ADVERTISEMENT

ಕಲಬುರಗಿ: ನಾಲ್ಕು ಕಾರ್ಮಿಕ ಸಂಹಿತೆ ಜಾರಿಗೆ ವಿರೋಧ

ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಸಂಹಿತೆಯ ಪ್ರತಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಮೇ 2025, 13:57 IST
Last Updated 20 ಮೇ 2025, 13:57 IST
ಕಲಬುರಗಿಯ ಎಸ್‌ವಿಪಿ ವೃತ್ತದಲ್ಲಿ ನಾಲ್ಕು ಕಾರ್ಮಿಕ ಸಂಹಿತೆಯ ಪ್ರತಿಗಳಿಗೆ ಬೆಂಕಿ ಹಚ್ಚಿ ಕಾರ್ಮಿಕ ಸಂಘಟನೆಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು    ಪ್ರಜಾವಾಣಿ ಚಿತ್ರ
ಕಲಬುರಗಿಯ ಎಸ್‌ವಿಪಿ ವೃತ್ತದಲ್ಲಿ ನಾಲ್ಕು ಕಾರ್ಮಿಕ ಸಂಹಿತೆಯ ಪ್ರತಿಗಳಿಗೆ ಬೆಂಕಿ ಹಚ್ಚಿ ಕಾರ್ಮಿಕ ಸಂಘಟನೆಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು    ಪ್ರಜಾವಾಣಿ ಚಿತ್ರ   

ಕಲಬುರಗಿ: ಕೇಂದ್ರ ಸರ್ಕಾರವು ಜಾರಿಗೊಳಿಸಲು ಮುಂದಾಗಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ಕಾರ್ಮಿಕರಿಗೆ ಕಂಟಕವಾಗಿದ್ದು, ಕೂಡಲೇ ಅವುಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಸದಸ್ಯರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಕನ್ನಡ ಭವನದಿಂದ ಜಿಲ್ಲಾಧಿಕಾರಿ ಕಚೇರಿ ಮಾರ್ಗವಾಗಿ ಮೆರವಣಿಗೆ ಮೂಲಕ ಬಂದ ಕಾರ್ಮಿಕ ಮುಖಂಡರು ಹಾಗೂ ಕಾರ್ಮಿಕರು ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ನಾಲ್ಕು ಕಾರ್ಮಿಕ ಸಂಹಿತೆಗಳ ಪ್ರತಿಗಳನ್ನು ದಹನ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಕಾರ್ಮಿಕ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ ಶಾಂತಾ ಘಂಟಿ ಮಾತನಾಡಿ, ‘ನರೇಂದ್ರ ಮೋದಿ ಸರ್ಕಾರವು ದೇಶದ ಕಾರ್ಮಿಕರು ಹೋರಾಟ ಮಾಡಿ ಕಾರ್ಮಿಕರ ರಕ್ಷಣೆಗಾಗಿ ಗಳಿಸಿದ 29 ಕಾರ್ಮಿಕ ಕಾನೂನುಗಳನ್ನು ಮೊಟಕುಗೊಳಿಸಿ, ಕಾರ್ಮಿಕರಿಗೆ ಮರಣ ಶಾಸನನಾಗಿರುವ 4 ಕಾರ್ಮಿಕ ಸಂಹಿತೆಗಳನ್ನು 2020ರಲ್ಲಿ ಜಾರಿಗೆ ತಂದಿತ್ತು. ಕಾರ್ಮಿಕರ ತೀವ್ರ ವಿರೋಧದಿಂದಾಗಿ 5 ವರ್ಷ ಕಳೆದರೂ ಅವುಗಳನ್ನು ಜಾರಿ ಮಾಡಲು ಆಗಿಲ್ಲ. ಆದರೆ ಇಂದು ದೇಶವು ಯುದ್ಧದ ಸಂದರ್ಭ ಎದುರಿಸುತ್ತಿದ್ದರೂ ಆ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರಲು ರಾಜ್ಯಗಳ ಮೇಲೆ ಒತ್ತಡ ಹಾಕುತ್ತಿದೆ. ಅದಕ್ಕೆ ಅನುಗುಣವಾಗಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸಹ ಆ ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿಗೆ ತರಲು ಶತಾಯ ಗತಾಯ ಪ್ರಯತ್ನ ನಡೆಸಿದೆ’ ಎಂದು ಆರೋಪಿಸಿದರು.

ADVERTISEMENT

ಸಿಐಟಿಯು ಕಾರ್ಮಿಕ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಶ್ರೀಮಂತ ಬಿರಾದಾರ, ಮುಖಂಡರಾದ ಎಂ.ಬಿ.ಸಜ್ಜನ್, ನಾಗಯ್ಯಸ್ವಾಮಿ, ವಿಜಯಲಕ್ಷ್ಮಿ ಹಿರೇಮಠ, ಶೇಖಮ್ಮ ಕುರಿ, ಯಶವಂತ ಪಾಟೀಲ, ಬಾಗಪ್ಪ ರಾಯಚೂರಕರ್, ಚಂದ್ರಕಾಂತ ಟಾಂಗಾದವರ, ಗುರುಲಿಂಗಯ್ಯ ಸ್ವಾಮಿ ಇತರರು ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.