ADVERTISEMENT

‘13ರಂದು ಪಿಡಿಒ ವಿರುದ್ಧ ಎಸ್ಪಿ ಕಚೇರಿ ಮುಂದೆ ಧರಣಿ’

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 15:14 IST
Last Updated 7 ನವೆಂಬರ್ 2020, 15:14 IST

ಕಲಬುರ್ಗಿ: ‘ಜಿಲ್ಲೆಯ ಆಳಂದ ತಾಲ್ಲೂಕಿನ ಪಡಸಾವಳಿ ಪಿಡಿಒ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು, ನಿರಪರಾಧಿಗಳ ಮೇಲೆ ಕೇಸ್‌ ದಾಖಲಿಸುತ್ತಿದ್ದಾರೆ. ಪೊಲೀಸರೂ ಅವರಿಗೆ ಸಾಥ್‌ ನೀಡುತ್ತಿರುವುದು ಖಂಡನಾರ್ಹ’ ಎಂದು ಅಖಿಲ ಭಾರತ ಕಿಸಾನ್‌ ಸಂಘರ್ಷ ಸಮನ್ವಯ ಸಮಿತಿ ಮುಖಂಡರು ದೂರಿದ್ದಾರೆ.‌

ನಗರದಲ್ಲಿ ಶನಿವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಮುಖಂಡ ಮೌಲಾ ಮುಲ್ಲಾ, ಭೀಮಾಶಂಕರ ಮಾಡಿಯಾಳ ಮತ್ತು ಶರಣಬಸಪ್ಪ ಮಮಶೆಟ್ಟಿ, ‘ಅನ್ಯಾಯಕ್ಕೆ ಒಳಗಾದವರನ್ನು ಬಿಟ್ಟು ದೌರ್ಜನ್ಯ ನಡೆಸಿದವರಿಂದ ದೂರು ಪಡೆದುಕೊಂಡಿದ್ದಾರೆ. ಪೊಲೀಸರ ಈ ಕ್ರಮ ಖಂಡಿಸಿ ನ.13ರಂದು ಇಲ್ಲಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು’ ಎಂದರು.

‌‘ಪಡಸಾವಳಿ ಪಿಡಿಒ ದಶರಥ ಪಾತ್ರೆ ಅವರು ಇದಕ್ಕೂ ಮೊದಲು ಬೆಡಸೂರ ಗ್ರಾಮದಲ್ಲಿ ಅಕ್ರಮ ನಡೆಸಿ ಬಂದಿದ್ದರು. ಅವರ ವಿರುದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಲಾಗಿದೆ. ಆಳಂದ ತಾಲ್ಲೂಕಿಗೆ ಬಂದ ಬಳಿಕ ಹಲವು ಅಕ್ರಮ ನಡೆಸಿರುವ ಪಿಡಿಒಗೆ ಈಗ, ಐದು ಪಂಚಾಯಿತಿಗಳ ಪ್ರಭಾರ ಹೊಣೆ ವಹಿಸಿಕೊಡಲಾಗಿದೆ. ಇದನ್ನು ನೋಡಿದರೆ ತಾಲ್ಲೂಕು ಪಂಚಾಯಿತಿ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಆಳಂದ ಶಾಸಕರೂ ಇವರ ಅಕ್ರಮಕ್ಕೆ ಬೆನ್ನೆಲುಬಾಗಿ ನಿಂತ ಅನುಮಾನ ಬರುತ್ತಿದೆ’ ಎಂದೂ ದೂರಿದರು.

ADVERTISEMENT

‘ಪಿಡಿಒ ದಶರಥ ಅವರು, ಗ್ರಾಮ ಪಂಚಾಯಿತಿ ಸದಸ್ಯ ವಿಶ್ವನಾಥ ಎಂಬುವವರ ಮೇಲೆ ಹಲ್ಲೆ ನಡೆಸಿದರೂ ಪೊಲೀಸರು ಕೇಸ್ ದಾಖಲಿಸಿಕೊಳ್ಳಲಿಲ್ಲ. ಬದಲಿಗೆ, ಪಿಡಿಒ ಅವರೇ ದಾಖಲಿಸಿದ ಜಾತಿ ನಿಂದನೆ ಕೇಸ್ ತೆಗೆದುಕೊಂಡಿದ್ದಾರೆ. ಸುಳ್ಳು ಕೇಸ್‌ನಲ್ಲಿ ವಿಶ್ವನಾಥ ಅವರನ್ನು ಬಂಧಿಸಲು ಪೊಲೀಸರು ಓಡಾತ್ತಿದ್ದಾರೆ’ ಎಂದು ಆರೋಪಿಸಿದರು.

‘ಈ ಹಿಂದೆ ಜಗಳದಲ್ಲಿ ಪಿಡಿಒ ವಾಹನ ಹರಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದರೂ, ಅಪಘಾತ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ‌ವಾಹನದಲ್ಲಿ ಮಾರಕಾಸ್ತ್ರ ಹಾಗೂ ಬೆಂಬಲಿಗರನ್ನು ಇಟ್ಟುಕೊಂಡೇ ಓಡಾಡುವ ಪಿಡಿಒ ಜನರಲ್ಲಿ ಆತಂಕ ಮೂಡಿಸಿದ್ದಾರೆ’ ಎಂದೂ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.