ADVERTISEMENT

ಪೌರಕಾರ್ಮಿಕನ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

ಗುತ್ತಿಗೆ ಬದಲು ನೇರ ಪಾವತಿಯಡಿ ತರಲು ಮುನ್ಸಿಪಲ್ ಕಾರ್ಮಿಕರ ಸಂಘ ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 13:38 IST
Last Updated 10 ಜೂನ್ 2025, 13:38 IST
ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದ ಕಾರ್ಯಕರ್ತರು ಕಲಬುರಗಿಯ ಮಹಾನಗರ ಪಾಲಿಕೆ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು         ಪ್ರಜಾವಾಣಿ ಚಿತ್ರ
ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದ ಕಾರ್ಯಕರ್ತರು ಕಲಬುರಗಿಯ ಮಹಾನಗರ ಪಾಲಿಕೆ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು         ಪ್ರಜಾವಾಣಿ ಚಿತ್ರ   

ಕಲಬುರಗಿ: ಹಾವೇರಿ ನಗರಸಭೆಯ ಪೌರಕಾರ್ಮಿಕನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಹಾಗೂ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಮಿಕರಿಂದ ಕೆಲಸ ಮಾಡಿಸಿಕೊಳ್ಳುತ್ತಿರುವುದನ್ನು ರದ್ದುಪಡಿಸಿ ನೇರ ಪಾವತಿಯಡಿ ತರಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದ ಸದಸ್ಯರು ಪಾಲಿಕೆ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಹಾವೇರಿ ನಗರಸಭೆಯಲ್ಲಿ ಅಧಿಕಾರಿಗಳ ಮೌಖಿಕ ಆದೇಶದ ಮೇರೆಗೆ ಬ್ಯಾನರ್ ತೆರವುಗೊಳಿಸಿದ ಪೌರಕಾರ್ಮಿಕರ ಮೇಲೆ ಪುಂಡರ ಗುಂಪೊಂದು ಹಲ್ಲೆ ನಡೆಸಿರುವ ವಿಡಿಯೊ ಹರಿದಾಡುತ್ತಿದೆ. ಪುಂಡರ ಗುಂಪು ನಿರ್ದಯತೆಯಿಂದ ಅಮಾನವೀಯವಾಗಿ ನಡೆಸಿರುವ ದಾಳಿ ತೀವ್ರ ಖಂಡನೀಯ. ಈ ದಾಳಿಯ ಕುರಿತು ತಕ್ಷಣ ಸಮಗ್ರ ತನಿಖೆ ನಡೆಸಬೇಕು. ದಾಳಿಕೋರರು ಹಾಗೂ ಅವರ ಹಿಂದೆ ಇರುವವರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ನಗರ ಮತ್ತು ಪಟ್ಟಣಗಳಲ್ಲಿ ಈ ರೀತಿಯ ಬಲಾಢ್ಯರು, ಪುಢಾರಿಗಳ ಗುಂಪುಗಳು ಕಟ್ಟುವ ಫ್ಲೆಕ್ಸ್, ಬ್ಯಾನರ್‌ಗಳನ್ನು ತೆರವುಗೊಳಿಸಲು ಅಧಿಕಾರಿಗಳು ಕಾರ್ಮಿಕರಿಗೆ ಹೇಳುತ್ತಾರೆ. ತೆರವುಗೊಳಿಸಿದರೆ ಈ ಗುಂಪು ದಾಳಿ ಮಾಡುತ್ತದೆ. ತೆರವುಗೊಳಿಸದಿದ್ದರೆ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳುವರು. ಈ ಇಬ್ಬದಿಗೆ ಸಮಸ್ಯೆ ಇತ್ಯರ್ಥವಾಗಬೇಕು. ಪೌರಕಾರ್ಮಿಕರಿಗೆ ರಕ್ಷಣೆ ಒದಗಿಸಬೇಕು. ದಾಳಿಗೆ ಒಳಗಾಗಿರುವ ಪೌರಕಾರ್ಮಿಕರಾದ ರಾಜು ದೊಡ್ಡಮನಿ ಮತ್ತು ಪೀರಪ್ಪ ಅವರಿಗೆ ಸರ್ಕಾರಿ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕರು ಗುತ್ತಿಗೆ ಪದ್ಧತಿಯಡಿ ಕೆಲಸ ಮಾಡುತ್ತಿದ್ದು, ಬಿಟ್ಟಿ ಚಾಕರಿಗೆ ಸಮನಾಗಿ ದುಡಿಯುತ್ತಿದ್ದಾರೆ. ಅವರನ್ನು ನೇರ ಪಾವತಿಯಡಿ ತಂದು ಕಾಯಮಾತಿ ಮಾಡಬೇಕು ಎಂದರು.

ಸಂಘದ ಗೌರವ ಸಂಚಾಲಕಿ ಕೆ. ನೀಲಾ, ಸಂಚಾಲಕ ಲೋಹಿತ್, ಸಹ ಸಂಚಾಲಕಿ ಚಂದಮ್ಮ, ಸದಸ್ಯರಾದ ಕಮಲಾಬಾಯಿ, ನಾಗಮ್ಮ, ಈರಪ್ಪ, ಕವಿತಾ, ದಲಿತ ಹಕ್ಕುಗಳ ಸಮಿತಿಯ ಸಹ ಸಂಚಾಲಕ ಪಾಂಡುರಂಗ ಮಾವಿನಕರ್, ಸಿಐಟಿಯು ಕಾರ್ಮಿಕ ಸಂಘಟನೆಯ ಖಜಾಂಚಿ ನಾಗಯ್ಯಸ್ವಾಮಿ, ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷೆ ಲವಿತ್ರ ವಸ್ತ್ರದ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.