ADVERTISEMENT

ಜಾತಿವಾರು ಸಮೀಕ್ಷೆ ತಕ್ಷಣ ಬಿಡುಗಡೆಗೆ ಒತ್ತಾಯ

ಸಿದ್ದರಾಮಯ್ಯ ನೇತೃತ್ವದಲ್ಲಿ ಅ 12ರಂದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 7:46 IST
Last Updated 7 ಅಕ್ಟೋಬರ್ 2021, 7:46 IST
ಮಹಾಂತೇಶ ಕೌಲಗಿ
ಮಹಾಂತೇಶ ಕೌಲಗಿ   

ಕಲಬುರ್ಗಿ: ಎಚ್‌. ಕಾಂತರಾಜು ಆಯೋಗದ ನೇತೃತ್ವದಲ್ಲಿ ನಡೆದಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿವಾರು ಸಮೀಕ್ಷೆಯ ವರದಿಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಇದೇ 12ರಂದು ನಗರದ ಜಗತ್ ವೃತ್ತದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಮಹಾಂತೇಶ ಎಸ್‌. ಕೌಲಗಿ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇದಕ್ಕೂ ಮುನ್ನ ಎಸ್‌ವಿಪಿ ವೃತ್ತದಿಂದ ಜಗತ್ ವೃತ್ತದವರೆಗೆ ಬೃಹತ್ ಮೆರವಣಿಗೆ ನಡೆಯಲಿದೆ. ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ಸೇರಿದಂತೆ ಜಿಲ್ಲೆಯ ಮುಖಂಡರು ಭಾಗವಹಿಸಲಿದ್ದಾರೆ ಎಂದರು.

2ಎ ಮೀಸಲಾತಿ ಪಟ್ಟಿಗೆ ಯಾವುದೇ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಎಲ್ಲ ರೀತಿಯಿಂದಲೂ ಮುಂದುವರೆದ ಪ್ರಬಲವಾಗಿರುವ ಜಾತಿಗಳನ್ನು ಸೇರಿಸಬಾರದು. ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವಾಗ ಸುಭಾಷ್ ಆಡಿ ಅವರು ಉನ್ನತ ಮಟ್ಟದ ಸಮಿತಿಯನ್ನು ರಚಿಸುವ ಅಗತ್ಯವೇನಿತ್ತು? ಈ ಕೂಡಲೇ ಸಮಿತಿಯನ್ನು ರದ್ದು‍ಪಡಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಗೊಂಡ ಪರ್ಯಾಯ ಪದ ಕುರುಬ ಮತ್ತು ಕೋಲಿ ಸಮಾಜವನ್ನು ಎಸ್‌.ಟಿ.ಗೆ ಸೇರಿಸುತ್ತೇವೆಂದು ನೀಡಿರುವ ಆಶ್ವಾಸನೆಯನ್ನು ಕೂಡಲೇ ಈಡೇರಿಸಬೇಕು. ವಿಧಾನಸಭೆ ಮತ್ತು ಲೋಕಸಭೆಯಲ್ಲಿಯೂ ಎಸ್ಸಿ, ಎಸ್ಟಿಗೆ ಮೀಸಲಿಟ್ಟಂತೆ ಹಿಂದುಳಿದ ವರ್ಗಗಳಿಗೂ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಮೀಸಲಾತಿ ನೀಡಬೇಕು ಎಂದು ಕೌಲಗಿ ಒತ್ತಾಯಿಸಿದರು.

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಗಳು, ವಿದ್ಯಾಸಿರಿ, ಕಾನೂನು ಪದವೀಧರರ ಶಿಷ್ಯವೇತನ, ಐಎಎಸ್‌ ಮತ್ತು ಕೆಎಎಸ್‌ ತರಬೇತಿ ಕಾರ್ಯಕ್ರಮ, ವಿದೇಶಿ ವ್ಯಾಸಂಗ ವೇತನ ಹಾಗೂ ಇತರ ಯೋಜನೆಗಳು ಸ್ಥಗಿತಗೊಂಡಿವೆ. ಇವುಗಳಿಗೆ ತಕ್ಷಣ ಅಗತ್ಯವಿರುವಷ್ಟು ಹಣ ಬಿಡುಗಡೆ ಮಾಡಬೇಕು ಎಂದರು.

ಹಿಂದುಳಿದ ವರ್ಗಗಳ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಆಸಕ್ತಿ ತೋರಿಸುತ್ತಿಲ್ಲ. ಇವುಗಳ ಜೊತೆಗೆ ಇನ್ನೂ ಅನೇಕ ಹಿಂದುಳಿದ ವರ್ಗಗಳ ಅಭಿವೃದ್ಧಿ ಕಾರ್ಯಗಳನ್ನು ಪುನರಾರಂಭಿಸಬೇಕು ಎಂದು ಅವರು ಒತ್ತಾಯಿಸಿದರು.

ಒಕ್ಕೂಟದ ಕಾರ್ಯಾಧ್ಯಕ್ಷ ಲಚ್ಚಪ್ಪ ಎಸ್‌. ಜಮಾದಾರ, ನಿಂಗಪ್ಪ ಹೇರೂರ, ಬಸಯ್ಯ ಗುತ್ತೇದಾರ, ಬಸವರಾಜ, ಹಣಮಂತ ಆಲೂರ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.