ADVERTISEMENT

ಮೂರನೇ ದಿನಕ್ಕೆ ಅನಿರ್ದಿಷ್ಟ ಧರಣಿ

ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಾಪಸಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 2:04 IST
Last Updated 18 ಡಿಸೆಂಬರ್ 2020, 2:04 IST
ಮೂರು ಕೃಷಿ ಕಾಯ್ದೆಗಳು, ಗೋಹತ್ಯೆ ನಿಷೇಧ ಮಸೂದೆ ವಾಪಸಿಗೆ ಒತ್ತಾಯಿಸಿ ಜನವಾದಿ ಮಹಿಳಾ ಸಂಘಟನೆ ಕಾರ್ಯಕರ್ತರು ಕಲಬುರ್ಗಿಯ ಜಗತ್ ವೃತ್ತದಲ್ಲಿ ನರೇಂದ್ರ ಮೋದಿ, ಬಿ.ಎಸ್‌.ಯಡಿಯೂರಪ್ಪ, ಮುಕೇಶ್ ಅಂಬಾನಿ, ಗೌತಮ್ ಅದಾನಿ ಭಾವಚಿತ್ರಕ್ಕೆ ಮಸಿ ಬಳಿದು ಪ್ರತಿಭಟನೆ ನಡೆಸಿದರು
ಮೂರು ಕೃಷಿ ಕಾಯ್ದೆಗಳು, ಗೋಹತ್ಯೆ ನಿಷೇಧ ಮಸೂದೆ ವಾಪಸಿಗೆ ಒತ್ತಾಯಿಸಿ ಜನವಾದಿ ಮಹಿಳಾ ಸಂಘಟನೆ ಕಾರ್ಯಕರ್ತರು ಕಲಬುರ್ಗಿಯ ಜಗತ್ ವೃತ್ತದಲ್ಲಿ ನರೇಂದ್ರ ಮೋದಿ, ಬಿ.ಎಸ್‌.ಯಡಿಯೂರಪ್ಪ, ಮುಕೇಶ್ ಅಂಬಾನಿ, ಗೌತಮ್ ಅದಾನಿ ಭಾವಚಿತ್ರಕ್ಕೆ ಮಸಿ ಬಳಿದು ಪ್ರತಿಭಟನೆ ನಡೆಸಿದರು   

ಕಲಬುರ್ಗಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಜನವಾದಿ ಮಹಿಳಾ ಸಂಘಟನೆ, ಕರ್ನಾಟಕ ಪ್ರಾಂತ ಕೃಷಿ ಕಾರ್ಮಿಕರ ಸಂಘಟನೆ ನಗರದ ಜಗತ್ ವೃತ್ತದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಆಯೋಜಿಸಿರುವ ಅನಿರ್ದಿಷ್ಟ ಅವಧಿಯ ಧರಣಿ ಗುರುವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಜನವಾದಿ ಮಹಿಳಾ ಸಂಘಟನೆಯ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಉದ್ಯಮಿಗಳಾದ ಮುಕೇಶ್ ಅಂಬಾನಿ, ಗೌತಮ ಅದಾನಿ ಅವರ ಚಿತ್ರಗಳಿಗೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ವಿರೋಧಿ ಮೂರು ಕಾಯ್ದೆಗಳನ್ನು ರದ್ದುಗೊಳಿಸಬೇಕು, ವಿದ್ಯುತ್ ಮಸೂದೆ 2020 ರದ್ದುಗೊಳಿಸಬೇಕು, ಭೂಸುಧಾರಣೆ ಮಸೂದೆ ರದ್ದಾಗಬೇಕು, ಗೋಹತ್ಯಾ ನಿಷೇಧ ಮಸೂದೆ ರದ್ದಾಗಬೇಕು, ತೊಗರಿ ಬೆಲೆಯನ್ನು ಕ್ವಿಂಟಲ್‌ಗೆ ₹ 8 ಸಾವಿರ ದರದಲ್ಲಿ ಖರೀದಿ ಮಾಡಭೇಕು. ತೊಗರಿ ಖದೀದಿ ಕೇಂದ್ರಗಳನ್ನು ಕೂಡಲೇ ತೆರೆದು ಎಲ್ಲರ ರೈತರ ತೊಗರಿ ಖದೀದಿಗೆ ಕ್ರಮ ವಹಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಕೆ. ನೀಲಾ, ‘ಸ್ವಂತಕ್ಕೆ ಯಾವ ಆರ್ಥಿಕ ಆಸರೆಯೂ ಇಲ್ಲದೆ ಕುಟುಂಬಕ್ಕೆ ಮತ್ತು ಕೃಷಿಯ ಮೂಲಕ ಸಮಾಜಕ್ಕೆ ದುಡಿಯುತ್ತಿರುವ ಮಹಿಳೆಯರು ಕೇಂದ್ರ ಸರ್ಕಾರ ತಂದಿರುವ ಮೂರು ಕೃಷಿ ಕಾಯ್ದೆಗಳ ಮೂಲಕ ಸಂಪೂರ್ಣ ಬೀದಿ ಪಾಲಾಗಲಿದ್ದಾರೆ. ದೇಶದ ಸಂಪತ್ತನ್ನು ಕಾರ್ಪೋರೇಟುಗಳಿಗೆ ಧಾರೆ ಎರೆದಿರುವ ಕೇಂದ್ರ ಸರ್ಕಾರ ಕೃಷಿಯನ್ನೂ ಅವರ ಕೈವಶ ಮಾಡುತ್ತಿರುವುದು ದೇಶಕ್ಕೆ ಎಸಗುವ ದ್ರೋಹವಲ್ಲದೆ ಮತ್ತೇನು? ಈವರೆಗೆ ಹೋರಾಟದಲ್ಲಿ 20 ರೈತರು ಮರಣ ಹೊಂದಿರುವರು. ಆದರೂ ಸರ್ಕಾರ ತನ್ನ ಫ್ಯಾಸಿಸ್ಟ್ ಕ್ರೌರ್ಯದಿಂದ ಹಿಂದೆ ಸರಿಯುತ್ತಿಲ್ಲ. ಇದು ದೇಶ ಕಾಯುವ ಸರ್ಕಾರವಲ್ಲ. ರೈತರನ್ನು ಕೊಂದು ಕಾರ್ಪೋರೇಟುಗಳನ್ನು ಕಾಯುವ ಚೌಕಿದಾರ ಸರ್ಕಾರವಾಗಿದೆ’ ಎಂದು ಟೀಕಿಸಿದರು.

ಅಮೀನಾ ಬೇಗಂ, ನಂದಾದೇವಿ ಮಂಗೊಂಡಿ, ರೀನಾ ಡಿಸೋಜಾ, ಚಂದಮ್ಮ ಗೋಳಾ, ಜಗದೇವಿ ನೂಲಕರ್, ಶಹನಾಜ್, ಲವಿತ್ರ ವಸ್ತ್ರದ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.