ADVERTISEMENT

ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ

ಮರಗುತ್ತಿ ಗ್ರಾಮದಲ್ಲಿ ಅಂಬೇಡ್ಕರ್‌ ಪುತ್ಥಳಿಗೆ ಅವಮಾನ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 12:35 IST
Last Updated 26 ಫೆಬ್ರುವರಿ 2020, 12:35 IST
ಕಮಲಾಪುರ ತಾಲ್ಲೂಕಿನ ಮರಗುತ್ತಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ ಪುತ್ಥಳಿಗೆ ಅವಮಾನ ಮಾಡಿರುವುದನ್ನು ಖಂಡಿಸಿ ದಲಿತ ಸಂಘಟನೆ ಕಾರ್ಯಕರ್ತರು ಮಂಗಳವಾರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು
ಕಮಲಾಪುರ ತಾಲ್ಲೂಕಿನ ಮರಗುತ್ತಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ ಪುತ್ಥಳಿಗೆ ಅವಮಾನ ಮಾಡಿರುವುದನ್ನು ಖಂಡಿಸಿ ದಲಿತ ಸಂಘಟನೆ ಕಾರ್ಯಕರ್ತರು ಮಂಗಳವಾರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು   

ಕಮಲಾಪುರ: ತಾಲ್ಲೂಕಿನ ಮರಗುತ್ತಿ ಗ್ರಾಮದಲ್ಲಿ ಬಾಬಾಸಾಹೇಬ್‌ ಅಂಬೇಡ್ಕರ್‌ ಪುತ್ಥಳಿಗೆ ಅವಮಾನ ಮಾಡಿರುವುದನ್ನು ಖಂಡಿಸಿ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಮಂಗಳವಾರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಪುತ್ಥಳಿಗೆ ಸೋಮವಾರ ರಾತ್ರಿ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿದ್ದಾರೆ. ಮಂಗಳವಾರ ಬೆಳಿಗ್ಗೆ ನೋಡಿದ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ. ಗ್ರಾಮಸ್ಥರು ಹಾಗೂ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ಮರಗುತ್ತಿ ಕ್ರಾಸ್‌ನಲ್ಲಿ ಜಮಾವಣೆಗೊಂಡು ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಸುಮಾರು ಒಂದು ಗಂಟೆ ರಾಷ್ಟ್ರೀಯ ಹೆದ್ದಾರಿ ತಡೆದರು.

ಮೇಲಿಂದ ಮೇಲೆ ಇಂಥ ಪ್ರಕರಣಗಳು ಮರುಕಳಿಸುತ್ತಿದ್ದು, ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಗ್ರಾಮದಲ್ಲಿ ಹೊಸ ಪುತ್ಥಳಿ ಸ್ಥಾಪನೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ADVERTISEMENT

ಕಲಬುರ್ಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ತಹಶೀಲ್ದಾರ್‌ ಅಂಜುಮ ತಬಸುಮ್‌ ಸ್ಥಳಕ್ಕೆ ಧಾವಿಸಿ ಕಿಡಿಗೇಡಿಗಳನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸುವುದಾಗಿ ತಿಳಿಸಿದರು.

‘ಅಂಬೇಡ್ಕರ್‌ ಅವರ ಪುತ್ಥಳಿಗೆ ಅವಮಾನ ಮಾಡಿರುವುದು ಅಕ್ಷಮ್ಯ. ಕಿಡಿಗೇಡಿಗಳು ಯಾರೆ ಆಗಿರಲಿ ಕೂಡಲೆ ಪತ್ತೆಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಎಸ್‌ಪಿ ಅವರಿಗೆ ಹೇಳಿದ್ದೇನೆ. ಪುತ್ಥಳಿ ಪಕ್ಕದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಗ್ರಾಮ ಪಂಚಾಯಿತಿಯವರಿಗೆ ಸೂಚಿಸಿದ್ದೇನೆ. ಸುತ್ತಲಿನ ಆವರಣ ಹಾಗೂ ಹೊಸ ಪುತ್ಥಳಿ ನಿರ್ಮಾಣಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ’ ಎಂದು ಶಾಸಕ ಬಸವರಾಜ ತಿಳಿಸಿದ್ದಾರೆ. ಕಾಂಗ್ರೆಸ್‌ ಮುಖಂಡ ವಿಜಯಕುಮಾರ ಜಿ.ರಾಮಕೃಷ್ಣ, ಪ್ರಕಾಶ ಹಾಗರಗಿ, ನಿಂಗಪ್ಪ ಪ್ರಬುದ್ಧಕರ್‌, ಡಿ.ಕೆ.ಮದನಕರ್‌, ಸುಧೀರ ಹೊನ್ನಳ್ಳಿ, ವಿದ್ಯಾಧರ ಮಾಳಗೆ, ಗೋಪಾಲ ಗೊಬ್ಬರವಾಡಿ, ನಂದನಕುಮಾರ ಹರಸೂರ, ರಾಜು ಲೇಂಗಟಿ, ಸುಭಾಷ್ ಆಜಾದಪುರ, ಜಗದೇವಪ್ಪ ಅಂಕಲಗಿ, ಸಂಜುಕುಮಾರ ಪೋತೆ, ಅಶೋಕಕುಮಾರ ಗೌರೆ, ಶ್ರೀನಿವಾಸ ಹೋಳಕರ್‌, ಅವಿನಾಶ ಈಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.