂದು ತಿಳಿಸಿದರು.
‘ಎಂ.ಎಂ.ಕಲಬುರ್ಗಿ ಅವರು ಲಿಂಗಾಯತ ಪ್ರತ್ಯೇಕ ಧರ್ಮವಾಗಿದೆ. ಹಿಂದೂ ಧರ್ಮದ ಭಾಗವಲ್ಲ ಎಂದು ವೈಜ್ಞಾನಿಕ ಮತ್ತು ವೈಚಾರಿಕವಾಗಿ ಸಂಶೋಧನೆ ಮೂಲಕ ಸಾಬೀತುಪಡಿಸಿದ್ದಕ್ಕಾಗಿ ಆ.30ರಂದು ಅವರ ಹತ್ಯೆ ಮಾಡಲಾಯಿತು. ಹೀಗೆ ಗೋವಿಂದ ಪನ್ಸಾರೆ ಮತ್ತು ಗೌರಿ ಲಂಕೇಶ್ ಅವರನ್ನು ಕೂಡ ಮಹಾತ್ಮ ಗಾಂಧಿ ಅವರನ್ನು ಕೊಂದ ಸಂಸ್ಕೃತಿಯೇ ಬಲಿ ಪಡೆಯಿತು. ಅವರೆಲ್ಲರೂ ನಮ್ಮೆಲ್ಲರ ಮಧ್ಯೆ ಜೀವಂತ ಇದ್ದಾರೆ. ನಾವು ಕೂಡ ಅವರಂತೆ ಅಂಜದೇ ಸತ್ಯದ ಹಾದಿಯಲ್ಲಿ ನಡೆಯುತ್ತೇವೆ’ ಎಂದರು.
ಬಿಜಿವಿಎಸ್ ಜಿಲ್ಲಾ ಉಪಾಧ್ಯಕ್ಷೆ ಸುರೇಖಾ ಮಾತನಾಡಿ, ‘ವ್ಯಕ್ತಿಗಳನ್ನು ಕೊಲ್ಲುವ ಮೂಲಕ ಅವರ ವಿಚಾರಗಳನ್ನು ಕೊಲ್ಲುತ್ತೇವೆ ಎನ್ನುವ ಭ್ರಮೆಯಲ್ಲಿರುವ, ಮೃಗೀಯ ಮನಸ್ಸಿನ ಜನರನ್ನು ವೈಚಾರಿಕತೆಯ ಪಾರ್ಶ್ವವಾಯು ಹೊಂದಿದವರು ಎನ್ನುತ್ತೇವೆ. ವಿಚಾರಗಳಿಗೆ ಎಂದಿಗೂ ಸಾವಿಲ್ಲ’ ಎಂದರು.
ಚಿಂತಕ ಪ್ರೊ.ಆರ್.ಕೆ. ಹುಡಗಿ ಪ್ರತಿಜ್ಞಾವಿಧಿ ಬೋಧಿಸಿದರು.
ಬಿಜಿವಿಎಸ್ ರಾಜ್ಯ ಸಹ ಕಾರ್ಯದರ್ಶಿ ರವಿಂದ್ರ ರುದ್ರವಾಡಿ, ನಾಗೇಂದ್ರಪ್ಪ ಅವರಾದಿ, ರವಿಚಂದ್ರ ಅತನೂರ, ಭೀಮನಗೌಡ ಪರಗೊಂಡ, ಪ್ರಭು ಖಾನಾಪುರೆ, ರೇವಣಸಿದ್ದ ಕಲಬುರಗಿ, ಜಗನ್‌ಮೋಹನ್, ಅಯ್ಯಣಗೌಡ ಪಾಟೀಲ, ಸಂತೋಷ ಹೂಗಾರ, ಶಿವಶರಣಪ್ಪ ದೇಗಾಂವ, ಶಿವಾನಂದ ಡಿ., ಮಹಾಂತೇಶ ಕಲಬುರಗಿ, ಮಲ್ಲಣ್ಣ ನಾಗರಾಳ, ಉಷಾ ಗೊಬ್ಬುರ, ಭರಮಲಿಂಗ ಜಕಾಪುರೆ ಪಾಲ್ಗೊಂಡಿದ್ದರು.
ಭಾರತೀಯ ಸಂವಿಧಾನದ 51ಎ (ಎಚ್) ಕಲಂನಲ್ಲಿ ಹೇಳಿದಂತೆ ವೈಜ್ಞಾನಿಕ ಮನೋಭಾವ ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಈ ಸಂವಿಧಾನ ಬದ್ಧ ಕರ್ತವ್ಯವನ್ನು ಹುತಾತ್ಮರೆಲ್ಲರ ಸಾಕ್ಷಿಯಾಗಿ ನಿರ್ವಹಿಸೋಣಪ್ರೊ.ಆರ್.ಕೆ. ಹುಡಗಿ ಚಿಂತಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.