ADVERTISEMENT

‘ಸಚಿವ ಪ್ರಭು ಚವಾಣ್‌ ಸಂಪುಟದಿಂದ ಕೈಬಿಡಿ’

ಕರ್ನಾಟಕ ರಾಜ್ಯ ಮಾದಿಗ ಸಮಾಜದ ಮುಖಂಡರ ಪ್ರತಭಟನೆ, ಸಚಿವರ ಪ್ರತಿಕೃತಿ ದಹನ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2021, 15:06 IST
Last Updated 11 ಸೆಪ್ಟೆಂಬರ್ 2021, 15:06 IST
ಪಶುಸಂಗೋಪನಾ ಸಚಿವ ಪ್ರಭು ಚವಾಣ್ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಮಾದಿಗ ಸಮಾಜದ ಮುಖಂಡರು ಕಲಬುರ್ಗಿಯಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು
ಪಶುಸಂಗೋಪನಾ ಸಚಿವ ಪ್ರಭು ಚವಾಣ್ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಮಾದಿಗ ಸಮಾಜದ ಮುಖಂಡರು ಕಲಬುರ್ಗಿಯಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು   

ಕಲಬುರ್ಗಿ: ‘ಪಶುಸಂಗೋಪನಾ ಸಚಿವ ಪ್ರಭು ಚವಾಣ್‌ ಅವರು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಅಂಗೀಕರಿಸಲು ಅಡ್ಡಿಪಡಿಸುತ್ತಿದ್ದಾರೆ. ಅವರನ್ನು ಸಂಪುಟದಿಂದ ಕೈಬಿಡಬೇಕು. ವರದಿಯನ್ನು ಶೀಘ್ರ ಅಂಗೀಕರಿಸಬೇಕು’ ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ,‌ ಕರ್ನಾಟಕ ರಾಜ್ಯ ಮಾದಿಗ ಸಮಾಜದ ಮುಖಂಡರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.‌

ಸಂಘಟನೆಯಅಧ್ಯಕ್ಷ ಎಸ್‌. ಮಂಜುನಾಥ ನೇತೃತ್ವದಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಪ್ರತಿಭಟನಾಕಾರರು, ಸಚಿವ ಪ್ರಭು ಚವಾಣ್‌ ಅವರ ಪ್ರತಿಕೃತಿ ದಹನ ಮಾಡಿ ಆಕ್ರೋಶ ಹೊರಹಾಕಿದರು.‌

‘ಪರಿಶಿಷ್ಟರ ಸಬಲೀಕರಣಕ್ಕಾಗಿ ರಚನೆಗೊಂಡ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಅಂಗೀಕರಿಸುವುದು ಎಷ್ಟು ತುರ್ತು ಎಂಬುದು ಇಡೀ ರಾಜ್ಯಕ್ಕೆ ಗೊತ್ತು. ಆದರೆ, ಸಚಿವರೇ ಇದಕ್ಕೆ ಅಡ್ಡಿಮಾಡುತ್ತಿರುವುದು ಖಂಡನಾರ್ಹ’ ಎಂದರು.

ADVERTISEMENT

‘ಈ ವರದಿ ಸಿದ್ಧಪಡಿಸಲು ಸುದೀರ್ಘ ಆರು ವರ್ಷ ಎಂಟು ತಿಂಗಳು ಸಮೀಕ್ಷೆ ನಡೆಸಿದ ನ್ಯಾಯಮೂರ್ತಿ ಎ.ಜೆ. ಸದಾಶಿವ ಅವರ ಆಯೋಗವು, ಪರಿಶಿಷ್ಟ ಜಾತಿಯಲ್ಲಿ ಜನಸಂಖ್ಯೆ ಆಧಾರದ ಮೇಲೆ ಒಳಮೀಸಲಾತಿ ನೀಡುವುದಕ್ಕೆ ಶಿಫಾರಸು ಮಾಡಿದೆ. ಆದರೆ, ಇಲ್ಲಿಯವರೆಗೆ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ, ಅನುಷ್ಠಾನಗೊಳಿಸಲು ವಿಳಂಬ ಮಾಡುತ್ತಿರುವುದು ದುರದುಷ್ಟಕರ. ಮೂರು ದಶಕದಿಂದ ಹೋರಾಟ ನಡೆದಿದೆ. ಆದರೂ ಸರ್ಕಾರ ಕಿವಿಗೊಟ್ಟಿಲ್ಲ’ ಎಂದು ಬೇಸರ ಹೊರಹಾಕಿದರು.‌

ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮಕ್ಕೆ ₹ 500 ಕೋಟಿ ಅನುದಾನ ಬಿಡುಗಡೆ ಮಾಡುವಂತೆಯೂ ಮನವಿಯಲ್ಲಿ ಒತ್ತಾಯಿಸಿದ್ದಾರೆ.

‌ಕರ್ನಾಟಕ ಮಾದಿಗ ಸಮಾಜದ ಜಿಲ್ಲಾ ಘಟಕದ ಉಪಾಧ್ಯಕ್ಷ ಕರ್ಣ ಬಿ. ಕಾಳನೂರ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿದ್ಧಲಿಂಗ ಸಿ. ಕಟ್ಟಿಮನಿ, ಯಡ್ರಾಮಿ ತಾಲ್ಲೂಕು ಘಟಕದ ಅಧ್ಯಕ್ಷ ಮಾನಪ್ಪ ಪಿ. ಹಂಗರಗಾ, ಅಫಜಲಪುರ ತಾಲ್ಲೂಕಿನ ಯುವ ಮುಖಂಡ ದೇವೇಂದ್ರ ಕಲಬಂಡಿ, ಚಿಂಚೋಳಿಯ ಮರಲಿಂಗ ಸಾಗರ, ಸೇಡಂನ ಸಂಬಣ್ಣ ಭೂತಪುರ, ಕಲಬುರ್ಗಿಯ ಅಶೋಕ ಜಗದಾಳೆ, ಕಾಳಗಿಯ ಶರಣಪ್ಪ ರಟಕಲ್, ಕಲಬುರ್ಗಿ ಗ್ರಾಮೀಣ ಘಟಕದ ಧರ್ಮಣ್ಣ ಬಿ. ಪೂಜಾರಿ ಪಟ್ಟಣ ಸೇರಿದಂತೆ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.