ರವಿಚಂದ್ರ ಗುತ್ತೇದಾರ
ಕಲಬುರಗಿ: ‘ಜೇವರ್ಗಿ ಹಾಗೂ ಯಡ್ರಾಮಿ ತಾಲ್ಲೂಕಿನ ಪಟ್ಟಣ ಹಾಗೂ ವಿವಿಧ ಗ್ರಾಮಗಳಲ್ಲಿ ನಡೆಯುತ್ತಿದ್ದ ಅಕ್ರಮ ಮದ್ಯ ಮಾರಾಟದ ವಿರುದ್ಧ ಧ್ವನಿಯೆತ್ತಿದ ಮಹಿಳೆಯರು, ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಿದ್ದನ್ನು ಖಂಡಿಸಿ ಜೂನ್ 24ರಂದು ಜೇವರ್ಗಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಸಾಮಾಜಿಕ ನ್ಯಾಯ ಮತ್ತು ಜನಪರ ಹೋರಾಟಗಾರರ ವೇದಿಕೆಯ ರವಿಚಂದ್ರ ಗುತ್ತೇದಾರ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಈ ಎರಡೂ ತಾಲ್ಲೂಕಿನ ಗ್ರಾಮಗಳಲ್ಲಿ ಮತ್ತು ಪಟ್ಟಣದ ಕೆಲವು ಹೋಟೆಲ್, ಕಿರಾಣಿ ಅಂಗಡಿಗಳು, ಪಾನಶಾಪ್ ಡಬ್ಬಿಗಳಲ್ಲಿ, ಧಾಬಾಗಳಲ್ಲಿ, ಮನೆಗಳಲ್ಲಿ ಸುಮಾರು ವರ್ಷಗಳಿಂದ ಪರವಾನಗಿಯಿಲ್ಲದೆ ರಾಜಾರೋಷವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಕುಡಿತದ ಚಟಕ್ಕೆ ಬಲಿಯಾಗಿ ಸಾವಿರಾರು ಕುಟುಂಬಗಳು ಬೀದಿಗೆ ಬಂದಿವೆ’ ಎಂದರು.
‘ಅಕ್ರಮ ಮಧ್ಯ ಮಾರಾಟಕ್ಕೆ ಕಡಿವಾಣ ಹಾಕುವಲ್ಲಿ ವಿಫಲವಾದ ಅಬಕಾರಿ ಅಧಿಕಾರಿಗಳ ವಿರುದ್ಧ ಯಡ್ರಾಮಿ ತಾಲೂಕಿನ ಕೋಣಸಿರಶಿಗಿ ಗ್ರಾಮಸ್ಥರು ಇತ್ತೀಚೆಗೆ ಕನ್ನಡಪರ ಹೋರಾಟಗಾರರ ಜೊತೆ ಜೂನ್ 4ರಂದು ಜೇವರ್ಗಿ ಅಬಕಾರಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಸಂದರ್ಭದಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದರೆಂದು ನಾಲ್ವರು ಹೋರಾಟಗಾರರು ಹಾಗೂ 20 ಮಹಿಳೆಯರ ಮೇಲೆ ಪ್ರಕರಣ ದಾಖಲಿಸಿದ್ದಾರೆ’ ಎಂದು ದೂರಿದರು.
‘ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ನೊಂದ ಮಹಿಳೆಯರು ಹಾಗೂ ಹೋರಾಟಗಾರರ ಮೇಲಿನ ಪ್ರಕರಣ ರದ್ದುಪಡಿಸಬೇಕು. ಅಕ್ರಮ ಮದ್ಯ ಮಾರಾಟ ಮಾಡುವವರನ್ನು ನಿಯಂತ್ರಿಸದ ಜೇವರ್ಗಿ ಅಬಕಾರಿ ಅಧಿಕಾರಿ ರೇವಣಸಿದ್ದಪ್ಪ ಹೂಗಾರ ಹಾಗೂ ಇತರ ಸಿಬ್ಬಂದಿಯನ್ನು ಅಮಾನತು ಮಾಡುವಂತೆ ಒತ್ತಾಯಿಸಿ ಪ್ರತಿಭಟಿಸಲಾಗುವುದು’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ಬಾಗೇವಾಡಿ, ವಿಶ್ವನಾಥ ಪಾಟೀಲ, ಸತೀಶ ಜಾಗೀರದಾರ, ಗಿರೀಶ ತುಂಬಗಿ, ಭಾಗಮ್ಮ ಮತ್ತಿತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.