ADVERTISEMENT

ಅತ್ಯಾಚಾರ ಖಂಡಿಸಿ ಪ್ರತಿಭಟನೆ 13ರಂದು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2020, 14:47 IST
Last Updated 8 ಅಕ್ಟೋಬರ್ 2020, 14:47 IST

ಕಲಬುರ್ಗಿ: ‘ಉತ್ತರ ಪ‍್ರದೇಶದ ಹತ್ರಾಸ್‌ನಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಘಟನೆ ಖಂಡಿಸಿ, ಅ. 13ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್‌ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಡಿ.ಜಿ. ಸಾಗರ್‌ ಹೇಳಿದರು.

‘ಅತ್ಯಾಚಾರ ಪ್ರಕರಣವನ್ನು ಮುಚ್ಚಿಹಾಕುವಲ್ಲಿ ಸ್ವತಃ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮುಂದಾಗಿದ್ದಾರೆ. ಸ್ವತಃ ಪೊಲೀಸರು ರಾತ್ರಿಯೇ ಯುವತಿಯ ಶವ ಸಂಸ್ಕಾರ ಮಾಡಿದ್ದಾರೆ. ಅವರ ಮನೆಯವರಿಗೂ ತಿಳಿಸಿಲ್ಲ. ಯಾವೊಬ್ಬ ಮಾದ್ಯಮದವರೂ ಅವರ ಮನೆಗೆ ಹೋಗಲು ಅವಕಾಶ ನೀಡುತ್ತಿಲ್ಲ. ಠಾಕೂರ್‌ ಮನೆತನಕ್ಕೆ ಸೇರಿದ ದುರುಳರೇ ಈ ಕೃತ್ಯ ಎಸಗಿದ್ದು ಮುಖ್ಯಮಂತ್ರಿಗೆ ಗೊತ್ತಿದೆ. ಹಾಗಾಗಿಯೇ ಅವರು ಅತ್ಯಾಚಾರಿಗಳನ್ನೂ ಸಮರ್ಥಿಸಿಕೊಳ್ಳುತ್ತಿದ್ದಾರೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಇದರ ಬೆನ್ನಲ್ಲೇ ಮತ್ತೊಬ್ಬ ಶಾಲಾ ಬಾಲಕಿ ಮೇಲೂ ಸಾಮೂಹಿಕ ಅತ್ಯಾಚಾರ ನಡೆದಿದೆ. ಆ ರಾಜ್ಯದಲ್ಲಿ ಮಹಿಳೆಯರು, ಮಕ್ಕಳ ರಕ್ಷಣೆ ಮಾಡುವಲ್ಲಿ ಸರ್ಕಾರ ಸೋತಿದೆ’ ಎಂದರು.

ADVERTISEMENT

‘ಸಂತ್ರಸ್ತ ಯುವತಿಯರ ಕುಟುಂಬಗಳಿಗೆ ರಕ್ಷಣೆ ನೀಡಬೇಕು, ತಲಾ ₹ 1 ಕೋಟಿ ಪರಿಹಾರ ನೀಡಬೇಕು, ಪ‍್ರಕರಣ ಬಯಲಿಗೆಳೆದ ಮಾಧ್ಯಮದವರಿಗೆ ರಕ್ಷಣೆ ನೀಡಬೇಕು, ಯೋಗಿ ಆದಿತ್ಯನಾಥ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪ‍ತಿ ಆಳ್ವಿಕೆ ಹೇರಬೇಕು ಎಂದೂ ಅವರು ರಾಷ್ಟ್ರಪತಿಯವರನ್ನು ಆಗ್ರಹಿಸಿದರು.

ಸಮಿತಿಯ ಜಿಲ್ಲಾ ಘಟಕದ ಸಂಚಾಲಕರಾದ ಸುರೇಶ ಹಾದಿಮನಿ, ಕೃಷ್ಣಪ್ಪ ಕಾರಣಿಕ, ಸಂಘಟನಾ ಸಂಚಾಲಕರಾದ ಉಮೇಶ ನರೋಣ, ರೇವಣಸಿದ್ಧಪ್ಪ ಜಾಲಿ, ಖಜಾಂಚಿ ಮಲ್ಲಣ್ಣ ಕೊಡಚಿ, ನಗರ ಘಟಕದ ಸಂಚಾಲಕ ರಾಜು ಸಂಕಾ, ಖಜಾಂಚಿ ಜೈಭೀಮ ಕೊರಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.