ADVERTISEMENT

ಕಲಬುರ್ಗಿ: ಪ್ರತಿಭಟನೆ ವೇಳೆಯೇ ಜಿಲ್ಲಾಧಿಕಾರಿ ಕಚೇರಿ ಎದುರೇ ಕ್ರಿಮಿನಾಶಕ ಸೇವನೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 11:54 IST
Last Updated 26 ಫೆಬ್ರುವರಿ 2021, 11:54 IST
ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆ ವೇಳೆಯೇ ಕ್ರಿಮಿನಾಶಕ ಕುಡಿದು ಕುಸಿದುಬಿದ್ದ ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಅಧ್ಯಕ್ಷ ಪ್ರಕಾಶ ಸುಂಬಡ ಅವರನ್ನು ಸಹೋದ್ಯೋಗಿ ಸಂತೈಸಿದರು
ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆ ವೇಳೆಯೇ ಕ್ರಿಮಿನಾಶಕ ಕುಡಿದು ಕುಸಿದುಬಿದ್ದ ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಅಧ್ಯಕ್ಷ ಪ್ರಕಾಶ ಸುಂಬಡ ಅವರನ್ನು ಸಹೋದ್ಯೋಗಿ ಸಂತೈಸಿದರು   

ಕಲಬುರ್ಗಿ: ಕಲ್ಯಾಣ ಕರ್ನಾಟಕ ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ನಡೆದ ಪ್ರತಿಭಟನೆ ವೇಳೆ, ಜೇವರ್ಗಿ ತಾಲ್ಲೂಕು ಸುಂಬಡ ಗ್ರಾಮದ ಸಿದ್ಧಗಂಗಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಸುಂಬಡ ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದರು.

ಸೇಡಂನವಿಶ್ವಗಂಗಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಂಕರ ಬಿರಾದರ (49) ಅವರು ಸಾಲ ಬಾಧೆ ತಾಳದೇ ಕಲಬುರ್ಗಿಯಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಾವಿಗೆ ಸರ್ಕಾರದ ಧೋರಣೆಯೇ ಕಾರಣ ಎಂದು ಆರೋಪಿಸಿ, ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಮಧ್ಯಾಹ್ನದವರೆಗೂಜಿಲ್ಲಾಧಿಕಾರಿ, ಜನಪ್ರತಿನಿಧಿಗಳು ಸ್ಥಳಕ್ಕೆ ಬರಲಿಲ್ಲ. ಇದರಿಂದ ಪ್ರತಿಭಟನಾಕಾರರು ತೀವ್ರ ಆಕ್ರೋಶಗೊಂಡರು. ನಂತರ ಬಂದ ವಿಧಾನ ಪರಿಷತ್‌ ಸದಸ್ಯ ಶಶೀಲ್‌ ನಮೋಶಿ, ಪ್ರತಿಭಟನಾಕಾರರ ದೂರು ಆಲಿಸುತ್ತಿದ್ದರು.

ADVERTISEMENT

ಪ್ರತಿಭಟನೆಯಲ್ಲಿದ್ದ ಪ್ರಕಾಶ, ಬೈಕ್‌ನಲ್ಲಿ ಮಾರುಕಟ್ಟೆಗೆ ಹೋಗಿ ಕ್ರಿಮಿನಾಶಕ ತಂದು ಕುಡಿದರು. ಎರಡು ಗುಟುಕು ಕುಡಿಯುತ್ತಿದ್ದಂತೆ ಜೊತೆಗಿದ್ದವರು ಬಾಟಲಿ ಕಿತ್ತಿಕೊಂಡರೂ ಬಿಡದೇ ತಲೆ– ಮುಖದ ಮೇಲೆಲ್ಲ ಚೆಲ್ಲಾಡಿಕೊಂಡರು. ಅಸ್ವಸ್ಥರಾದ ಅವರನ್ನು ಪೊಲೀಸ್‌ ವಾಹನದಲ್ಲೇ ಜಿಮ್ಸ್‌ಗೆ ದಾಖಲಿಸಲಾಯಿತು.

ಕಲ್ಯಾಣ ಕರ್ನಾಟಕ ಭಾಗದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವೇತನಾನುದಾನ ನೀಡಬೇಕು ಎಂದು ಆಗ್ರಹಿಸಿ ಒಕ್ಕೂಟದಿಂದ ನಿರಂತರ ಹೋರಾಟ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.